ರೈಲ್ವೆ ಹೋರಾಟದಲ್ಲಿ ಒಮ್ಮನಸ್ಸಿನಿಂದ ಪಾಲ್ಗೊಳ್ಳಿ: ಶಾಸಕ ದೊಡ್ಡನಗೌಡ ಪಾಟೀಲ

| Published : Feb 02 2025, 01:01 AM IST

ರೈಲ್ವೆ ಹೋರಾಟದಲ್ಲಿ ಒಮ್ಮನಸ್ಸಿನಿಂದ ಪಾಲ್ಗೊಳ್ಳಿ: ಶಾಸಕ ದೊಡ್ಡನಗೌಡ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಕುಷ್ಟಗಿ ನರಗುಂದ ಘಟಪ್ರಭಾ ನೂತನ ರೈಲು ಮಾರ್ಗಕ್ಕೆ ಒತ್ತಾಯಿಸಿ ಮಾಡುವ ಹೋರಾಟದಲ್ಲಿ ಎಲ್ಲರೂ ಒಂದೆ ಮನಸ್ಸಿನಿಂದ ಪಾಲ್ಗೊಳ್ಳಬೇಕು.

ಕುಷ್ಟಗಿ ನರಗುಂದ ಘಟಪ್ರಭಾ ನೂತನ ರೈಲು ಮಾರ್ಗ ಹೋರಾಟ ಸಮಿತಿ ಸಮಾಲೋಚನೆ ಸಭೆ

ಕನ್ನಡಪ್ರಭ ವಾರ್ತೆ ಕುಷ್ಟಗಿ

ಕುಷ್ಟಗಿ ನರಗುಂದ ಘಟಪ್ರಭಾ ನೂತನ ರೈಲು ಮಾರ್ಗಕ್ಕೆ ಒತ್ತಾಯಿಸಿ ಮಾಡುವ ಹೋರಾಟದಲ್ಲಿ ಎಲ್ಲರೂ ಒಂದೆ ಮನಸ್ಸಿನಿಂದ ಪಾಲ್ಗೊಳ್ಳಬೇಕು ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

ಪಟ್ಟಣದ ಶ್ರೀ ಬುತ್ತಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಕುಷ್ಟಗಿ ನರಗುಂದ ಘಟಪ್ರಭಾ ನೂತನ ರೈಲು ಮಾರ್ಗ ಹೋರಾಟ ಸಮಿತಿಯ ಸಮಾಲೋಚನೆ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಅನೇಕ ಹೋರಾಟಗಳ ಫಲವಾಗಿ ಈಗ ಕುಷ್ಟಗಿ ಪಟ್ಟಣಕ್ಕೆ ಗದಗ ವಾಡಿ ರೈಲ್ವೆ ಮಾರ್ಗ ಆಗಿದೆ. ಇನ್ನೂ ಎರಡು ತಿಂಗಳನಲ್ಲಿ ರೈಲು ಬರಬಹುದು. ಅದರ ಜತೆಗೆ ನಮ್ಮ ಭಾಗದ ಅಭಿವೃದ್ಧಿಗಾಗಿ ಮತ್ತೊಂದು ರೈಲು ಮಾರ್ಗದ ಆವಶ್ಯಕತೆ ಇದೆ. ಈಗಾಗಲೇ ನರಗುಂದ ಭಾಗದವರು ಹೋರಾಟ ಪ್ರಾರಂಭ ಮಾಡಿದ್ದಾರೆ. ಅವರ ಜತೆಗೆ ಕೈಜೋಡಿಸಿ ಹೋರಾಟ ಮಾಡೋಣ ಎಂದರು.

ಹೋರಾಟ ಸಮಿತಿ ರಚನೆ ಮಾಡಿಕೊಂಡು ರೈಲ್ವೆ ಸಚಿವರು, ಸಂಸದರನ್ನು ಭೇಟಿ ಮಾಡಿ ಮನವಿ ಸಲ್ಲಿಸುವ ಮೂಲಕ ಹೋರಾಟಕ್ಕೆ ಅಣಿಯಾಗೋಣ ಎಂದರು.

ರೈಲ್ವೆ ಹೋರಾಟ ಸಮಿತಿ ಮುಖ್ಯಸ್ಥ ವೀರೇಶ ಬಂಗಾರಶೆಟ್ಟರ ಮಾತನಾಡಿ, ನಮ್ಮ ಭಾಗದ ಅಭಿವೃದ್ಧಿಗಾಗಿ ಮತ್ತೊಂದು ರೈಲ್ವೆ ಮಾರ್ಗದ ಅವಶ್ಯಕತೆ ಇದೆ. ಕುಷ್ಟಗಿ ತಾಲೂಕಿನ ಎಲ್ಲ ಜನರು ಒಗ್ಗಟ್ಟಾಗಿ ಹೋರಾಟ ಮಾಡಬೇಕಿದೆ. ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು ಎಂದರು.

ರವೀಂದ್ರಸಾ ಬಾಕಳೆ ಮಾತನಾಡಿ, 1996ರಲ್ಲಿ ಗದಗ ವಾಡಿ ರೈಲು ಕಾಮಗಾರಿ ಆರಂಭಿಸಲು ಹೋರಾಟ ನಡೆಸಲಾಗಿತ್ತು. ಈಗ ಸ್ಟೇಷನ್ ಆಗಿದೆ ಆದರೆ ರೈಲು ಬಂದಿಲ್ಲ. ಅಲ್ಲಲ್ಲಿ ಕಳಪೆ ಕಾಮಗಾರಿ ಆಗಿದೆ. ಶಾಸಕರು ಹಾಗೂ ಸಂಸದರು ರೈಲು ಮಾರ್ಗ ಪರಿಶೀಲನೆ ಮಾಡಬೇಕು. ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಳ್ಳಬೇಕು ಎಂದರು. ಇದರ ಜೊತೆಗೆ ಕುಷ್ಟಗಿ ನರಗುಂದ ಘಟಪ್ರಭಾ ರೈಲು ಮಾರ್ಗದ ಹೋರಾಟಕ್ಕೆ ಕೈಜೋಡಿಸಬೇಕು ಎಂದರು.

ಜಿಪಂ ಮಾಜಿ ಸದಸ್ಯ ಕೆ. ಮಹೇಶ ಮಾತನಾಡಿ, ನಮ್ಮ ಕುಷ್ಟಗಿ ಭಾಗದ ಅಭಿವೃದ್ಧಿಗೆ ಹೋರಾಟ ಅತ್ಯಗತ್ಯ. ಹಿಂದೆಯೂ ಕುಷ್ಟಗಿ ಪಟ್ಟಣಕ್ಕೆ ಹೆದ್ದಾರಿ ಹಾಗೂ ಕೃಷ್ಣಾ ಬಿ ಸ್ಕೀಂನ್ನು ಹೋರಾಟದ ಮೂಲಕ ಪಡೆದುಕೊಂಡಿದ್ದೇವೆ ಎಂದರು.

ನರಗುಂದ ಹೋರಾಟ ಸಮಿತಿ ಅಧ್ಯಕ್ಷ ಚನ್ನಬಸಪ್ಪ ನಂದಿ ಮಾತನಾಡಿ, ನಾವು ಈ ರೈಲು ಮಾರ್ಗಕ್ಕಾಗಿ ಒಂದು ವರ್ಷದಿಂದ ಹೋರಾಟ ನಡೆಸಿದ್ದೇವೆ. ಕುಷ್ಟಗಿ, ರೋಣ, ಗಜೇಂದ್ರಗಡ, ಯಲ್ಲಮ್ಮನಗುಡ್ಡ, ನರಗುಂದ, ಗೋಕಾಕ, ಘಟಪ್ರಭಾ, ಯಾವಗಲ್, ಬೆಳವಣಕಿ, ಯರಗಟ್ಟಿ ಜನರ ಸಹಕಾರ ಪಡೆದುಕೊಂಡು ಹೋರಾಟ ಯಶಸ್ವಿ ಮಾಡಬೇಕಿದೆ ಎಂದರು.

ವಸಂತ ಮೇಲಿನಮನಿ, ಶರಣಪ್ಪ ವಡಗೇರಿ, ಟಿ. ಬಸವರಾಜ, ಕಲ್ಲೇಶ ತಾಳದ, ಬಸವರಾಜ ಹಳ್ಳೂರು ಮಾತನಾಡಿದರು. ಮಹಾಂತಯ್ಯ ಹಿರೇಮಠ, ನಜೀರ್‌ಸಾಬ್‌ ಮೂಲಿಮನಿ, ಎಸ್.ಎಚ್‌. ಹಿರೇಮಠ, ನಬಿಸಾಬ್‌ ಕುಷ್ಟಗಿ, ಮಹಾಂತೇಶ ಕಲಬಾವಿ, ಡಾ. ರವಿಕುಮಾರ ದಾನಿ, ಮಹಾಂತಯ್ಯ ಅರಳೇಲಿಮಠ, ಬಸವರಾಜ ಗಾಣಿಗೇರ, ಕಿರಣಜ್ಯೋತಿ ಹಾಗೂ ನರಗುಂದ ಹೊರಾಟ ಸಮಿತಿಯ ಪದಾಧಿಕಾರಿಗಳಾದ ಜ್ಯೋತಿಬಾ, ಮಾರುತಿ ಬೋಸಲೆ, ಶಿವಯೋಗಿ ಬೆಂಡಗೇರಿ ಇದ್ದರು.