ಕನ್ನಡಪ್ರಭ ವಾರ್ತೆ ಮಳವಳ್ಳಿ

ಮತದಾರರ ಪಟ್ಟಿ ಪರಿಷ್ಕರಿಸುವ ಮತ್ತು ಮಾಹಿತಿ ನವೀಕರಿಸುವ ಪ್ರಕ್ರಿಯೆಯಲ್ಲಿ ನಾಗರಿಕರು ತಪ್ಪದೇ ಭಾಗವಹಿಸುವ ಮೂಲಕ ಮತದಾನದ ಅರ್ಹತೆಯನ್ನು ಪಡೆಯಬೇಕು ಎದು ತಾಲೂಕು ಪಂಚಾಯ್ತಿ ಕಾರ್ಯನಿರ್ವಹಕ ಅಧಿಕಾರಿ ಶ್ರೀನಿವಾಸ್ ತಿಳಿಸಿದರು.

ಪಟ್ಟಣದಲ್ಲಿ ತಾಲೂಕು ಆಡಳಿತದಿಂದ ಪಟ್ಟಣದ ಶಾಂತಿ ಕಾಲೇಜು ಮುಂಭಾಗದ 33 ಎಕರೆ ಮೈದಾನದಲ್ಲಿ ನಡೆದ ಮತದರರ ಪಟ್ಟಿ ಪರಿಷ್ಕರಿಸುವ ಸಂಬಂಧ ಅರಿವು ಮೂಡಿಸಲು ಹಮ್ಮಿಕೊಂಡಿದ್ದ ಎತ್ತಿನಗಾಡಿ ಮೆರವಣಿಗೆ ಜಾಥಾದಲ್ಲಿ ಮಾತನಾಡಿದರು.

ಮನೆ ಮನೆಗಳಿಗೆ ಭೇಟಿ ನೀಡುವ ಬಿಎಲ್‌ಒಗಳಿಗೆ ಆಗತ್ಯ ದಾಖಲೆಗಳನ್ನು ನೀಡಿ ಗಣತಿ ನಮೂನೆಯನ್ನು ಭರ್ತಿ ಮಾಡಿ ಸಹಕರಿಸಬೇಕು. ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಪ್ರಜಾಪ್ರಭುತ್ವವನ್ನು ಬಲಸಪಡಿಸಲು ಅವಕಾಶವನ್ನು ತಪ್ಪದೇ ಬಳಸಿಕೊಳ್ಳಬೇಕೆಂದು ಸಲಹೆ ನೀಡಿದರು.

ನನ್ನ ಮತ ನನ್ನ ಹಕ್ಕು, ನಾನು ಮತದಾರರ ಪಟ್ಟಿಯಲ್ಲಿ ಯಾವುದೇ ಚುನಾವಣೆಯಲ್ಲಿ ಹಿಂದೆ ಉಳಿಯುವುದಿಲ್ಲ. ಕಡ್ಡಾಯವಾಗಿ ನಾನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿ ಡಿಜಿಟಲ್ ಮಾಡಿಕೊಳ್ಳುವ ಮೂಲಕ ಪ್ರಜಾಪ್ರಭುತ್ವದಲ್ಲಿ ನನ್ನ ಹಕ್ಕನ್ನು ಚಲಾಯಿಸಬೇಕೆಂಬ ಜಾಗೃತಿ ಮೂಡಿಸುವ ಉದ್ದೇಶದಿಂದ 40ಕ್ಕೂ ಹೆಚ್ಚಿನ ಎತ್ತಿನ ಗಾಡಿ ಮೆರವಣಿಗೆ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು.


ಈಗಾಗಲೇ ತಾಲೂಕಿನಲ್ಲಿ 2,59,000 ಗಣತಿ ನಮೂನೆಗಳನ್ನು ವಿತರಣೆ ಮಾಡಲಾಗಿದೆ. ಮತದಾರರು ಅರ್ಜಿ ಬರೆದು ವಾಪಸ್ ಅಧಿಕಾರಿಗಳು ಮತ್ತು ಬಿಎಲ್‌ಒಗಳಿಗೆ ನೀಡಿ ಆನ್‌ಲೈನ್‌ನಲ್ಲಿ ಡಿಜಿಟಲ್ ಮಾಡಿದರೇ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳುತ್ತದೆ ಎಂದು ವಿವರಿಸಿದರು.

ಇದೇ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ನಾಗರತ್ನ, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಪಾರ್ಥಸಾರಥಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಮಹದೇವು, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ದೀಪಕ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಶಾಂತರಾಜು, ತಾಲೂಕಿನ ಎಲ್ಲಾ ಪಂಚಾಯತಿ ಅಭಿವೃದ್ಧಿಗಳು, ಕಾರ್ಯದರ್ಶಿಗಳು, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.