ಮಾದಾರ ಚೆನ್ನಯ್ಯ ಗುರುಪೀಠದ ಹಿಂಭಾಗದ ವಿಶಾಲ ಪ್ರದೇಶದಲ್ಲಿ ಬೃಹತ್ ಪೆಂಡಾಲ್ ನಿರ್ಮಾಣ ಮಾಡಿ ಆಯೋಜಿಸಿರುವ ಅಭಿಮಾನೋತ್ಸವ ಎಂಬ ವಿನೂತನ ಕಾರ್ಯಕ್ರಮಕ್ಕೆ ಆಗಮಿಸುವ ಅಭಿಮಾನಿಗಳು, ಕಾರ್ಯಕರ್ತರ ವಾಹನಗಳೂ ಸೇರಿದಂತೆ ವಿಐಪಿ, ವಿವಿಐಪಿಗಳ ವಾಹನ ನಿಲುಗಡೆಯ ಸ್ಥಳಗಳಿಗೆ ನಾಡಿನ ಪ್ರಮುಖ ನದಿಗಳ ಹೆಸರುಗಳನ್ನು ಸೂಚಿಸುವ ಮೂಲಕ ಪೋಲೀಸ್ ಇಲಾಖೆ ನಾಡಿನ ಹಿರಿಮೆಯನ್ನು ಸಾರುವ ನಿಟ್ಟಿನಲ್ಲಿ ಶ್ಲಾಘನೀಯ ಕೆಲಸಕ್ಕೆ ಮುಂದಾಗಿದೆ.
ಜಡೇಕುಂಟೆ ಮಂಜುನಾಥ್
ಕನ್ನಡಪ್ರಭವಾರ್ತೆ ಚಿತ್ರದುರ್ಗಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜಕಾರಣಕ್ಕೆ ಬಂದು 50 ವರ್ಷ ತುಂಬಿದ ಹಿನ್ನೆಲೆ ಚಿತ್ರದುರ್ಗದ ದಾವಣಗೆರೆ ರಸ್ತೆಯ ಶ್ರೀ ಮಾದಾರ ಚೆನ್ನಯ್ಯ ಗುರುಪೀಠದ ಹಿಂಭಾಗದ ವಿಶಾಲ ಪ್ರದೇಶದಲ್ಲಿ ಬೃಹತ್ ಪೆಂಡಾಲ್ ನಿರ್ಮಾಣ ಮಾಡಿ ಆಯೋಜಿಸಿರುವ ಅಭಿಮಾನೋತ್ಸವ ಎಂಬ ವಿನೂತನ ಕಾರ್ಯಕ್ರಮಕ್ಕೆ ಆಗಮಿಸುವ ಅಭಿಮಾನಿಗಳು, ಕಾರ್ಯಕರ್ತರ ವಾಹನಗಳೂ ಸೇರಿದಂತೆ ವಿಐಪಿ, ವಿವಿಐಪಿಗಳ ವಾಹನ ನಿಲುಗಡೆಯ ಸ್ಥಳಗಳಿಗೆ ನಾಡಿನ ಪ್ರಮುಖ ನದಿಗಳ ಹೆಸರುಗಳನ್ನು ಸೂಚಿಸುವ ಮೂಲಕ ಪೋಲೀಸ್ ಇಲಾಖೆ ನಾಡಿನ ಹಿರಿಮೆಯನ್ನು ಸಾರುವ ನಿಟ್ಟಿನಲ್ಲಿ ಶ್ಲಾಘನೀಯ ಕೆಲಸಕ್ಕೆ ಮುಂದಾಗಿದೆ.
ದಾವಣಗೆರೆ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಹಾವೇರಿ ಕಡೆಯಿಂದ ಬರುವ ವಾಹನಗಳಿಗೆ ದಾವಣಗೆರೆ ರಸ್ತೆಯ ಮಡಿವಾಳ ಮಾಚಿದೇವ ಮಠದ ಕಡೆಗೆ ವೇದಾವತಿ ವಾಹನ ನಿಲುಗಡೆ ಪ್ರದೇಶ ಎಂದು ಗುರುತಿಸಲಾಗಿದೆ.ಬೃಹತ್ ವೇದಿಕೆ ಬಲಭಾಗದ ಹಿಂಭಾಗದಲ್ಲಿ ವಿಐಪಿ, ವಿವಿಐಪಿಗಳಿಗೆ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಈ ಪ್ರದೇಶಕ್ಕೆ ಕಾವೇರಿ ಎಂದು ನಾಮಕರಣ ಮಾಡಲಾಗಿದೆ.
ಬೆಂಗಳೂರು, ತುಮಕೂರು, ಹಾಸನ, ಮಂಡ್ಯ, ಮೈಸೂರು ಕಡೆಗಳಿಂದ ಬರುವ ವಾಹನಗಳಿಗೆ ಎಸ್ ಜೆ ಎಂ ಹೆಲಿಪ್ಯಾಡ್ ಹಿಂಭಾಗದ ಮೂರು ಎಕರೆ ಪ್ರದೇಶದಲ್ಲಿ ಭದ್ರಾ ಹೆಸರಿನ ನಿಲುಗಡೆ ಪ್ರದೇಶವನ್ನು ಮೀಸಲಿಡಲಾಗಿದೆ.ಶಿವಮೊಗ್ಗ, ಚಿಕ್ಕಮಗಳೂರು, ಮಂಗಳೂರು ಕಡೆಗಳಿಂದ ಬರುವ ವಾಹನಗಳಿಗೆ ಈಚಲನಾಗೇನಹಳ್ಳಿ ಹತ್ತಿರ ತುಂಗಾ ಹೆಸರಿನ ನಿಲುಗಡೆ ಪ್ರದೇಶದಲ್ಲಿ ವ್ಯವಸ್ಥೆ ಮಾಡಲಾಗಿದೆ.
ವೇದಿಕೆ ಹತ್ತಿರವೇ ಹೆಲಿಪ್ಯಾಡ್:ಕೇಂದ್ರ ಗೃಹಮಂತ್ರಿ ಅಮಿತ್ ಶಾ ಅವರು ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ಮುಗಿಸಿ ನೇರವಾಗಿ ಶಿವಮೊಗ್ಗದ ವಿಮಾನ ನಿಲ್ಧಾಣಕ್ಕೆ ಬಂದಿಳಿದು ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಚಿತ್ರದುರ್ಗ ಪ್ರೇವೇಶಿಸಲಿದ್ದಾರೆ. ಇದಕ್ಕಾಗಿಯೇ ಮಾದಾರ ಚೆನ್ನಯ್ಯ ಮಠದ ಹತ್ತಿರ ಅಂದರೆ ಹಿಂಭಾಗದಲ್ಲಿ ವ್ಯವಸ್ಥೆ ಮಾಡಲಾಗಿದ್ದು. ಯಾವುದೇ ಸಾರ್ವಜನಿಕ ಕಿರಿಕಿರಿಗೆ ಅವಕಾಶ ನೀಡದೇ ನೇರವಾಗಿ ವೇದಿಕೆಗೆ ಕರೆತರಲಾಗುವುದು ಎಂದು ಸಂಘಟಕರು ಹೇಳಿದ್ದಾರೆ.
ಚಳ್ಳಕೆರೆ ಗೇಟ್ ಹತ್ತಿರ ಮುರುಘರಾಜೇಂದ್ರ ಕ್ರೀಡಾಂಗಣ ಮತ್ತು ಎಸ್ ಜೆ ಎಂ ಕ್ರೀಡಾಂಗಣ ಎರಡು ಹೆಲಿಪ್ಯಾಡ್ ಗಳು ಇದ್ದರೂ ಹೊಸದಾಗಿ ನಿರ್ಮಿಸಿರುವ ವೇದಿಕೆ ಹಿಂಭಾಗದ ಹೆಲಿಪ್ಯಾಡ್ ನಲ್ಲಿ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಬಂದಿಳಿಯಲಿದ್ದಾರೆ.ಬೃಹತ್ ಕಟೌಟುಗಳು:
ಯಡಿಯೂರಪ್ಪ ಅವರ ಬಣ್ಣ ಬಣ್ಣದ ಕಟೌಟ್ ಗಳು, ಪ್ಲೆಕ್ಸ್‌ಗಳು, ಕೇಸರಿ ಬಣ್ಣದಲ್ಲಿ ವಿವಿಧ ಅಲಂಕಾರಗಳನ್ನು ಮಾಡಲಾಗಿದೆ. ಯಡಿಯೂರಪ್ಪ ಅವರ ಜೊತೆಗೆ ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ, ಬಿ.ವೈ.ವಿಜಯೇಂದ್ರ ಅವರ ಕಟೌಟುಗಳು ಎಲ್ಲರ ಗಮನಸೆಳೆಯುತ್ತಿವೆ. ಮಾದಾರ ಚೆನ್ನಯ್ಯ ಗುರುಪೀಠದ ಸರ್ವಿಸ್ ರಸ್ತೆಯಿಂದ ಸೀದಾ ವೇದಿಕೆಗೆ ಹೋಗಲು ಮುಖ್ಯ ದ್ವಾರವನ್ನು ಹೊಕ್ಕು ಒಳಹೋಗುತ್ತಿದ್ದರೆ ಯಾವುದೋ ಬೇರೆ ಲೋಕಕ್ಕೆ ಹೋಗುತ್ತಿದ್ದೇವಾ ಎಂಬಷ್ಟರ ಮಟ್ಟಿಗೆ ವಿಜೃಂಭಣೆಯಿಂದ ಅಲಕಾಂರ ಮಾಡಲಾಗಿದೆ.