ಕ್ರೀಡಾ ಮನೋಭಾವದಿಂದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಿ

| Published : Sep 29 2024, 01:30 AM IST

ಸಾರಾಂಶ

ಜಿಲ್ಲೆಯ ಜನತೆ ಅಭಿಮಾನಪಡುವ ಹಾಗೇ ಯುವ ಪೀಳಿಗೆ ನಡೆದುಕೊಳ್ಳುತ್ತಿದೆ

ಗದಗ: ಕ್ರೀಡಾಪಟುಗಳಿಗೆ ಗೆಲವು ಮಾತ್ರ ಮುಖ್ಯವಲ್ಲ, ಕ್ರೀಡಾ ಮನೋಭಾವದಿಂದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ.ಪಾಟೀಲ ಹೇಳಿದರು.

ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಜರುಗಿದ ಬೆಳಗಾವಿ ವಿಭಾಗ ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಗದಗ ಜಿಲ್ಲೆಯಲ್ಲಿ ಏರ್ಪಡಿಸಿದ ಬೆಳಗಾವಿ ವಿಭಾಗ ಮಟ್ಟದ ದಸರಾ ಕ್ರೀಡಾಕೂಟವು ಸಮಾಧಾನಕರ ವಾತಾವರಣದಲ್ಲಿ ನಡೆಯುತ್ತಿವೆ. ಜಿಲ್ಲೆಯ ಆಶಾಕಿರಣವಾಗಿರುವ ಕ್ರೀಡಾಪಟುಗಳು ಕ್ರೀಡೆಯಲ್ಲಿ ಉತ್ತಮ ಪ್ರದರ್ಶನ ನೀಡಿ ಕಂಚು,ಬೆಳ್ಳಿ, ಬಂಗಾರ ಪದಕ ಗಳಿಸಿ ಜಿಲ್ಲೆಯ ಜನತೆ ಅಭಿಮಾನಪಡುವ ಹಾಗೇ ಯುವ ಪೀಳಿಗೆ ನಡೆದುಕೊಳ್ಳುತ್ತಿದೆ ಎಂದರು.

ಕ್ರೀಡಾಪಟುಗಳ ಆಟದ ಸಾಮರ್ಥ್ಯದಿಂದ ಕ್ರೀಡಾ ಕ್ಷೇತ್ರದಲ್ಲಿ ಎತ್ತರರಕ್ಕೆರಲು ಬೇಕಾದ ಸೌಕರ್ಯಗಳನ್ನು 2 ಕೋಟಿ ವೆಚ್ಚದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ಪುಟ್ಬಾಲ್ ಟರ್ಪ ಮೈದಾನ, ಫೆಡ್ ಲೈಟ್‌ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿ ಮತ್ತು ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ವುಡನ್ ಪ್ಲೋರಿಂಗ್ ಲೈಟಿಂಗ್ ಹಾಗೂ ಗದಗ ತಾಲೂಕು ಮುಳಗುಂದ ಪಟ್ಟಣದಲ್ಲಿ ಈಜುಗೋಳ ನಿರ್ಮಾಣ ಕಾಮಗಾರಿ ಆದಷ್ಟು ಬೇಗನೆ ಪ್ರಾರಂಭಗೊಳ್ಳುತ್ತವೆ ಎಂದರು.

ಜಿಲ್ಲೆಯ ಅಂತಾರಾಷ್ಟ್ರೀಯ ಮಟ್ಟದ ಸೈಕ್ಲಿಂಗ್ ಕ್ರೀಡಾಪಟು ಪವಿತ್ರಾ ಕುರ್ತಕೋಟಿ, ರಾಷ್ಟ್ರೀಯ ಮಟ್ಟದಲ್ಲಿ ಬೆಳ್ಳಿ ಪದಕ ವಿಜೇತ ಕರೆಪ್ಪ ಹೆಗಡೆ, ಸ್ಟ್ಯಾಲಿನ್ ಗೌಡರ, ಕುಸ್ತಿ ರಾಷ್ಟ್ರೀಯ ಕ್ರೀಡಾಪಟು ತೇಜಸ್ವಿನಿ ಬಿಂಗಿ, ಕಾವ್ಯಾ ಜಾಧವ, ಆರೀಫಾ ಕುಕನೂರ, ಖೇಲೊ ಇಂಡಿಯಾದಲ್ಲಿ ಕಂಚಿನ ಪದಕ ಪಡೆದ ಭುವನೇಶ್ವರಿ ಕೊಳಿವಾಡ, ರಾಹುಲ್‌ ಸಿದ್ದಮ್ಮನಹಳ್ಳಿ, ಹಾಕಿ ಕ್ರೀಡೆಯ ಮಿನಿ ಓಲಂಪಿಕ್ ನಲ್ಲಿ ಬೆಳ್ಳಿ ಪದಕ ಪಡೆದ ಸುಜಲ ಕೊರವರ, ಗೋವಿಂದಪ್ಪ ಹಾಗೂ ದಕ್ಷಿಣ ವಲದಲ್ಲಿ ಬಂಗಾರದ ಪದಕ ಪಡೆದ ಅಖಿಲ ಮುಟಗಾರ, ಆದಿತ್ಯ ಮುಟಗಾರ, ನೇಹಾ ಮುಟಗಾರ ಹೀಗೆ ವಿವಿಧ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿ ಗದಗ ಜಿಲ್ಲೆಗೆ ಹೆಸರನ್ನು ತಂದಿದ್ದು ಹೆಮ್ಮೆಯ ವಿಷಯ. ಜಿಲ್ಲೆಯಲ್ಲಿರುವ ಕ್ರೀಡಾ ಸೌಕರ್ಯ ಸದುಪಯೋಗ ಪಡೆದುಕೊಂಡು ರಾಷ್ಟ್ರೀಯ ಹಾಕಿ ತಂಡದಲ್ಲಿ ಭಾಗವಹಿಸುವಲ್ಲಿ ಪ್ರಯತ್ನಿಸಿ ಎಂದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶರಣು ಗೋಗೇರಿ ಮಾತನಾಡಿ, ಜಿಲ್ಲೆಯ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಹಾಕಿ, ನಗರದ ಕೆ.ಎಚ್. ಪಾಟೀಲ ಕ್ರೀಡಾಂಗಣದಲ್ಲಿ ಪುಟ್ಬಾಲ್ ಮತ್ತು ಒಳಾಂಗಣ ಕ್ರೀಡಾಂಗಣದಲ್ಲಿ ಕಬಡ್ಡಿ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಈ ವೇಳೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ ಬಬರ್ಚಿ, ಬಿ.ಬಿ. ಅಸೂಟಿ, ಸಿದ್ದು ಪಾಟೀಲ, ಎಂ.ಸಿ. ಶೇಖ್, ಅಶೋಕ ಮಂದಾಲಿ ಇದ್ದರು.