ತಿರಂಗಾ ಯಾತ್ರೆಯಲ್ಲಿ ಪಕ್ಷಾತೀತವಾಗಿ ಭಾಗವಹಿಸಿ: ವೆಂಕಟೇಶ ನಾರಾಯಣಿ

| Published : May 23 2025, 12:14 AM IST

ಸಾರಾಂಶ

ಕಳೆದ ತಿಂಗಳು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ದೇಶದ 26 ಪ್ರಜೆಗಳನ್ನು ಪಾಕಿಸ್ತಾನ ಉಗ್ರರು ಹತ್ಯೆಗೈದು ಹೀನಕೃತ್ಯ ನಡೆಸಿದ್ದರು.

ಹಾವೇರಿ: ಆಪರೇಷನ್ ಸಿಂದೂರ ಹೆಸರಿನಲ್ಲಿ ಪಾಕಿಸ್ತಾನ ಸೇನಾ ನೆಲೆಗಳನ್ನು ಧ್ವಂಸ ಮಾಡಿದ ಭಾರತೀಯ ಸೈನಿಕರಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ನಗರದಲ್ಲಿ ಮೇ 23ರಂದು ಬೆಳಗ್ಗೆ 10.30ಕ್ಕೆ ಬೃಹತ್ ತಿರಂಗಾ ಯಾತ್ರೆ ಹಮ್ಮಿಕೊಂಡಿದ್ದು, ಪ್ರತಿಯೊಬ್ಬ ದೇಶಭಕ್ತರು ಪಕ್ಷಾತೀತ ಹಾಗೂ ಜಾತ್ಯತೀತವಾಗಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮುಖಂಡ ವೆಂಕಟೇಶ ನಾರಾಯಣಿ ತಿಳಿಸಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ತಿಂಗಳು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ದೇಶದ 26 ಪ್ರಜೆಗಳನ್ನು ಪಾಕಿಸ್ತಾನ ಉಗ್ರರು ಹತ್ಯೆಗೈದು ಹೀನಕೃತ್ಯ ನಡೆಸಿದ್ದರು. ಈ ಘಟನೆಯನ್ನು ಭಾರತ ತೀವ್ರವಾಗಿ ಖಂಡಿಸಿತ್ತು. ದೇಶದ ಮೂರು ಸೇನೆಯ ಮುಖ್ಯಸ್ಥರು ಒಟ್ಟಿಗೆ ನಡೆಸಿದ ಅಪರೇಷನ್ ಸಿಂದೂರ ಹೆಸರಿನ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಒಂಬತ್ತು ಉಗ್ರರ ಅಡಗುತಾಣಗಳನ್ನು ಮಟ್ಟ ಹಾಕುವಲ್ಲಿ ಹಾಗೂ 11 ವಾಯುನೆಲೆಗಳನ್ನು ಧ್ವಂಸ ಮಾಡುವಲ್ಲಿ ಭಾರತೀಯ ಸೈನಿಕರು ಯಶಸ್ವಿಯಾದರು. ಈ ಹಿನ್ನೆಲೆ ಎಲ್ಲ ಸೈನಿಕರಿಗೆ ಗೌರವ ಕೊಡುವ ಸಲುವಾಗಿ ಹಾವೇರಿ ವಿಧಾನಸಭಾ ಕ್ಷೇತ್ರದಲ್ಲಿ ಮೇ 23ರಂದು ಬೃಹತ್ ತಿರಂಗಾ ಯಾತ್ರೆ ಹಮ್ಮಿಕೊಂಡಿದೆ. ಅಂದು ಬೆಳಗ್ಗೆ 10.30ಕ್ಕೆ ಪುರಸಿದ್ದೇಶ್ವರ ದೇವಸ್ಥಾನದಿಂದ ಮೈಲಾರ ಮಹದೇವಪ್ಪ ವೃತ್ತದವರೆಗೆ ಯಾತ್ರೆ ನಡೆಯಲಿದ್ದು, ನಗರದ ನಾಗರಿಕರು, ದೇಶಭಕ್ತರು, ಇಲಾಖಾವಾರು ಅಧಿಕಾರಿ, ಸಿಬ್ಬಂದಿ, ವೈದ್ಯ ಸಂಘಟನೆ, ದಲಿತ ಸಂಘಟನೆ, ಆಟೋ ಚಾಲಕರು, ವಕೀಲರ ಸಂಘಟನೆ, ಕಾರ್ಮಿಕ ಸಂಘಟನೆ ಹೀಗೆ ಸಂಘ- ಸಂಸ್ಥೆಗಳ ಪದಾಧಿಕಾರಿಗಳು ಜಾತಿ ಮತಭೇದ- ಭಾವ ಬದಿಗೊತ್ತಿ ಪಕ್ಷಾತೀತ ಮತ್ತು ಜಾತ್ಯತೀತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ತಿಳಿಸಿದರು.ಜಿಪಂ ಮಾಜಿ ಅದ್ಯಕ್ಷ ಪರಮೇಶ್ವರಪ್ಪ ಮೇಗಳಮನಿ ಮಾತನಾಡಿದರು. ಪ್ರಮುಖರಾದ ಕೆ.ಸಿ. ಕೋರಿ, ಶಿವಯೋಗಿ ಹುಲಿಕಂತಿಮಠ, ಹೊನ್ನಪ್ಪ ಯಲಿಗಾರ, ವಿರೂಪಾಕ್ಷಪ್ಪ ಬೆನ್ನೂರ, ಹನುಮಂತ ದಾಸರ, ಸುಭಾಷ, ಪ್ರಕಾಶ, ಆಂಜನೇಯ ಸೇರಿದಂತೆ ಇತರರು ಇದ್ದರು. ಜಿಲ್ಲೆಯಲ್ಲಿ ಮುಂದುವರಿದ ಮಳೆ

ಹಾವೇರಿ: ಜಿಲ್ಲಾದ್ಯಂತ ಗುರುವಾರ ಕೂಡ ಮೋಡ ಕವಿದ ವಾತಾವಣದೊಂದಿಗೆ ಆಗಾಗ್ಗೆ ಜಿಟಿ ಜಿಟಿ ಮಳೆಯಾಗಿದೆ.

ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಮಲೆನಾಡಿನ ವಾತಾವರಣ ನಿರ್ಮಾಣಗೊಂಡಿದ್ದು, ತಂಪುಗಾಳಿಯೊಂದಿಗೆ ಆಗಾಗ್ಗೆ ಜಟಿ ಜಿಟಿ ಮಳೆಯಾಗುತ್ತಿದೆ.ಜಿಲ್ಲೆಯ ಹಿರೇಕೆರೂರು, ಬ್ಯಾಡಗಿ, ಹಾನಗಲ್ಲ, ಶಿಗ್ಗಾಂವಿ, ರಾಣಿಬೆನ್ನೂರು, ರಟ್ಟೀಹಳ್ಳಿ, ಹಾವೇರಿ ಸೇರಿದಂತೆ ಬಹುತೇಕ ಎಲ್ಲ ತಾಲೂಕುಗಳಲ್ಲಿ ಮೋಡ ಕವಿದ ವಾತಾವರಣವಿತ್ತು. ಗುರುವಾರ ಸಹ ಬೆಳಗ್ಗೆಯಿಂದಲೇ ಮೋಡ ಕವಿದು ಆಗಾಗ್ಗೆ ಜಿಟಿ ಜಿಟಿ ಮಳೆಯಾಗುತ್ತಿದ್ದರಿಂದ ವಾತಾವರಣ ತಂಪುಗೊಂಡಿದೆ. ಮಳೆಯಿಂದಾಗಿ ನಗರದ ಮಾರುಕಟ್ಟೆ ಪ್ರದೇಶ, ಗ್ರಾಮೀಣ ರಸ್ತೆಗಳು ಕೆಸರು ಗದ್ದೆಗಳಾಗಿ ಮಾರ್ಪಡುತ್ತಿದ್ದು, ಸಂಚಾರಕ್ಕೆ ಹರಸಾಹಸ ಪಡುವಂತಾಗಿದೆ.

ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಮಳೆಯಾಗುತ್ತಿದ್ದರಿಂದ ರೈತರು ಬಿತ್ತನೆಗೆ ಸಿದ್ಧತೆ ನಡೆಸಿದ್ದು, ಜಿಟಿ ಜಿಟಿ ಮಳೆಯ ನಡುವೆಯೇ ರೈತ ಸಂಪರ್ಕ ಕೇಂದ್ರಗಳ ಎದುರು ಸರದಿ ಸಾಲಿನಲ್ಲಿ ನಿಂತು ಬಿತ್ತನೆ ಬೀಜ, ಗೊಬ್ಬರ ಖರೀದಿಸಲು ಮುಂದಾಗಿದ್ದಾರೆ.