ಸಾರಾಂಶ
ತುಮಕೂರು: ತುಮಕೂರು ದಸರಾ ಸಮಿತಿ ನಗರದಲ್ಲಿ ಹಮ್ಮಿಕೊಂಡಿರುವ ೩೪ನೇ ವರ್ಷದ ದಸರಾ ಉತ್ಸವದ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಿತು. ಮಂಗಳವಾರ ಸಂಜೆ ಶಾಸಕರಾದ ಜಿ.ಬಿ.ಜ್ಯೋತಿ ಗಣೇಶ್ ಹಾಗೂ ಬಿ.ಸುರೇಶ್‌ಗೌಡರು ಕೆ.ಆರ್. ಬಡಾವಣೆಯ ಶ್ರೀರಾಮನ ದೇವಸ್ಥಾನದಲ್ಲಿ ಶ್ರೀರಾಮಮೂರ್ತಿಗೆ ಪೂಜೆ ಸಲ್ಲಿಸಿ ದಸರಾ ಉತ್ಸವದ ದೀಪಾಲಂಕಾರ ಉದ್ಘಾಟನೆ ಮಾಡಿದರು.
ನಂತರ ಮಾತನಾಡಿದ ಶಾಸಕ ಜಿ.ಬಿ.ಜ್ಯೋತಿ ಗಣೇಶ್, ದಸರಾ ಸಮಿತಿಯು ಕಳೆದ 33 ವರ್ಷಗಳಿಂದ ಸಾಂಪ್ರದಾಯಕ ಕಾರ್ಯಕ್ರಮಗಳೊಂದಿಗೆ ಭಕ್ತಿ, ಶ್ರದ್ಧೆಯಿಂದ ನಾಡಹಬ್ಬ ಆಚರಿಸಿಕೊಂಡು ಬರುತ್ತಿದೆ. ಈ ಬಾರಿಯೂ ಅದೇ ಸಂಭ್ರಮದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನಾಗರಿಕರು ಮನೆ ಹಬ್ಬದಂತೆ ದಸರಾ ಉತ್ಸವದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.ಇಷ್ಟು ವರ್ಷಗಳ ಕಾಲ ಜಾತಿ, ಪಕ್ಷದ ಭೇದವಿಲ್ಲದೆ ತುಮಕೂರು ದಸರಾ ಸಮಿತಿ ನಾಡಹಬ್ಬವನ್ನು ವೈಭವದಿಂದ ಆಚರಿಸಿಕೊಂಡು ಬರುತ್ತಿದೆ. ಈ ಬಾರಿಯೂ ಅದೇ ಶ್ರದ್ಧೆ, ಸಂಪ್ರದಾಯದಲ್ಲಿ ದಸರಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಗುರುವಾರ ಬೆಳಗ್ಗೆ ವಿವಿಧ ಹೋಮ, ಹವನ, ಪೂಜೆಗಳೊಂದಿಗೆ ದಸರಾ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ. ಶನಿವಾರ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಶಮಿಪೂಜೆ ನೆರವೇರಿಸುವರು ಎಂದು ಹೇಳಿದರು.
ಪ್ರತಿ ವರ್ಷ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ದಸರಾ ಉತ್ಸವ ಆಚರಿಸಲಾಗುತ್ತಿತ್ತು, ಈ ಬಾರಿ ಜಿಲ್ಲಾಡಳಿತದಿಂದ ಅಲ್ಲಿ ಕಾರ್ಯಕ್ರಮವಿದೆ. ಹೀಗಾಗಿ ಶ್ರೀರಾಮ ಮಂದಿರದಲ್ಲಿ ಸಮಿತಿಯ ದಸರಾ ಉತ್ಸವ ನಡೆಯಲಿದೆ. ಇದು ಪರ್ಯಾಯ ದಸರಾ ಉತ್ಸವವಲ್ಲ, ಮುಂದುವರೆದ ಕಾರ್ಯಕ್ರಮ ಎಂದು ಶಾಸಕರು ಸ್ಪಷ್ಟಪಡಿಸಿದರು.ಶಾಸಕ ಬಿ.ಸುರೇಶ್‌ಗೌಡ ಮಾತನಾಡಿ, ಈ ದಸರಾ ಸಮಿತಿಯಲ್ಲಿ ಎಲ್ಲಾ ಜಾತಿಯವರೂ ಸೇರಿ ಆಚರಣೆ ಮಾಡುತ್ತಿದ್ದಾರೆ. ಆದರೆ ಈ ಸಮಿತಿ ಒಂದು ಜಾತಿಗೆ ಸೀಮಿತವಾಗಿದೆ ಎಂದು ಅಪಪ್ರಚಾರ ಮಾಡುತ್ತಾ ಸರ್ಕಾರದಿಂದ ಆಚರಿಸುತ್ತಿದ್ದಾರೆ. ಇದು ಎಲ್ಲಾ ಜಾತಿಯ ಹಿಂದೂಗಳು ಒಟ್ಟುಗೂಡಿ ಆಚರಿಸುವ ಹಬ್ಬ ಆಗಿದೆ. ಅಧಿಕಾರಿಗಳ ನೇತೃತ್ವದಲ್ಲಿ ನಡೆಯುವ ಜಿಲ್ಲಾಡಳಿತದ ದಸರಾ ಉತ್ಸವದಲ್ಲಿ ಸಚಿವರ ಒತ್ತಡಕ್ಕೆ ಮಣಿದು ಅಧಿಕಾರಿಗಳು ಕೆಲಸ ಮಾಡುವಂತಾಗಿದೆ ಎಂದರು.
ದೀಪಾಲಂಕಾರ ಉದ್ಘಾಟನಾ ಸಮಾರಂಭದಲ್ಲಿ ದಸರಾ ಸಮಿತಿ ಅಧ್ಯಕ್ಷ ಬಿ.ಎಸ್.ಮಂಜುನಾಥ್, ಕಾರ್ಯಾಧ್ಯಕ್ಷ ಡಾ.ಎಸ್.ಪರಮೇಶ್, ಪ್ರಧಾನ ಕಾರ್ಯದರ್ಶಿ ಬಿ.ಎಸ್.ಮಹೇಶ್, ಖಜಾಂಚಿ ಜಿ.ಎಸ್.ಬಸವರಾಜು, ಕಾರ್ಯದರ್ಶಿಗಳಾದ ಹನುಮಂತರಾಜು, ಕೆ.ಶಂಕರ್, ಸಹಕಾರ್ಯದರ್ಶಿ ಕೆ.ಪರಶುರಾಮಯ್ಯ, ಸಂಯೋಜಕರಾದ ಕೆ.ಎನ್.ಗೋವಿಂದರಾವ್, ಜಯಮೂರ್ತಿ ಮೊದಲಾದವರು ಭಾಗವಹಿಸಿದ್ದರು.