ಕನ್ನಡಪ್ರಭ ವಾರ್ತೆ ಚಾಮರಾಜನಗರ

ಬುದ್ಧನ ಸಂದೇಶ ಸಾರುವ ಅಂತಾರಾಷ್ಟ್ರೀಯ ಬೌದ್ಧ ಮಹಾಸಮ್ಮೇಳನ ಜಿಲ್ಲಾ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಅ. ೨೪ ಮತ್ತು ೨೫ ರಂದು ನಡೆಯಲಿದ್ದು ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮಂದಿ ಸೇರುವ ನಿರೀಕ್ಷೆ ಇದ್ದು ಸರ್ವರೂ ಇದರಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಹೇಳಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಮೈಸೂರಿನಲ್ಲಿ ನಡೆದ ಬೌದ್ಧ ಮಹಾಸಮ್ಮೇಳನದಲ್ಲಿ ಮುಂದಿನ ಬಾರಿ ಚಾಮರಾಜನಗರದಲ್ಲಿ ನಡೆಸುವಂತೆ ನನಗೆ ಮತ್ತು ಶಾಸಕ ಎ.ಆರ್. ಕೃಷ್ಣಮೂರ್ತಿ ಅವರಿಗೆ ಜ್ಯೋತಿಯನ್ನು ನೀಡಲಾಯಿತು. ಅದರಂತೆ ಚಾಮರಾಜನಗರದಲ್ಲಿ ಅ.೨೪, ೨೫ರಂದು ೨ನೇ ಅಂತಾರಾಷ್ಟ್ರೀಯ ಬೌದ್ಧ ಸಮ್ಮೇಳನ ಆಯೋಜಿಸಲಾಗಿದ್ದು, ಎರಡು ದಿನಗಳ ಸಮ್ಮೇಳನದಲ್ಲಿ ವಿಚಾರಗೋಷ್ಠಿ, ಸಂವಾದಗೋಷ್ಠಿ, ಧಮ್ಮ ಕವಿಗೋಷ್ಠಿ, ಮಕ್ಕಳ ಮೈತ್ರಿ, ಮಹಿಳಾ ದುಂಡುಮೇಜಿನ ಸಭೆ, ರಾಜ್ಯದ ವಿವಿಧ ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಅ.೨೪ರಂದು ಬೆಳಗ್ಗೆ ೭ಕ್ಕೆ ರಾಮಸಮುದ್ರದ ಅಂಬೇಡ್ಕರ್ ಪುತ್ಥಳಿ ಮುಂಭಾಗ ಧಮ್ಮ ನಡಿಗೆ ಮೆರವಣಿಗೆ ನಡೆಯಲಿದ್ದು . ಸಮ್ಮೇಳದ ಉದ್ಘಾಟನೆಯನ್ನು ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಭೀಮರಾವ್ ಯಶವಂತ್ ರಾವ್ ಅಂಬೇಡ್ಕರ್ ಹಾಗೂ ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಭಾಗವಹಿಸಲಿದ್ದು ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಮತ್ತು ಆಹಿಂದ ನಾಯಕ ಸಿದ್ದರಾಮಯ್ಯ ಸೇರಿ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಮೈಸೂರು ಉರಿಲಿಂಗಿಪೆದ್ದಿಮಠದ ಜ್ಞಾನಪ್ರಕಾಶಸ್ವಾಮೀಜಿ ಮಾತನಾಡಿ, ಶಾಂತಿ, ಕರುಣೆ ಮಮತೆ, ಪಂಚಶೀಲ ತತ್ವವನ್ನು ಜಗತ್ತಿಗೆ ಸಾರಿದ ಬುದ್ಧನ ಸಂದೇಶಗಳನ್ನು ಜನತೆಗೆ ತಿಳಿಸುವ ಸಲುವಾಗಿ ಜಾತ್ಯತೀತವಾಗಿ, ಧರ್ಮಾತೀತವಾಗಿ ಎಲ್ಲರೂ ಈ ಸಮ್ಮೇಳನದಲ್ಲಿ ಭಾಗವಹಿಸಬೇಕು ಎಂದರು.


ಕಳೆದ ವರ್ಷ ಮೈಸೂರಿನಲ್ಲಿ ಒಂದನೇ ಅಂತಾರಾಷ್ಟ್ರೀಯ ಬೌದ್ದ ಸಮ್ಮೇಳನ ನಡೆಸಲಾಗಿದ್ದು, ನಿರೀಕ್ಷೆಗೂ ಮೀರಿ ಯಶಸ್ವಿಯಾಗಿತ್ತು, ಎರಡನೇ ಕಾರ್ಯಕ್ರಮವಾಗಿ ಚಾಮರಾಜನಗರದಲ್ಲಿ ನಡೆಯುತ್ತಿದ್ದು ಪ್ರತಿವರ್ಷ ರಾಜ್ಯದ ಒಂದೊಂದು ಜಿಲ್ಲೆಯಲ್ಲಿ ನಡೆಯಲಿದೆ ಎಂದರು.

ಅ.೨೪ರಂದು ಸಂಜೆ ೪ಕ್ಕೆ ಬುದ್ಧ ಮತ್ತು ಬಹುತ್ವ ವಿಚಾರಗೋಷ್ಠಿಯಲ್ಲಿ ಅಂತಾರಾಷ್ಟ್ರೀಯ ಬೌದ್ದ ಸಮ್ಮೇಳನ ಗೌರವಾಧ್ಯಕ್ಷ ಮನೋರಖ್ಖಿತ ಬಂತೇಜಿ, ಸುತ್ತೂರು ಶಿವರಾತ್ರಿ ದೇಶಿಕೇಂದ್ರಸ್ವಾಮೀಜಿ ಸೇರಿ ನಾನಾ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ.

ಎರಡು ದಿನಗಳ ಈ ಐತಿಹಾಸಿಕ ಸಮ್ಮೇಳನದಲ್ಲಿ ಎಲ್ಲರೂ ಭಾಗವಹಿಸಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಇಲ್ಲಿನ ಸಂದೇಶವನ್ನು ತಿಳಿಸಿ ಎಂದರು.

ಸಮ್ಮೇಳನ ಸಮಿತಿಯ ಅಧ್ಯಕ್ಷ ಶಾಸಕ ಎ.ಆರ್. ಕೃಷ್ಣಮೂರ್ತಿ ಮಾತನಾಡಿ, ಸಮ್ಮೇಳನದ ಯಶಸ್ಸಿಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದು ಒಂದು ಲಕ್ಷಕ್ಕೂ ಹೆಚ್ಚು ಜನರು ಸೇರುವುದರಿಂದ ವಸತಿ, ಊಟ,ತಿಂಡಿ ಸೇರಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು ಎಲ್ಲರೂ ಸಹಕಾರ ನೀಡಿದ್ದಾರೆ ಎಂದರು.

ಯಾವುದೇ ರಾಜಕೀಯವಿಲ್ಲದ, ಜಾತಿಬೇಧ ಧರ್ಮಬೇಧವಿಲ್ಲದೆ ನಡೆಯುತ್ತಿರುವ ಈ ಮಹಾ ಸಮ್ಮೇಳನದಲ್ಲಿ ಸರ್ವರೂ ಭಾಗವಹಿಸಿ ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ವೆಂಕಟರಮಣಸ್ವಾಮಿ(ಪಾಪು), ಎನ್. ನಾಗಯ್ಯ, ಅಯ್ಯನಪುರ ಶಿವಕುಮಾರ್, ಮಹೇಶ್ ಕುದರ್, ಚಂದ್ರಶೇಖರ್ ಇದ್ದರು.