ಸಾರಾಂಶ
- ಪೂರ್ವಸಿದ್ಧತಾ ಸಭೆಯಲ್ಲಿ ಹಿರಿಯ ಕಾರ್ಮಿಕ ಮುಖಂಡ ಎಚ್.ಕೆ. ಕೊಟ್ರಪ್ಪ ಮನವಿ
- - -ಕನ್ನಡಪ್ರಭ ವಾರ್ತೆ ಹರಿಹರ
ದಾವಣಗೆರೆಯಲ್ಲಿ ಏ.26ರಂದು ನಡೆಯಲಿರುವ ಸಂವಿಧಾನ ಸಂರಕ್ಷಕರ ಸಮಾವೇಶಕ್ಕೆ ಹರಿಹರ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕೆಂದು ಹಿರಿಯ ಕಾರ್ಮಿಕ ಮುಖಂಡ ಎಚ್.ಕೆ. ಕೊಟ್ರಪ್ಪ ಹೇಳಿದರು.ನಗರದ ಪಿಡಬ್ಲ್ಯೂಡಿ ಪ್ರವಾಸಿ ಮಂದಿರದಲ್ಲಿ ನಡೆದ ಪ್ರಗತಿಪರ ಸಂಘಟನೆಗಳ, ಸಂಘ ಸಂಸ್ಥೆ, ಸಂಘಟನೆಗಳ, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳ ಪೂರ್ವಸಿದ್ಧತಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂವಿಧಾನ ನಮ್ಮೆಲ್ಲರ ಉಸಿರು. ಆ ಉಸಿರು ಮಾಲಿನ್ಯಗೊಳ್ಳದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಈಗಿನ ಕೇಂದ್ರ ಸರ್ಕಾರದ ಧೋರಣೆ ಸಂವಿಧಾನವನ್ನು ಬದಲಿಸುವತ್ತ ಹೊರಳುತ್ತಿದೆ. ವಿಭಿನ್ನ ಜಾತಿ, ಧರ್ಮ, ಸಂಸ್ಕೃತಿ, ಪರಂಪರೆ, ಆಹಾರ, ವಿಹಾರದ ಹಿನ್ನೆಲೆ ಭಾರತೀಯರ ಹಕ್ಕುಗಳ ರಕ್ಷಣೆಯು ಈಗಿರುವ ಸಂವಿಧಾನದಿಂದ ಮಾತ್ರ ಸಾಧ್ಯ ಎಂದರು.ಈ ಸಂವಿಧಾನ ಇರುವುದರಿಂದಲೇ ದೇಶದ ದೀನ, ದಲಿತರು, ಅಸ್ಪೃಶ್ಯರು, ಮಹಿಳೆಯರು, ರೈತರು, ಶ್ರಮಿಕರು ಸ್ವಾಭಿಮಾನದ ಬದುಕು ಪಡೆಯುವತ್ತ ಹೆಜ್ಜೆ ಇಡುತ್ತಿದ್ದಾರೆ. ಸಂವಿಧಾನದಿಂದ ಉಪಯೋಗ ಪಡೆದುಕೊಳ್ಳುತ್ತಿರುವ ನಾವೆಲ್ಲರೂ ಒಟ್ಟಾಗಿ ಧ್ವನಿ ಎತ್ತಬೇಕಿದೆ. ಸಂವಿಧಾನದ ರಕ್ಷಣೆ ಮಾಡುವಂತಹ ಮನಸ್ಥಿತಿಯವರನ್ನು ಅಧಿಕಾರಕ್ಕೆ ತರುವ ಕೆಲಸ ಎಲ್ಲರೂ ಸೇರಿ ಮಾಡಬೇಕಿದೆ ಎಂದರು.
ಯುವಪಡೆ ಪದಾಧಿಕಾರಿಗಳ ಆಯ್ಕೆ:ಇದೇ ಸಂದರ್ಭದಲ್ಲಿ ಸಂವಿಧಾನ ಸಂರಕ್ಷಕರ ಸಮಾವೇಶದ ಯುವಪಡೆ ರಚಿಸಲಾಯಿತು. ಪದಾಧಿಕಾರಿಗಳಾಗಿ ಹಿರಿಯ ಕ್ರೀಡಾಪಟು ಎಚ್.ನಿಜಗುಣ, ನಗರಸಭೆ ಸದಸ್ಯರಾದ ಕೆ.ಬಿ.ರಾಜಶೇಖರ್, ಸಂತೋಷ ದೊಡ್ಡಮನಿ, ನಗರಸಭೆ ಮಾಜಿ ಸದಸ್ಯ ಎಂ.ಬಿ.ಅಣ್ಣಪ್ಪ, ಕನ್ನಡ ಪರ ಸಂಘಟನೆಗಳ ಮುಖಂಡರಾದ ಶ್ರೀನಿವಾಸ್ ಕೊಡ್ಲಿ, ಪಿ.ಜೆ.ಮಹಾಂತೇಶ್, ಮಧು ನಿಡಗಲ್, ರಮೇಶ್ ಕಲಾಲ್, ಎಂ.ಇಲಿಯಾಸ್, ಇಮ್ಮು ರಾಜ್, ಯಮನೂರ್ ಅವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಬಂಡಾಯ ಸಾಹಿತಿ ಹುಲಿಕಟ್ಟಿ ಚನ್ನಬಸಪ್ಪ, ಬಿ.ಮಗ್ದುಮ್, ಮಧು ನಿಡಿಗಲ್, ಹಾಲಸ್ವಾಮಿ, ಬಿ.ಮೊಹ್ಮದ್ ಇಸಾಕ್, ಕೆ.ಆರ್.ಗಂಗಾಧರ್, ಎಸ್.ಡಿ.ಗೀತಾ, ಗಣೇಶ್ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳಿದ್ದರು.- - -
-21ಎಚ್‍ಆರ್‍ಆರ್02:ಹರಿಹರದಲ್ಲಿ ಶನಿವಾರ ಪ್ರಗತಿಪರ ಸಂಘಟನೆಯಿಂದ ಏ.26ರಂದು ದಾವಣಗೆರೆಯಲ್ಲಿ ನಡೆಯಲಿರುವ ಸಂವಿಧಾನ ಸಂರಕ್ಷಕರ ಸಮಾವೇಶ ಪೂರ್ವಸಿದ್ಧತಾ ಸಭೆ ನಡೆಯಿತು.