ವಿದ್ಯಾರ್ಥಿಗಳಾದ ನೀವು ಮುಂದೆ 18 ವರ್ಷದ ನಂತರ ಮತದಾರರಾಗುತ್ತೀರಿ, ನೀವು ನೀಡುವ ಮತ ದೇಶದ ಭವಿಷ್ಯವನ್ನು ನಿರ್ಧರಿಸುವಂತದ್ದು ಎಂಬುದನ್ನು ಅರಿತು ಪವಿತ್ರವಾದ ನಿಮ್ಮ ಹಕ್ಕು ಚಲಾಯಿಸಿ ಎಂದು ಕಿವಿಮಾತು ಹೇಳಿದರು.
ಕೋಲಾರ:ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಮತದಾನಕ್ಕೆ ಹೆಚ್ಚಿನ ಮಹತ್ವವಿದೆ.ಹಣ,ಆಮಿಷಗಳಿಗೆ ಕಡಿವಾಣ ಹಾಕಿ ದೇಶಕ್ಕಾಗಿ ಉತ್ತಮ ವ್ಯಕ್ತಿಯ ಆಯ್ಕೆ ನಮ್ಮೆಲ್ಲರ ಕರ್ತವ್ಯವಾಗಬೇಕು ಮತ್ತು ಎಲ್ಲಾ ಅರ್ಹ ಮತದಾರರು ಹಕ್ಕು ಚಲಾಯಿಸಬೇಕು ಎಂದು ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ತಾಹೇರಾನುಸ್ರತ್ ತಿಳಿಸಿದರು.ಶಾಲೆಯ ಆವರಣದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮತದಾನದ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದರು.ವಿದ್ಯಾರ್ಥಿಗಳಾದ ನೀವು ಮುಂದೆ 18 ವರ್ಷದ ನಂತರ ಮತದಾರರಾಗುತ್ತೀರಿ, ನೀವು ನೀಡುವ ಮತ ದೇಶದ ಭವಿಷ್ಯವನ್ನು ನಿರ್ಧರಿಸುವಂತದ್ದು ಎಂಬುದನ್ನು ಅರಿತು ಪವಿತ್ರವಾದ ನಿಮ್ಮ ಹಕ್ಕು ಚಲಾಯಿಸಿ ಎಂದು ಕಿವಿಮಾತು ಹೇಳಿದರು.ಶಿಕ್ಷಕಿ ಸಿದ್ದೇಶ್ವರಿ ಮಾತನಾಡಿ, ಚುನಾವಣೆಯಲ್ಲಿ ನಿರ್ಭೀತಿಯಿಂದ ಧರ್ಮ, ಜನಾಂಗ, ಜಾತಿ, ಮತ, ಭಾಷೆ ಅಥವಾ ಯಾವುದೇ ಪ್ರೇರಣೆಗಳ ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೇ ಮತ ಚಲಾಯಿಸುತ್ತೇವೆಂದು ಪ್ರತಿಜ್ಞೆ ಮಾಡೋಣ ಎಂದು ತಿಳಿಸಿದರು.
ಶಿಕ್ಷಕ ಎಂ.ಆರ್.ಗೋಪಾಲಕೃಷ್ಣ ಮಾತನಾಡಿ, ಮತದಾನದಂದು ರಜೆ ಹಾಕಿ ಪ್ರವಾಸ ಹೋಗುವ ಮೂಲಕ ನಮ್ಮ ಹಕ್ಕಿನಿಂದ ನಾವು ವಂಚಿತವಾಗುವುದು ದೇಶಕ್ಕೆ ಮಾಡಿದ ದ್ರೋಹ, ಪ್ರತಿಯೊಬ್ಬರೂ ಮತದಾನ ಮಾಡಲೇಬೇಕು, ಮತದಾನದ ಸಂದರ್ಭದಲ್ಲಿ ರಹಸ್ಯ ಕಾಪಾಡಬೇಕು ಎಂದು ತಿಳಿಸಿದರು.ಶಿಕ್ಷಕರಾದ ಭವಾನಿ, ವೆಂಕಟರೆಡ್ಡಿ, ಶ್ವೇತಾ, ಸುಗುಣಾ, ಲೀಲಾ, ಶ್ರೀನಿವಾಸಲು, ರಮಾದೇವಿ, ಚೈತ್ರಾ ಮತ್ತಿತರರಿದ್ದರು.