ಸಾರಾಂಶ
ಮೈಸೂರು ದಸರಾಗೂ ಮುಂಚೆಯೇ ಆರಂಭಗೊಂಡಿದ್ದ ಶ್ರೀರಂಗಪಟ್ಟಣ ದಸರಾ ಕೆಲ ವರ್ಷಗಳ ಕಾಲ ಕಾರಣಾಂತರಗಳಿಂದ ಸ್ಥಗಿತಗೊಂಡಿತ್ತು. ಮಾಜಿ ಶಾಸಕಿ ವಿಜಯಲಕ್ಷ್ಮಮ್ಮ ಅವರು ಶಾಸಕರಾಗಿದ್ದ ವೇಳೆ ಮತ್ತೆ ಆರಂಭಗೊಂಡಿತ್ತು. ಈಗ ಬಹಳ ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ದಸರಾ ಮೆರವಣಿಗೆಗೆ ಚಾಲನೆ ನೀಡುವ ಮುನ್ನ ನಟ ಡಾ.ಶಿವರಾಜ್‌ಕುಮಾರ್ ಮಾತನಾಡಿ, ಮೈಸೂರು ದಸರಾ ಆಚರಣೆಗೂ ಮುಂಚೆಯೇ ಶ್ರೀರಂಗಪಟ್ಟಣದಲ್ಲಿ ದಸರಾ ಆರಂಭಗೊಂಡಿತ್ತು. ಈ ವಿಶೇಷ ಹಿನ್ನೆಲೆಯುಳ್ಳ ಶ್ರೀರಂಗಪಟ್ಟಣ ದಸರಾ ಉದ್ಘಾಟನೆಯಲ್ಲಿ ಭಾಗಿಯಾಗಿರುವುದು ನನ್ನ ಪುಣ್ಯ ಎಂದರು. ಇದೇ ವೇಳೆ ಅಭಿಮಾನಿಯೊಬ್ಬರು ನಾನು ನಿಮ್ಮ ಅಭಿಮಾನಿ ಎಂಬ ಕೂಗಿಗೆ ದ್ವನಿಗೂಡಿಸಿದ ಶಿವರಾಜ್‌ಕುಮಾರ್ ಮೊದಲು ದಸರಾ ಅಭಿಮಾನಿಯಾಗಿ ಎಂದು ಹೇಳಿದರು.ದಸರಾ ವಿಜೃಂಭಣೆಯಿಂದ ಆಚರಣೆ:
ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಮೈಸೂರು ದಸರಾಗೂ ಮುಂಚೆಯೇ ಆರಂಭಗೊಂಡಿದ್ದ ಶ್ರೀರಂಗಪಟ್ಟಣ ದಸರಾ ಕೆಲ ವರ್ಷಗಳ ಕಾಲ ಕಾರಣಾಂತರಗಳಿಂದ ಸ್ಥಗಿತಗೊಂಡಿತ್ತು. ಮಾಜಿ ಶಾಸಕಿ ವಿಜಯಲಕ್ಷ್ಮಮ್ಮ ಅವರು ಶಾಸಕರಾಗಿದ್ದ ವೇಳೆ ಮತ್ತೆ ಆರಂಭಗೊಂಡಿತ್ತು. ಈಗ ಬಹಳ ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ನಾಲ್ಕು ದಿನಗಳ ಕಾಲ ದಸರಾ ಆಚರಣೆಗೆ ಚಾಲನೆ ನೀಡಲಾಗಿದೆ. ವೇದಿಕೆ ಕಾರ್ಯಕ್ರಮದಲ್ಲಿ ಆಹಾರ ಮೇಳ, ರೈತ ಮೇಳ ಸೇರಿದಂತೆ ಹತ್ತು ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ದಸರಾ ವೈಭವ ಮರುಕಳಿಸುತ್ತಿದೆ:
ಕಂದಾಯ ಸಚಿವ ಕೃಷ್ಣ ಭೈರೇಗೌಡ ಮಾತನಾಡಿ, ಮೈಸೂರು, ಮಂಡ್ಯ, ಶ್ರೀರಂಗಪಟ್ಟಣದಲ್ಲಿ ಮಾತ್ರ ನಮಗೆ ದಸರಾ ನೋಡಲು ಸಾಧ್ಯ. ನೂರಾರು ವರ್ಷಗಳ ಇತಿಹಾಸ ಶ್ರೀರಂಗಪಟ್ಟಣದಲ್ಲಿ ಕಾಣಸಿಗಲಿದೆ. ಮತ್ತೊಮ್ಮೆ ವೈಭವ ಮರುಕಳಿಸುವಂತೆ ಮಾಡಿದೆ ಎಂದರು.ಈ ವೇಳೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸ್ಥಳೀಯ ಶಾಸಕ ರಮೇಶ ಬಂಡಿಸಿದ್ದೇಗೌಡ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ, ಪಿ. ರವಿಕುಮಾರ್ ಗಣಿಗ, ಜಿಲ್ಲಾಧಿಕಾರಿ ಕುಮಾರ್, ಮಾಜಿ ಶಾಸಕಿ ವಿಜಯಲಕ್ಷ್ಮಮ್ಮ , ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಜಿಪಂ ಸಿಇಒ ಶೇಖ್ ತನ್ವಿರ್ ಆಸೀಫ್, ಪುರಸಭೆ ಸದಸ್ಯರು ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.