ಕ್ರೀಡೆಯಲ್ಲಿ ಪಾಲ್ಗೊಂಡು ಆರೋಗ್ಯ ವೃದ್ಧಿಸಿಕೊಳ್ಳಿ: ಬಿ.ವಿ.ಸಾವಿತ್ರಿ

| Published : Aug 01 2025, 12:00 AM IST

ಕ್ರೀಡೆಯಲ್ಲಿ ಪಾಲ್ಗೊಂಡು ಆರೋಗ್ಯ ವೃದ್ಧಿಸಿಕೊಳ್ಳಿ: ಬಿ.ವಿ.ಸಾವಿತ್ರಿ
Share this Article
  • FB
  • TW
  • Linkdin
  • Email

ಸಾರಾಂಶ

ಕ್ರೀಡೆಯಲ್ಲಿ ಭಾಗವಹಿಸಿದರೆ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗುವ ಜೊತೆಗೆ ಈ ದೇಶಕ್ಕೆ ಉತ್ತಮ ಪ್ರಜೆಯನ್ನು ನೀಡಿದಂತಾಗುತ್ತದೆ. ಹಣ ಸಂಪಾದನೆಗಾಗಿ ಆರೋಗ್ಯ ಹಾಳು ಮಾಡಿಕೊಂಡರೆ ಸಂಪಾದನೆ ಮಾಡಿದ ಹಣವನ್ನು ತಮ್ಮ ಆರೋಗ್ಯಕ್ಕಾಗಿಯೇ ಖರ್ಚು ಮಾಡಬೇಕಾಗಬಹುದು.

ಕನ್ನಡಪ್ರಭ ವಾರ್ತೆ ಮಂಡ್ಯ

ಕ್ರೀಡೆಯಲ್ಲಿ ಪಾಲ್ಗೊಂಡು ಮಕ್ಕಳು ತಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದು ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕಿ ಬಿ.ವಿ.ಸಾವಿತ್ರಿ ತಿಳಿಸಿದರು.

ತಾಲೂಕಿನ ಗೊರವಾಲೆ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಕ್ರೀಡಾ ಸಮವಸ್ತ್ರವನ್ನು ವಿತರಿಸಿ ಮಾತನಾಡಿ, ಇಂದು ಬಹುತೇಕ ಮಕ್ಕಳು ಬರೀ ಮೊಬೈಲ್ ನಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಇದರಿಂದ ಜ್ಞಾಪಕ ಶಕ್ತಿ ಕುಂಠಿತವಾಗಿ ಹಲವು ರೋಗಗಳಿಗೆ ದಾರಿ ಮಾಡಿಕೊಡುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಕ್ರೀಡೆಯಲ್ಲಿ ಭಾಗವಹಿಸಿದರೆ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗುವ ಜೊತೆಗೆ ಈ ದೇಶಕ್ಕೆ ಉತ್ತಮ ಪ್ರಜೆಯನ್ನು ನೀಡಿದಂತಾಗುತ್ತದೆ. ಹಣ ಸಂಪಾದನೆಗಾಗಿ ಆರೋಗ್ಯ ಹಾಳು ಮಾಡಿಕೊಂಡರೆ ಸಂಪಾದನೆ ಮಾಡಿದ ಹಣವನ್ನು ತಮ್ಮ ಆರೋಗ್ಯಕ್ಕಾಗಿಯೇ ಖರ್ಚು ಮಾಡಬೇಕಾಗಬಹುದು ಎಂದರು.

ಸಾಮಾನ್ಯ ಶಿಕ್ಷಣ ಹಾಗೂ ದೈಹಿಕ ಶಿಕ್ಷಣ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಪಾಲ್ಗೊಳ್ಳುವುದರ ಮೂಲಕ ಆರೋಗ್ಯವಂತರಾಗಿ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಶಿಕ್ಷಕರಾದ ಮುತ್ಯಾಲಪ್ಪ, ರಾಮ ಸಂಜೀವಯ್ಯ, ಕಿರಣ್ ಕುಮಾರ್, ನಳಿನ ರಂಜು ಹಾಗೂ ಶಂಕರ್ ಹಾಜರಿದ್ದರು.

ನವನಿರ್ಮಾಣ ಕಟ್ಟಡ ಕಾರ್ಮಿಕರ ಸಂಘ ಆ.3ಕ್ಕೆ ಲೋಕಾರ್ಪಣೆ

ಮಂಡ್ಯ: ನವನಿರ್ಮಾಣ ಕಟ್ಟಡ ಕಟ್ಟುವವರ ಮತ್ತು ಇತರೆ ನಿರ್ಮಾಣ ಕೂಲಿಕಾರ್ಮಿಕರ ಕರ್ನಾಟಕ ಸ್ಟೇಟ್ ಫೆಡರೇಷನ್ ಜಿಲ್ಲಾ ಸಮಿತಿ ಸಂಘಟನೆಯ ಉದ್ಘಾಟನೆ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಆ.3 ರಂದು ನಗರದ ಕರ್ನಾಟಕ ಸಂಘದ ಕೆವಿಎಸ್‌ಎಸ್‌ ಭವನದಲ್ಲಿ ನಡೆಯಲಿದೆ ಎಂದು ಫೆಡರೇಷನ್ ಜಿಲ್ಲಾಸಮಿತಿ ಅಧ್ಯಕ್ಷ ಜೆ.ಅರ್ಕೇಶ್ ಹೇಳಿದ್ದಾರೆ. ಕಾರ್ಯಕ್ರಮವನ್ನು ಶಾಸಕ ಪಿ.ರವಿಕುಮಾರ್‌ ಉದ್ಘಾಟಿಸುವರು. ಶಾಮಣ್ಣರೆಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಲಕ್ಷ್ಮೀವೆಂಕಟೇಶ್ ಹಾಗೂ ಮಾಜಿ ಸಚಿವ ಎಂ.ಎಸ್.ಆತ್ಮಾನಂದ ಭಾಗಿಯಾಗಲಿದ್ದಾರೆ. ರಾಜ್ಯ ಸಪಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ನಾರಾಯಣ್, ಕಾರ್ಮಿಕ ಸಂಘಟನೆ ಕುರಿತು ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ ಮಾತನಾಡುವರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶೈಲೇಂದ್ರಕುಮಾರ್, ಹೋರಾಟಗಾರ ನಂಜುಡಮೌರ್ಯ ಸೇರಿ ಹಲವರು ಭಾಗವಹಿಸುವರು.