ಕೊಟಗೆರೆ ಸರ್ಕಾರಿ ಆಸ್ಪತ್ರೆ ಬಳಿ ಖಾಸಗಿ ವಾಹನಗಳ ಪಾರ್ಕಿಂಗ್‌: ಆ್ಯಂಬುಲೆನ್ಸ್ ಹೋಗಲು ದಾರಿ ಯಾವುದಯ್ಯಾ?

| Published : Nov 17 2024, 01:18 AM IST

ಕೊಟಗೆರೆ ಸರ್ಕಾರಿ ಆಸ್ಪತ್ರೆ ಬಳಿ ಖಾಸಗಿ ವಾಹನಗಳ ಪಾರ್ಕಿಂಗ್‌: ಆ್ಯಂಬುಲೆನ್ಸ್ ಹೋಗಲು ದಾರಿ ಯಾವುದಯ್ಯಾ?
Share this Article
  • FB
  • TW
  • Linkdin
  • Email

ಸಾರಾಂಶ

ಕೊರಟಗೆರೆಯ ಸರ್ಕಾರಿ ಆಸ್ಪತ್ರೆ ಅವರಣ ಖಾಸಗಿ ವಾಹನಗಳ ನಿಲ್ದಾಣವಾಗಿದ್ದು, ಪ್ರತಿನಿತ್ಯ ಆಸ್ಪತ್ರೆಗೆ ಬರುವ ಆ್ಯಂಬುಲೆನ್ಸ್‌ಗಳಿಗೆ ದಾರಿ ಇಲ್ಲದೆ ರೋಗಿಗಳಿಗೆ ತೊಂದರೆ ಉಂಟಾಗುತ್ತಿದೆ. ಬೈಕ್ ನಿಲ್ಲಿಸುವ ವಾಹನ ಸವಾರರಿಗೆ ಕಡಿವಾಣ ಹಾಕಬೇಕಿದೆ.

ಪ್ರತಿನಿತ್ಯ ಆಸ್ಪತ್ರೆ ಬಳಿ ೧೦೦ಕ್ಕೂ ಅಧಿಕ ಕೆಲಸಕ್ಕೆ ಹೋಗುವವರ ಬೈಕ್‌ಗಳ ನಿಲುಗಡೆ । ಆ್ಯಂಬುಲೆನ್ಸ್‌ ಸಂಚಾರಕ್ಕೆ ಅಡ್ಡಿ

ಕನ್ನಡಪ್ರಭ ವಾರ್ತೆ ಕೊರಟಗೆರೆ

ಸರ್ಕಾರಿ ಆಸ್ಪತ್ರೆ ಅವರಣ ಖಾಸಗಿ ವಾಹನಗಳ ನಿಲ್ದಾಣವಾಗಿದ್ದು, ಪ್ರತಿನಿತ್ಯ ಆಸ್ಪತ್ರೆಗೆ ಬರುವ ಆ್ಯಂಬುಲೆನ್ಸ್‌ಗಳಿಗೆ ದಾರಿ ಇಲ್ಲದೆ ರೋಗಿಗಳಿಗೆ ತೊಂದರೆ ಉಂಟಾಗುತ್ತಿದೆ. ಬೈಕ್ ನಿಲ್ಲಿಸುವ ವಾಹನ ಸವಾರರಿಗೆ ಕಡಿವಾಣ ಹಾಕಬೇಕಿದೆ.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣ ಕಿರಿದಾಗಿದ್ದು, ಇಲ್ಲಿಗೆ ತಾಲೂಕಿನ ನಾಲ್ಕು ಹೋಬಳಿಗಳಿಂದ ತುರ್ತು ಚಿಕಿತ್ಸೆಗಾಗಿ ನೂರು ರೋಗಿಗಳು ಹಾಗೂ ಅಪಘಾತಕ್ಕೆ ಒಳಗಾಗದವರನ್ನು ಹೊತ್ತು ಆ್ಯಂಬುಲೆನ್ಸ್‌ಗಳು ಆಸ್ಪತ್ರೆಗೆ ಬರುತ್ತಿವೆ. ಆದರೆ ಆಸ್ಪತ್ರೆ ಅವರಣದಲ್ಲಿ ಖಾಸಗಿ ಬೈಕ್, ವಾಹನಗಳು ೧೦೦ಕ್ಕೂ ಅಧಿಕ ಸಂಖ್ಯೆಯಲ್ಲಿ ನಿಲ್ಲಿಸುತ್ತಿರುವ ಪರಿಣಾಮ ಆ್ಯಂಬುಲೆನ್ಸ್‌ ಸುಗಮ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ.

ಆಸ್ಪತ್ರೆಯ ಅವರಣದಲ್ಲಿ ಖಾಸಗಿ ದ್ವಿಚಕ್ರ ವಾಹನಗಳ ನಿಲುಗಡೆಗೆ ನಿಷೇಧಿಸಲಾಗಿದೆ. ಇಲ್ಲಿನ ಸೆಕ್ಯೂರಿಟಿಗಳು ಇಲ್ಲಿ ವಾಹನಗಳನ್ನು ನಿಲ್ಲಿಸಬೇಡಿ ಎಂದು ಹೇಳಿದರೆ ಸೆಕ್ಯೂರಿಟಿಗಳ ಮೇಲೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಾರೆ ಎಂದು ಇಲ್ಲಿನ ಸಿಬ್ಬಂದಿ ಹೇಳುತ್ತಾರೆ. ಸರ್ಕಾರಿ ಆಸ್ಪತ್ರೆಗೆ ಒಬ್ಬರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದರೆ ಇಂತಹ ಸಮಸ್ಯೆಗಳ ಜೊತೆಗೆ ರೋಗಿಗಳು ಬಂದಾಗ ಸಣ್ಣಪುಟ್ಟ ಜಗಳ ಆಗುವುದನ್ನು ನಿಯಂತ್ರಿಸಬಹುದು ಎಂದು ಸಾರ್ವಜನಿಕರು ಹೇಳಿದ್ದಾರೆ.

ಬೈಕ್‌ ನಿಲ್ಲಿಸುವವರ ಮೇಲೆ ಕ್ರಮ ಕೈಗೊಳ್ಳಿ

ಪ್ರತಿನಿತ್ಯ ಕೊರಟಗೆರೆ ತಾಲೂಕಿನಿಂದ ಬೆಂಗಳೂರು, ತುಮಕೂರು ನಗರಗಳ ಫ್ಯಾಕ್ಟರಿಗಳಿಗೆ ಹೋಗುವ ಕಾರ್ಮಿಕರು ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಹಾಗೂ ತಾಲೂಕು ಕಚೇರಿಯ ಅವರಣದಲ್ಲಿ ದ್ವಿಚಕ್ರ ವಾಹನಗಳನ್ನು ನಿಲುಗಡೆ ಮಾಡುತ್ತಿದ್ದು, ಪ್ರತಿನಿತ್ಯ ಆಸ್ಪತ್ರೆಗೆ ರೋಗಿಗಳನ್ನ ಕರೆತರುವ ವಾಹನಗಳನ್ನು ನಿಲ್ಲಿಸಲು ಜಾಗವಿಲ್ಲದೆ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ನಿಲ್ಲಿಸುವ ಖಾಸಗಿ ಬೈಕ್ ವಾಹನಗಳನ್ನ ನಿಲ್ಲಿಸುವವರ ಮೇಲೆ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕಿದೆ.

ತುಮಕೂರು, ಬೆಂಗಳೂರಿನ ನಗರಕ್ಕೆ ಹೋಗುವ ಕಾರ್ಮಿಕರು ಆಸ್ಪತ್ರೆಯ ಅವರಣದಲ್ಲಿ ತಮ್ಮ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ ಹೋಗುತ್ತಿದ್ದು, ಇಲ್ಲಿಗೆ ಬರುವ ಆ್ಯಂಬುಲೆನ್ಸ್‌ಗಳನ್ನು ನಿಲ್ಲಿಸಲು ಜಾಗ ಇಲ್ಲದಂತೆ ವಾಹನಗಳನ್ನು ನಿಲ್ಲಿಸುತ್ತಾರೆ. ನಮ್ಮ ಸಿಬ್ಬಂದಿ ಅನೇಕ ಬಾರಿ ವಾಹನ ಸವಾರಿಗೆ ತಿಳಿ ಹೇಳಿದರೆ ಅವರ ಮೇಲೆ ಗಲಾಟೆ ಮಾಡುತ್ತಾರೆ.

ಡಾ.ಲಕ್ಷ್ಮೀಕಾಂತ್, ಮುಖ್ಯ ವೈದ್ಯಾಧಿಕಾರಿ, ಸಾರ್ವಜನಿಕ ಆಸ್ಪತ್ರೆ, ಕೊರಟಗೆರೆ.

ಪ್ರತಿನಿತ್ಯ ಖಾಸಗಿ ದ್ವಿಚಕ್ರ ವಾಹನಗಳನ್ನು ಇಲ್ಲಿ ನಿಲ್ಲಿಸಿ ಹೊರಗಡೆ ಕೆಲಸಕ್ಕೆ ಹೋಗುತ್ತಾರೆ. ಇದನ್ನು ಪ್ರಶ್ನೆ ಮಾಡಿದರೆ ಗಲಾಟೆ ಮಾಡ್ತಾರೆ. ಆಸ್ಪತ್ರೆಯ ರೋಗಿಗಳನ್ನು ಕರೆತರುವ ವಾಹನಗಳಿಗಿಂತ ಪಾರ್ಕಿಂಗ್ ಮಾಡಿ ಹೋಗುವ ವಾಹಗಳೇ ಹೆಚ್ಚಾಗಿದೆ.

ಕುಮಾರ್, ಪಾರ್ಕಿಂಗ್ ಸೆಕ್ಯೂರಿಟಿ.

ಆಸ್ಪತ್ರೆಗೆ ಬರುವ ಆಪಘಾತ ಸೇರಿದಂತೆ ಇತರ ತುರ್ತು ರೋಗಿಗಳನ್ನು ತುಮಕೂರಿಗೆ ರವಾನೆ ಮಾಡಲು ಆ್ಯಂಬುಲೆನ್ಸ್ ಮೂಲಕ ಕರೆದುಕೊಂಡು ಹೋಗಬೇಕು, ಆದರೆ ಆಸ್ಪತ್ರೆಯ ಅವರಣದಲ್ಲಿ ಖಾಸಗಿ ವ್ಯಕ್ತಿಗಳ ಬೈಕ್‌ಗಳು ನಿಲ್ಲಿಸುವುದರಿಂದ ಆ್ಯಂಬುಲೆನ್ಸ್ ಹೊರಗಡೆ ತೆಗೆಯಲು ಹರಸಾಹಸ ಪಡಬೇಕು.

ಮುದ್ದಯ್ಯ ಆ್ಯಂಬುಲೆನ್ಸ್ ಚಾಲಕ.