ವಿದ್ಯೆಯೊಂದಿಗೆ ಕ್ರೀಡಾ ಚಟುವಟಿಕೆಗಳಲ್ಲೂ ಭಾಗವಹಿಸಿ: ಜಿ.ಬಿ. ಜ್ಯೋತಿ ಗಣೇಶ್

| Published : Oct 26 2024, 01:07 AM IST / Updated: Oct 26 2024, 01:08 AM IST

ವಿದ್ಯೆಯೊಂದಿಗೆ ಕ್ರೀಡಾ ಚಟುವಟಿಕೆಗಳಲ್ಲೂ ಭಾಗವಹಿಸಿ: ಜಿ.ಬಿ. ಜ್ಯೋತಿ ಗಣೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳು ವಿದ್ಯಾರ್ಥಿ ಜೀವನದಲ್ಲಿ ವಿದ್ಯೆಯೊಂದಿಗೆ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ನಗರ ಶಾಸಕ ಜಿ.ಬಿ. ಜ್ಯೋತಿ ಗಣೇಶ್ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಮಕ್ಕಳು ವಿದ್ಯಾರ್ಥಿ ಜೀವನದಲ್ಲಿ ವಿದ್ಯೆಯೊಂದಿಗೆ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ನಗರ ಶಾಸಕ ಜಿ.ಬಿ. ಜ್ಯೋತಿ ಗಣೇಶ್ ಕರೆ ನೀಡಿದರು.

ನಗರದ ವಿಜಯನಗರದಲ್ಲಿರುವ ಸರ್ವೋದಯ ಪ್ರೌಢಶಾಲೆ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಹಾಗೂ ಸರ್ವೋದಯ ವಿದ್ಯಾ ಸಂಸ್ಥೆಗಳ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಬಾಲಕ/ಬಾಲಕಿಯರ ಬೆಂಗಳೂರು ವಿಭಾಗ ಮಟ್ಟದ ಖೋ-ಖೋ ಪಂದ್ಯಾವಳಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಭಾಗವಹಿಸುವಿಕೆ ಮುಖ್ಯ ಎಂದು ತಿಳಿಸಿದರು.

ಜಿಲ್ಲೆಯ ಖೋ-ಖೋ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿ ಜಿಲ್ಲೆಗೆ ಗೌರವವನ್ನು ತರಬೇಕು ಎಂದು ಹಾರೈಸಿದರು.

11 ಜಿಲ್ಲೆಯ ಕ್ರೀಡಾಪಟುಗಳು ಭಾಗಿ: ಬೆಂಗಳೂರು ವಿಭಾಗ ವ್ಯಾಪ್ತಿಯ ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆ, ಮಧುಗಿರಿ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ದಾವಣಗೆರೆ, ರಾಮನಗರ, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಗ್ರಾಮಾಂತರ, ಕೋಲಾರ, ಶಿವಮೊಗ್ಗ ಸೇರಿ ಒಟ್ಟು 11 ಜಿಲ್ಲೆಗಳಿಂದ ಸುಮಾರು 44 ತಂಡಗಳು ಭಾಗವಹಿಸಿದ್ದವು.

ಜಿಲ್ಲಾಡಳಿತ, ಶಾಲಾ ಶಿಕ್ಷಣ ಇಲಾಖೆ ಮತ್ತು ಸರ್ವೋದಯ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಇಲ್ಲಿನ ಸರ್ವೋದಯ ಆಟದ ಮೈದಾನದಲ್ಲಿ ನಡೆಯುತ್ತಿರುವ ಆತಿಥೇಯ ತುಮಕೂರು, ಬೆಂಗಳೂರು ದಕ್ಷಿಣ, ದಾವಣಗೆರೆ, ಚಿತ್ರದುರ್ಗ ತಂಡದ ಬಾಲಕರು ೧೭ರ ವಯೋಮಿತಿಯ ವಿಭಾಗದಲ್ಲಿ ಅತ್ಯುತ್ತಮ ಆಟವಾಡಿ ಬೆಂಗಳೂರು ವಿಭಾಗ ಮಟ್ಟದ ಖೋ ಖೋ ಪಂದ್ಯಾವಳಿಯಲ್ಲಿ ಸೆಮಿಫೈನಲ್ಸ್ ಹಂತ ಪ್ರವೇಶಿಸಿದವು.

ಪಂದ್ಯಾವಳಿಯ 14 ಮತ್ತು 17ರ ವಯೋಮಿತಿಯ ಬಾಲಕ/ಬಾಲಕಿಯರ ಬೆಂಗಳೂರು ವಿಭಾಗ ಮಟ್ಟದ ಪಂದ್ಯಾವಳಿಯಲ್ಲಿ ಬೆಂಗಳೂರು ದಕ್ಷಿಣ, ದಾವಣಗೆರೆ, ತುಮಕೂರು, ಚಿತ್ರದುರ್ಗ ತಂಡಗಳು ಗೆಲುವಿನ ಓಟ ಮುಂದುವರೆದಿದೆ. ಅತಿಥೇಯ ತುಮಕೂರಿನ ತಂಡ ಸುಲಭವಾಗಿ ಮಧುಗಿರಿ ತಂಡವನ್ನು ಇನ್ನಿಂಗ್ಸ್ ಮತ್ತು 3 ಅಂಕಗಳಿಂದ ಮಣಿಸಿ ಸೆಮಿಫೈನಲ್ ತಲುಪಿತು. ಈ ಪಂದ್ಯದಲ್ಲಿ ಸುಲೇಮಾನ್ ದಾಳಿಯಲ್ಲಿ ಮತ್ತು ಯಶ್ವಂತ್ ರಕ್ಷಣೆಯಲ್ಲಿ ಮಿಂಚಿದರು. ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಂ.ಬಿ. ಪರಮೇಶ್ವರಪ್ಪ, ಸರ್ವೋದಯ ವಿದ್ಯಾ ಸಂಸ್ಥೆ ಅಧ್ಯಕ್ಷ ಜಿ. ಸೀತಾರಾಮ್, ಕಾರ್ಯದರ್ಶಿ ಕೆ.ವಿ. ಸುಬ್ಬರಾವ್, ನಿರ್ದೇಶಕ ಎಸ್. ಎನ್. ಪುಟ್ಟಣ್ಣ, ಜಿಲ್ಲಾ ಶಾಖೆ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಅಧ್ಯಕ್ಷ ಬಿ.ಎನ್. ಶಿವಕುಮಾರ್ ಪಾಲ್ಗೊಂಡಿದ್ದರು.