ಸಾರಾಂಶ
ಕೆ.ಆರ್.ಪೇಟೆ: ಯುವಕರು ಕ್ರೀಡಾ ಮನೋಭಾವದಿಂದ ಆಟಗಳಲ್ಲಿ ಪಾಲ್ಗೊಂಡಾಗ ಮಾತ್ರ ಉತ್ತಮ ಕ್ರೀಡಾಪಟುವಾಗಲು ಸಾಧ್ಯ ಎಂದು ಸಮಾಜ ಸೇವಕ ಆರ್‌ಟಿಓ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು. ಪಟ್ಟಣದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಕ್ರೀಡಾಂಗಣದಲ್ಲಿ ಸ್ಟೇಡಿಯಂ ಕ್ರಿಕೆಟ್ ಬಾಯ್ಸ್ ಆಯೋಜಿಸಿದ್ದ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕ್ರೀಡಾಪಟುಗಳಿಗೆ ಶುಭಹಾರೈಸಿ ಮಾತನಾಡಿ, ಕ್ರೀಡೆಯು ಶಿಸ್ತು ಮತ್ತು ಸಮಚಿತ್ತತೆಯನ್ನು ತಂದುಕೊಡುತ್ತದೆ. ಜೊತೆಗೆ ನಮ್ಮಲ್ಲಿರುವ ಸಣ್ಣತನವನ್ನು ನಿವಾರಿಸುತ್ತದೆ ಎಂದರು. ಕ್ರೀಡೆಯಲ್ಲಿ ದ್ವೇಷ ಹಾಗೂ ಹಿಂಸೆಗಳಿಗೆ ಅವಕಾಶವಿಲ್ಲ. ಕ್ರೀಡಾಪಟುಗಳು ಕ್ರೀಡೆಯಲ್ಲಿ ಆಸಕ್ತಿಯಿಂದ ಭಾಗವಹಿಸಿದರೆ ಶಿಸ್ತನ್ನು ಪಾಲಿಸಬಹುದು. ಯುವಕರ ನೆಚ್ಚಿನ ಆಟ ಎಂದರೆ ಅದು ಕ್ರಿಕೆಟ್. ನಮ್ಮ ದೇಶದ ಕ್ರಿಕೆಟ್ಟಿಗರು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಕೀರ್ತಿಪತಾಕೆಯನ್ನು ಎತ್ತರಕ್ಕೇರಿಸಿದ್ದಾರೆ ಎಂದು ತಿಳಿಸಿದರು. ಯುವಕರು ಕ್ರಿಕೆಟ್ ರೀತಿಯಲ್ಲಿಯೇ ಇತರ ಕ್ರೀಡೆಗಳ ಬಗ್ಗೆಯೂ ಗಮನ ಹರಿಸಬೇಕು. ಉತ್ತಮ ಕ್ರೀಡಾಪಟುವಾದರೆ ಹಣ ಮತ್ತು ಜನಪ್ರಿಯತೆ ಸಿಗುತ್ತದೆ. ಕ್ರೀಡೆ ಮೂಲಕ ಸ್ಟೇಡಿಯಂ ಕ್ರಿಕೆಟ್ ಬಾಯ್ಸ್ ಯುವಕರನ್ನು ಬೆಸೆಯುವ ಕೆಲಸ ಮಾಡುತ್ತಿರುವುದು ಶ್ಲಾಘನಿಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕ್ರೀಡಾಪಟುಗಳಾದ ರೋಹಿತ್, ಸುನಿಲ್, ಹರ್ಷ, ಚರಣ್, ಸೋನು, ಇಮ್ರಾನ್, ದಿಲೀಪ್, ರೂಬಿ, ವಕೀಲ ಅನ್ವೇಶ್, ಸಂತೋಷ, ಲೋಕೇಶ್, ಕುಮಾರ್, ರತನ್, ರಕ್ಷಿತ್, ಕಾರ್ತಿಕ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.