ಸಾರಾಂಶ
- ಸೆ.1ರಂದು ಜಿಲ್ಲೆಯಿಂದ ಹತ್ತು ಸಾವಿರಕ್ಕೂ ಹೆಚ್ಚಿನ ಕಾರ್ಯಕರ್ತರು, ಮುಖಂಡರು ಭಾಗಿ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ಪವಿತ್ರ ಕ್ಷೇತ್ರ ಧರ್ಮಸ್ಥಳ ಹೆಸರಿಗೆ ಕೆಲವರು ಕಪ್ಪುಮಸಿ ಬಳಿಯುವ ಪ್ರಯತ್ನ ನಡೆಸಿದ್ದಾರೆ. ಇದರ ವಿರುದ್ಧ ಧರ್ಮಯುದ್ಧ ಸಾರಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ 224 ವಿಧಾನಸಭಾ ಕ್ಷೇತ್ರಗಳಲ್ಲಿ ರಾಜ್ಯ ಬಿಜೆಪಿ ಯಶಸ್ವಿಯಾಗಿದೆ. ಬಿಜೆಪಿ ರಾಜ್ಯ ಅದ್ಯಕ್ಷ ಬಿ.ವೈ. ವಿಜಯೇಂದ್ರ ಸೂಚನೆಯಂತೆ ಸೆ.1ರಂದು ದಾವಣಗೆರೆ ಜಿಲ್ಲೆಯಿಂದ ಹತ್ತು ಸಾವಿರಕ್ಕೂ ಹೆಚ್ಚಿನ ಕಾರ್ಯಕರ್ತರು, ಮುಖಂಡರು ಧರ್ಮಸ್ಥಳ ಚಲೋ ಕಾರ್ಯಕ್ರಮದಡಿ ಧರ್ಮಸ್ಥಳಕ್ಕೆ ತೆರಳಿದ್ದಾರೆ ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.ಧರ್ಮಸ್ಥಳ ಚಲೋ ಕಾರ್ಯಕ್ರಮ ಹಿನ್ನೆಲೆ ಶುಕ್ರವಾರ ಸ್ವಗೃಹದಲ್ಲಿ ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕುಗಳ ಬಿಜೆಪಿ ಮುಖಂಡರು, ಕಾರ್ಯಕರ್ತರ ಪೂರ್ವಭಾವಿ ಸಭೆ ನಡೆಸಿ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಜಿಲ್ಲೆಯ ಲೋಕಸಭೆ, ವಿಧಾನ ಸಭೆ, ವಿಧಾನಪರಿಷತ್ತು, ಗ್ರಾಮ ಪಂಚಾಯಿತಿ ಸೇರಿದಂತೆ ಎಲ್ಲ ಹಂತಗಳ ಹಾಲಿ, ಮಾಜಿ ಜನಪ್ರತಿನಿಧಿಗಳು, ಕೇಂದ್ರದ ಸಚಿವರು, ಕೇಂದ್ರ ಮತ್ತು ರಾಜ್ಯಮಟ್ಟದ ಮುಖಂಡರು ಧರ್ಮಸ್ಥಳ ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಹೊನ್ನಾಳಿ- ನ್ಯಾಮತಿ ಅವಳಿ ತಾಲೂಕುಗಳಿಂದಲೂ ಸಹಸ್ರಾರು ಕಾರ್ಯಕರ್ತರು ಪಾಲ್ಗೊಳ್ಳುವರು. ಎಲ್ಲರೂ ಕಡ್ಡಾಯವಾಗಿ ಕೇಸರಿ ಶಾಲು ಹಾಗೂ ಧ್ವಜದೊಂದಿಗೆ ಭಾಗವಹಿಸಬೇಕು ಎಂದರು.ಯಾರೋ ಒಬ್ಬ ಬುರುಡೆ ವ್ಯಕ್ತಿ ಹೇಳಿದ ಎಂದ ಮಾತ್ರಕ್ಕೆ ಆ ಬಗ್ಗೆ ಅವನ ಹಿನ್ನಲೆ, ಪೂರ್ವಾಪರ ಪರಿಶೀಲನೆ ಮಾಡದೇ ರಾಜ್ಯ ಸರ್ಕಾರ ಏಕಾಎಕಿಯಾಗಿ ಎಸ್.ಐ.ಟಿ. ತನಿಖೆಗೆ ಮುಂದಾಗಿತ್ತು. ಸಮಯ, ಹಣ ಎರಡೂ ವ್ಯರ್ಥ ಮಾಡಿದೆ. ಧರ್ಮಸ್ಥಳ ಕ್ಷೇತ್ರ ಮತ್ತು ಧರ್ಮಾಧಿಕಾರಿ ಅವರಿಗೆ ಕೆಟ್ಟ ಹೆಸರು ತರುವ ಎಲ್ಲ ಹುನ್ನಾರಗಳನ್ನು ಮಾಡಲಾಗಿದೆ. ಲೋಕಸಭಾ ಸದಸ್ಯ ಸೆಂಥಿಲ್ ಕೈವಾಡ ಹಾಗೂ ಈ ಕೃತ್ಯದಲ್ಲಿ ಭಾಗಿಯಾದವರಿಗೆ ಹೊರದೇಶದಿಂದ ದೊಡ್ಡಮಟ್ಟದ ಹಣ ಬಂದಿದೆ ಎಂಬ ಶಂಕೆ ಇದೆ. ಸೆಂಥಿಲ್ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಗಕು. ಇದರ ಹಿಂದಿನ ಸತ್ಯ ಹೊರಬರಬೇಕಾದರೆ ರಾಜ್ಯ ಸರ್ಕಾರ ಎನ್.ಐ.ಎ. ಸಂಸ್ಥೆ ತನಿಖೆಗೆ ಇಡೀ ಪ್ರಕರಣ ವಹಿಸಿಕೊಡಬೇಕು ಎಂದು ಹೇಳಿದರು.
ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿ:ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಾಗಿದೆ. ಈ ಬಗ್ಗೆ ಎರಡು ಮಾತಿಲ್ಲ. ಆದರೆ, ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇಂದ್ರದ ನಾಯಕರ ಓಲೈಕೆಗಾಗಿ ಚಾಮುಂಡಿಬೆಟ್ಟದ ಕುರಿತು ಇಲ್ಲಸಲ್ಲದ ಹೇಳಿಕೆ ನೀಡಿದ್ದಾರೆ. ಈ ಹಿಂದೆ ಕಪಾಲಿ ಬೆಟ್ಟವನ್ನು ಯೇಸುವಿನ ಬೆಟ್ಟ ಮಾಡಲು ಹೊರಟಿದ್ದರು. ಡಿ.ಕೆ. ಶಿವಕುಮಾರ್ ದೊಡ್ಡ ಕಲಾಕಾರ. ಕಾಂಗ್ರೆಸ್‌ನವರು ಕೇವಲ ಅಧಿಕಾರಕ್ಕಾಗಿ ಹಿಂದಿನಿಂದಲೂ ಅಲ್ಪಸಂಖ್ಯಾತರನ್ನು ಓಲೈಸಿಕೊಂಡು ಬರುತ್ತಿದ್ದಾರೆ. ಇದು ಅವರ ಹಳೆಯ ಚಾಳಿಯಾಗಿದೆ. ಕಾಂಗ್ರೆಸ್‌ನವರಿಗೆ ಕೇಸರಿ, ಹಿಂದುತ್ವ ಕಂಡರೆ ಅಲರ್ಜಿ ಆಗುತ್ತದೆ ಎಂದು ಟೀಕಿಸಿದರು.
ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವ ಉದ್ಘಾಟನೆಗೆ ಕಾಂಗ್ರೆಸ್ ಸರ್ಕಾರ ಬುಕರ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಬಾನು ಮುಸ್ತಾಕ್ ಅವರನ್ನು ಆಹ್ವಾನಿಸಿದೆ. ಅವರೊಬ್ಬ ಉತ್ತಮ ಸಾಹಿತಿ. ತಮಗೂ ಕೂಡ ಗೌರವವಿದೆ. ಆದರೆ ಅವರು ಅರಿಶಿಣ, ಕುಂಕುಮದ ಬಗ್ಗೆ ಟೀಕೆ ಮಾಡಿದ್ದರು. ಇವರು ಹಿಂದು ಸಂಪ್ರದಾಯದ ಪ್ರಕಾರ ದಸರಾ ಉತ್ಸವ ಉದ್ಘಾಟಿಸಬೇಕು. ಕೃತಿಯ ಅನುವಾದಕಿ ದೀಪಾ ಭಾಸ್ತಿ ಅವರನ್ನು ಕೂಡ ಬಾನು ಅವರಂತೆ ಸರಿಸಮಾನ ಗೌರವದಿಂದ ಆಹ್ವಾನಿಸಬೇಕು ಎಂದು ರೇಣುಕಾಚಾರ್ಯ ಆಗ್ರಹಿಸಿದರು.ಡಿ.ಜೆ. ಅನುಮತಿ:
ಜಿಲ್ಲಾಡಳಿತ ಏನೇ ಹೇಳಿದರೂ, ರಾಜ್ಯದ ಅನೇಕ ಕಡೆಗಳಲ್ಲಿ ಡಿ.ಜೆ.ಗೆ ಅನುಮತಿ ನೀಡಲಾಗಿದೆ. ಇಡೀ ರಾಜ್ಯಕ್ಕೆ ಒಂದೇ ಕಾನೂನು. ಈ ನಿಟ್ಟಿನಲ್ಲಿ ಡಿ.ಸಿ. ಮತ್ತು ಎಸ್‌ಪಿ ಅವರೊಂದಿಗೆ ಮಾತನಾಡಿದ್ದು, ಡಿ.ಜೆ. ಸೌಂಡ್ ಬಳಕೆಗೆ ಅನುಮತಿ ಸಿಗುವ ಎಲ್ಲ ಲಕ್ಷಣಗಳು ಇವೆ ಎಂದು ರೇಣುಕಾಚಾರ್ಯ ಹೇಳಿದರು.ಈ ಸಂದರ್ಭದಲ್ಲಿ ತಾಲೂಕು ಮಂಡಲ ಅಧ್ಯಕ್ಷ ಆರಕೆರೆ ನಾಗರಾಜ್. ಮಾದೇನಹಳ್ಳಿ ಕೆ.ನಾಗರಾಜ್.ನೆಲಹೊನ್ನೆ ಮಂಜು, ಸಿ.ಆರ್.ಶಿವಾನಂದ, ಮಂಜು ಇಂಚರ, ಕೆ.ರಂಗಪ್ಪ,ಬಡಾವಣೆ ರಂಗಪ್ಪ,ಕೊನಾಯಕನಹಳ್ಳಿ ಮಂಜು, ಸುನಿಲ್, ಜುಂಜಾನಾಯ್ಕ ಸೇರಿದಂತೆ ಅನೇಕ ಮುಖಂಡರು ಇದ್ದರು.
- - --29ಎಚ್.ಎಲ್.ಐ1:
ಧರ್ಮಸ್ಥಳ ಚಲೋ ಕಾರ್ಯಕ್ರಮ ಹಿನ್ನೆಲೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು ಶುಕ್ರವಾರ ಸ್ವಗೃಹದಲ್ಲಿ ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕುಗಳ ಬಿಜೆಪಿ ಮುಖಂಡರು, ಕಾರ್ಯಕರ್ತರ ಪೂರ್ವಭಾವಿ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.