ಕನ್ನಡಪ್ರಭ ವಾರ್ತೆ ಮಳವಳ್ಳಿ
ರಕ್ತದ ಕೊರತೆ ನಿವಾರಿಸಲು ಜನಪರ ಕಾಳಜಿಯೊಂದಿಗೆ ಮಳವಳ್ಳಿ ಯುವಕರ ತಂಡ ಆಗಸ್ಟ್ 15ರಂದು ಹಮ್ಮಿಕೊಂಡಿರುವ ಬೃಹತ್ ರಕ್ತದಾನ ಶಿಬಿರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವ ಮೂಲಕ ಇತಿಹಾಸದ ಮುನ್ನುಡಿ ಬರೆಯಬೇಕು ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಕರೆ ನೀಡಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ರಕ್ತ ದಾನ ಶಿಬಿರದ ಪ್ರಚಾರ ಪತ್ರ ಬಿಡುಗಡೆಗೊಳಿಸಿ ಮಾತನಾಡಿ, ದೇಶ ಕಾಯುವ ಸೈನಿಕರಿಗೆ ಗೌರವ ಸಲ್ಲಿಸುವ ಹಿನ್ನೆಲೆಯಲ್ಲಿ ಮಳವಳ್ಳಿ ಯುವಕರ ತಂಡ ಹಲವು ವರ್ಷಗಳಿಂದ ಬೃಹತ್ ರಕ್ತದಾನ ಶಿಬಿರ ಆಯೋಜಿಸುತ್ತಾ ವರ್ಷದಿಂದ ವರ್ಷಕ್ಕೆ ತಮ್ಮ ಸೇವೆ ರಿಮೆಯನ್ನು ಹೆಚ್ಚಿಸುತ್ತಿದ್ದಾರೆ. ಸಾಮಾಜಿಕ ಸೇವೆ ಕಾರ್ಯದಲ್ಲಿ ತೊಡಗಿರುವ ಯುವಕರ ತಂಡಕ್ಕೆ ಜನಪ್ರತಿನಿಧಿಯಾಗಿ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ರಕ್ತದಾನವು ಅತ್ಯಂತ ಶ್ರೇಷ್ಠ ಹಾಗೂ ಜೀವ ಉಳಿಸುವ ಮಾನವೀಯ ಕಾರ್ಯವಾಗಿದೆ. ನೀವು ದಾನ ಮಾಡುವ ಪ್ರತಿಯೊಂದು ಹನಿ ರಕ್ತವು ಗಾಯಗೊಂಡವರಿಗೆ ಅಥವಾ ರೋಗಿಗಳಿಗೆ ಮರುಜೀವ ನೀಡುತ್ತದೆ. ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಕಣಗಳು ಉತ್ಪತ್ತಿಯಾಗುತ್ತವೆ. ಯಾವುದೇ ಆತಂಕಕ್ಕೆ ಒಳಗಾಗದೇ ಧೈರ್ಯವಂತರಾಗಿ ರಕ್ತನೀಡಿ ಮತ್ತೊಬ್ಬರ ಜೀವ ಉಳಿಸಬೇಕು ಎಂದರು.ರಕ್ತದ ಅವಶ್ಯಕತೆಯನ್ನು ಪೂರೈಸಲು ನೆರವಿನ ರೂಪದಲ್ಲಿ ರಕ್ತದಾನ ಶಿಬಿರ ಆಯೋಜನೆ ಮಾಡಲಾಗುತ್ತಿದೆ. ಈ ಮಹತ್ಕಾರ್ಯದಲ್ಲಿ ತಾಲೂಕು ಸೇರಿದಂತೆ ಹೊರ ಜಿಲ್ಲೆಯ ಯುವಕರು ಜಾತಿ, ಧರ್ಮ ರಾಜಕೀಯಯ ಎನ್ನದೇ ಸ್ವಯಂ ಪ್ರೇರಿತರಾಗಿ ಶಿಬಿರದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕೋರಿದರು.
ಈ ವೇಳೆ ಮುಖಂಡರಾದ ಕೆ.ಜೆ ದೇವರಾಜು, ಮಹೇಶ್‌ಕುಮಾರ್, ಅಂಬರೀಶ್ ಮಾರ್ಕಾಲು ಮಾದಪ್ಪ, ಸಂತೋಷ್, ವೇದಮೂರ್ತಿ, ದಯಾಶಂಕರ್, ದೊಡ್ಡಣ್ಣ, ದಿಲೀಪ್, ಬಸವರಾಜು, ಕೃಷ್ಣಮೂರ್ತಿ ಸೇರಿದಂತೆ ಮಳವಳ್ಳಿ ಟೀಮ್ ಯುವಕರ ತಂಡ ಇದ್ದರು.