ಸಾರಾಂಶ
ಉಡುಪಿಯ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ ಮಂಗಳವಾರ ಸಂವಿಧಾನ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಕಾನೂನಿನ ನಿಯಮ, ಅಧಿಕಾರಗಳ ಪ್ರತ್ಯೇಕತೆ, ನ್ಯಾಯಿಕ ಸ್ವಾತಂತ್ರ್ಯ, ನ್ಯಾಯಿಕ ವಿಮರ್ಶೆ, ಪ್ರಜಾಸತಾತ್ಮಕ ಗಣತಂತ್ರ, ಸಮಾನತೆ ಇವುಗಳು ಭಾರತದ ಸಂವಿಧಾನದ ಮೂಲ ತತ್ವಗಳಾಗಿದ್ದು, ಇವುಗಳನ್ನು ದೇಶದ ಸರ್ವೋಚ್ಚ ಶಾಸನೀಯ ಅಂಗವಾದ ಸಂಸತ್ತು ಸಹ ತಿದ್ದುಪಡಿಯ ಮೂಲಕ ಬದಲಾಯಿಸಲು ಸಾಧ್ಯವಿಲ್ಲ ಎಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕಾನೂನು ಸ್ನಾತಕೋತ್ತರ ವಿಭಾಗದ ನಿವೃತ್ತ ಮುಖ್ಯಸ್ಥ ಪ್ರೊ.(ಡಾ.) ರಾಜಶೇಖರ್ ಹೇಳಿದರು.ಅವರು ಉಡುಪಿಯ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿ (ಆನ್‌ಲೈನ್) ಮಾತನಾಡಿದರು.ಸಂವಿಧಾನದ ಮೌಲ್ಯಗಳ ಬಗ್ಗೆ ಸಾಮಾನ್ಯ ಜನರಲ್ಲಿ ಜಾಗೃತಿ ಮೂಡಿಸುವ ಜವಾಬ್ದಾರಿ ಕಾನೂನು ವಿದ್ಯಾರ್ಥಿಗಳ ಮೇಲೆ ಇದೆ ಎಂದು ಹೇಳಿದರು.ಕಾಲೇಜಿನ ನಿರ್ದೇಶಕಿ ಪ್ರೊ. (ಡಾ.) ನಿರ್ಮಲಾ ಕುಮಾರಿ ಕೆ. ಗೌರವ ಅತಿಥಿಗಳಾಗಿದ್ದರು. ಕಾಲೇಜಿನ ಪ್ರಾಂಶುಪಾಲ ಪ್ರೊ. (ಡಾ.) ರಘುನಾಥ್ ಕೆ.ಎಸ್. ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ಸಂವಿಧಾನ ದಿನದ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸಾಂಸ್ಕೃತಿಕ ವಿಭಾಗದ ಸಂಯೋಜಕಿ ಡಾ. ಪ್ರೀತಿ ಹರೀಶ್ ರಾಜ್ ಮತ್ತು ಎನ್‌ಎಸ್‌ಎಸ್ ಘಟಕ ಸಂಯೋಜನಾಧಿಕಾರಿ ಡಾ. ನವೀನ್ ಚಂದ್ರ ಸಿ.ಬಿ. ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಸಂವಿಧಾನದ ಪೂರ್ವ ಪೀಠಿಕೆಯ ಪ್ರತಿಜ್ಞಾ ವಿಧಿಯನ್ನು ಪಡೆಯಲಾಯಿತು. ವಿಲ್ಮಾ ಡಿ. ಅಲ್ಮೇಡಾ ಸ್ವಾಗತಿಸಿದರು. ರಕ್ಷಿತಾ ಶಿವಾಜಿ ಘೋರ್ಪಡೆ ಅತಿಥಿಗಳನ್ನು ಪರಿಚಯಿಸಿದರು. ಇಶಾ ಅಲೈನಾ ವಂದಿಸಿದರು. ವೈಷ್ಣವಿ ನಿರೂಪಿಸಿದರು.