ಕನ್ನಡಪ್ರಭ ವಾರ್ತೆ ರಾಮನಗರ
ಭಾರತ ಸರ್ಕಾರ 2026- 27ರಲ್ಲಿ ಕೈಗೊಂಡಿರುವ ಜನಗಣತಿ ಕಾರ್ಯದಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ ನಿಖರವಾದ ಮಾಹಿತಿ ನೀಡುವಂತೆ ನಗರಸಭೆ ಆಯುಕ್ತ ಡಾ.ಜಯಣ್ಣ ನಗರದ ನಾಗರಿಕರಲ್ಲಿ ಮನವಿ ಮಾಡಿದರು.ನಗರಸಭೆಯ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಗಣತಿಯ ಮೊದಲ ಹಂತವಾದ ಮನೆಗಳ ಪಟ್ಟಿ ಮತ್ತು ವಸತಿ ಗಣತಿ ಪ್ರಕ್ರಿಯೆಯು ಏಪ್ರಿಲ್ ನಿಂದ ಸೆಪ್ಟೆಂಬರ್ ವರೆಗೆ ನಡೆಯಲಿದೆ. ಎರಡನೇ ಹಂತದಲ್ಲಿ 2027ರ ಮಾರ್ಚ್ ತಿಂಗಳಲ್ಲಿ ಜನಸಂಖ್ಯಾ ಗಣತಿ ನಡೆಯಲಿದೆ ಎಂದರು.
ಜನಗಣತಿ ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಪಾಯ. ಇದರಿಂದ ಜನರ ಜೀವನ ಮಟ್ಟ, ಶೈಕ್ಷಣಿಕ ಮಟ್ಟ, ಆರ್ಥಿಕ ಹಾಗೂ ಸಾಮಾಜಿಕ ವ್ಯವಸ್ಥೆಯನ್ನು ತಿಳಿಯಲು ಸಹಕಾರಿಯಾಗಲಿದೆ. ಆದ್ದರಿಂದ ಪ್ರತಿಯೊಬ್ಬರೂ ಸಮರ್ಪಕ ಮಾಹಿತಿಯನ್ನು ಸರ್ಕಾರಕ್ಕೆ ನೀಡುವುದು ಎಲ್ಲರ ಕರ್ತವ್ಯವಾಗಿದೆ. ಈ ಮಹತ್ವ ಅವಕಾಶ ಪೂರ್ಣವಾದ ಕಾರ್ಯದಲ್ಲಿ ಎಲ್ಲರೂ ಪಾಲ್ಗೊಂಡಾಗ ಮಾತ್ರ ಜನಗಣತಿ ಸಂಪೂರ್ಣವಾಗಲು ಸಾಧ್ಯ ಎಂದು ಹೇಳಿದರು.ಮೊದಲ ಬಾರಿಗೆ ಸಂಪೂರ್ಣ ಡಿಜಿಟಲ್ ರೂಪದಲ್ಲಿ ಜನಗಣತಿ ನಡೆಯುತ್ತಿದೆ. ಈ ಕಾರ್ಯವನ್ನು ಸಮರ್ಪಕವಾಗಿ ನಡೆಸಲು, ಮೊದಲೇ ಎಲ್ಲ ರೀತಿಯ ಸಿದ್ಧತೆ ಕೈಗೊಳ್ಳಲು ಜಿಲ್ಲಾಮಟ್ಟದಲ್ಲಿ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ. ಜನಗಣತಿಗೆ ನೆರವಾಗುವಂತೆ 120 ರಿಂದ 150 ಮನೆಗಳಿಗೆ ಒಬ್ಬರು ಗಣತಿದಾರರನ್ನು ನೇಮಕ ಮಾಡಲಾಗುತ್ತದೆ ಎಂದು ತಿಳಿಸಿದರು.
ಏಪ್ರಿಲ್ 1 ರಿಂದ 15ರವರೆಗೆ ಸ್ವಯಂ ಗಣತಿಗೆ ಅವಕಾಶ:
ಗಣತಿ ಆರಂಭವಾಗುವ 15 ದಿನಗಳ ಮೊದಲೇ ಅಂದರೆ ಏಪ್ರಿಲ್ 1 ರಿಂದ 15ರವರೆಗೆ ಜನಗಣತಿ ಆ್ಯಪ್ ಅಥವಾ ಪೋರ್ಟಲ್ ಮೂಲಕ ಸ್ವಯಂ ಮಾಹಿತಿ ದಾಖಲಿಸಿಕೊಳ್ಳಬಹುದು. ಗಣತಿದಾರರ ಸ್ಮಾರ್ಟ್ ಫೋನ್ ಮೀಸಲಾದ ಮೊಬೈಲ್ ಆ್ಯಪ್ ಮೂಲಕ ಆನ್ ಲೈನ್‌ನಲ್ಲಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಆಫ್‌ಲೈನ್‌ನಲ್ಲಿಯೂ ಈ ಆ್ಯಪ್ ಕೆಲಸ ಮಾಡಲಿದ್ದು, ನೆಟ್‌ವರ್ಕ್ ವ್ಯಾಪ್ತಿಗೆ ಬಂದಾಗ ಸಂಗ್ರಹಿಸಿದ ಮಾಹಿತಿಗಳು ಸರ್ವರ್‌ಗೆ ಸಂಯೋಜನೆ ಆಗಲಿವೆ.
ತಮ್ಮ ಮೊಬೈಲ್‌ನಲ್ಲಿಯೇ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಂಡು, ಅದರಲ್ಲಿ ಸರಳ ವಿಧಾನದಲ್ಲಿ ಬರುವ 32 ವೈಯುಕ್ತಿಕ ಮಾಹಿತಿಗಳನ್ನು ದಾಖಲಿಸಬೇಕಿದೆ. ಸಂಪೂರ್ಣ ಮಾಹಿತಿಗಳನ್ನು ದಾಖಲಿಸಿ ಸ್ವಯಂ ಗಣತಿ ಪೂರ್ಣಗೊಳಿಸಿದವರು , ತಮ್ಮ ಮೊಬೈಲ್‌ನಲ್ಲಿ ಬಂದ (ಕೋಡ್) ಸಂಕೇತವನ್ನು ಗಣತಿದಾರರು ಮನೆಗೆ ಬಂದಾಗ ನೀಡಬೇಕು. ಅದನ್ನು ಅನುಮೋದಿಸಿದ ನಂತರವಷ್ಟೆ ಸ್ವಯಂ ಗಣತಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು.ವಿಶೇಷ ವೆಬ್ ಪೋರ್ಟಲ್:
ಜನಗಣತಿ ಮಾಡುವ ಸಮಯದಲ್ಲಿ ಯಾವುದೇ ಪತ್ರ ಬರಹ ಇರುವುದಿಲ್ಲ. ಗಣತಿ ಪ್ರಕ್ರಿಯೆಯನ್ನು ಆರಂಭದಿಂದ ಮುಕ್ತಾಯದವರೆಗೆ ನಿರ್ವಹಿಸಲು ‘ಜನಗಣತಿ ನಿರ್ವಹಣೆ ಮತ್ತು ಮಾನಿಟರಿಂಗ್ ಸಿಸ್ಟಂ’ (ಸಿಎಂಎಂಎಸ್) ಎಂಬ ವಿಶೇಷ ವೆಬ್ ಪೋರ್ಟಲ್ ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದರು.ಮನೆ ಗಣತಿಗೆ ಅಗತ್ಯವಿರುವ ಸಿಬ್ಬಂದಿಯನ್ನು ನೇಮಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತರಬೇತಿಯಲ್ಲಿ ತಿಳಿಸಲಾಗಿದೆ. ಮೊದಲ ಹಂತದಲ್ಲಿ ಮನೆ ಗಣತಿ ಮಾತ್ರ ನಡೆಯಲಿದ್ದು, ಕ್ಷೇತ್ರ ಮಟ್ಟದ ಗಣತಿದಾರರು ಎಚ್‌ಎಲ್‌ಬಿ (ಹೌಸ್ ಲಿಸ್ಟಿಂಗ್ ಬ್ಲಾಕ್) ಕ್ರಿಯೇಟರ್ ಆ್ಯಪ್ ಬಳಸಿ ಪ್ರತಿ ಬ್ಲಾಕ್‍ನ ಮನೆಗಳ ಲೊಕೇಶನ್ ಮತ್ತು ವ್ಯಾಪ್ತಿಯನ್ನು ಜಿಯೋ ಟ್ಯಾಗಿಂಗ್ ಮೂಲಕ ಗುರುತಿಸುತ್ತಾರೆ. ಮನೆಗಳಲ್ಲಿ ಎಷ್ಟು ಜನ ಇದ್ದಾರೆ. ಆ ಪ್ರದೇಶದಲ್ಲಿ ಏನೆಲ್ಲ ನಾಗರಿಕ ಸೌಲಭ್ಯಗಳಿವೆ ಎಂದು ಗಣತಿ ಮಾಡಬೇಕು. ಮುಂದಿನ ಗಣತಿಗೆ ಪ್ರಾಥಮಿಕ ಕೆಲಸ ಇದು. ಎರಡನೇ ಹಂತದಲ್ಲಿ ಜಾತಿ ಗಣತಿಯನ್ನೂ ಸೇರಿಸಲಾಗಿದೆ ಎಂದು ಜಯಣ್ಣ ತಿಳಿಸಿದರು.
ಗಣತಿ ಕಾರ್ಯಕ್ಕೆ ಸಹಕರಿಸಲು ಜಿಲ್ಲಾಧಿಕಾರಿ ಮನವಿರಾಮನಗರ: ಭಾರತೀಯ ಜನಗಣತಿ ಕಾಯ್ದೆ 1948ರ ಸೆಕ್ಷನ್ 4ರ ಉಪವಿಭಾಗ (2)ರ ಅಡಿಯಲ್ಲಿ ನೀಡಲಾದ ಅಧಿಕಾರವನ್ನು ಚಲಾಯಿಸಿ (1948ರ ಕಾಯ್ದೆ ಸಂಖ್ಯೆ 37) ಕರ್ನಾಟಕ ಸರ್ಕಾರವು ಜನಗಣತಿ- 2027 ಕಾರ್ಯವು 1ನೇ ಹಂತದಲ್ಲಿ ಮನೆ ಪಟ್ಟಿ- 2026ರ ಏಪ್ರಿಲ್ ನಿಂದ 2026ರ ಸೆಪ್ಟೆಂಬರ್ ರವರೆಗೆ ಹಾಗೂ 2ನೇ ಹಂತದಲ್ಲಿ ಜನಗಣತಿ ಕಾರ್ಯ 2027ರ ಫೆಬ್ರವರಿ ಯಿಂದ ನಡೆಸಲು ತೀರ್ಮಾನಿಸಿ ಆದೇಶಿಸಲಾಗಿದೆ.
ಆದರಂತೆ 2026ರ ಏಪ್ರಿಲ್ 1 ರಿಂದ 15ರ ವರೆಗೆ ಸಾರ್ವಜನಿಕರು ಸ್ವಯಂ ಘೋಷಿಸಲು ಸರ್ಕಾರದಿಂದ ಅನುವು ಮಾಡಿದ್ದು, ಸಾರ್ವಜನಿಕರು ತಮ್ಮ ಮೊಬೈಲ್‌ನಿಂದ ಖುದ್ದಾಗಿ http://se.census.gov.in ಲಿಂಕ್ ಮುಖಾಂತರ ಮನೆ ಗಣತಿಯ ಕುರಿತು ಕೇಳಲಾಗುವ ಪ್ರಶ್ನೆಗಳಿಗೆ ಉತ್ತರಿಸಿ, ತದನಂತರ ಜನರೇಟ್ ಆಗುವ ಯೂನಿಕ್ ನಂಬರ್ ಅನ್ನು ಏಪ್ರಿಲ್ 16 ರಿಂದ ಭೌತಿಕವಾಗಿ ಗಣತಿದಾರರು ಮನೆಗಣತಿ ಕಾರ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನೀಡುವುದು ಹಾಗೂ ಸ್ವಯಂ ಗಣತಿ ಘೋಷಿಸದೇ ಇರುವ ಸಾರ್ವಜನಿಕರು ಸೂಕ್ತ ಮಾಹಿತಿಯನ್ನು ಗಣತಿದಾರರುಗಳಿಗೆ ನೀಡಿ, ಮನೆ ಗಣತಿ ಕಾರ್ಯಕ್ಕೆ ಸಹಕರಿಸುವಂತೆ ಬೆಂಗಳೂರು ದಕ್ಷಿಣ ಜಿಲ್ಲಾ ಪ್ರಧಾನ ಜನಗಣತಿ ಅಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.-----
ರಾಮನಗರದಲ್ಲಿ 1.50 ಲಕ್ಷ ಜನಸಂಖ್ಯೆಯಿದ್ದು, ಜನಗಣತಿಯಿಂದ ವಂಚಿತರಾಗದಂತೆ ಕ್ರಮ ವಹಿಸಲಾಗಿದೆ. ಜನಗಣತಿಯಲ್ಲಿ ಎಲ್ಲರ ಮಾಹಿತಿ ಕಲೆ ಹಾಕುವ ಉದ್ದೇಶದಿಂದ ಪೂರಕ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಸಾರ್ವಜನಿಕರಿಗೆ ಯಾವುದೇ ಸಮಸ್ಯೆಗಳು ಎದುರಾದರೂ ನೇರವಾಗಿ ನಮ್ಮನ್ನು ಸಂಪರ್ಕಿಸಬಹುದಾಗಿದೆ. ನಗರಸಭೆ ವ್ಯಾಪ್ತಿಯ 31 ವಾರ್ಡುಗಳಲ್ಲಿ ಜನಗಣತಿ ಮಾಡಲು ಒಟ್ಟು 170 ಗಣತಿದಾರರನ್ನು ನೇಮಕ ಮಾಡಿಕೊಂಡಿದ್ದು, 6 ಗಣತಿದಾರರಿಗೆ ಒಬ್ಬರು ಮೇಲ್ವಿಚಾರಕರು ಕರ್ತವ್ಯ ನಿರ್ವಹಿಸಲಿದ್ದಾರೆ. ಇವರ ಮೇಲೆ ಒಬ್ಬರು ಚಾರ್ಜ್ ಆಫೀಸರ್ ಆಗಿ ಕರ್ತವ್ಯ ನಿರ್ವಹಿಸಲಿದ್ದು, ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಸಂಪೂರ್ಣವಾಗಿ ಜನಗಣತಿ ಕಾರ್ಯ ನಡೆಯಲಿದೆ.- ಡಾ.ಜಯಣ್ಣ, ಆಯುಕ್ತರು, ನಗರಸಭೆ, ರಾಮನಗರ.