ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಮುಖ್ಯ: ಸಂಜಯ ಕೊತ್ಬಾಳ್

| Published : Aug 25 2024, 01:52 AM IST / Updated: Aug 25 2024, 01:53 AM IST

ಸಾರಾಂಶ

ಆಟದಲ್ಲಿ ಸೋಲು ಗೆಲುವು ಸಹಜ. ಆದರೆ ಕ್ರೀಡೆಯಲ್ಲಿ ಭಾಗವಹಿಸಿದ ಸಂತೋಷ ನಮಗಿರಬೇಕು. ಅಧ್ಯಯನದ ಜತೆಗೆ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಶ್ರೀ ಜಗದ್ಗುರು ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯ ಚೇರ್‌ಮನ್‌ ಸಂಜಯ ಕೊತ್ಬಾಳ್ ಹೇಳಿದ್ದಾರೆ.

ಕೊಪ್ಪಳ: ಕ್ರೀಡೆಯಲ್ಲಿ ಸೋಲು-ಗೆಲುವಿಗಿಂತ ಅದರಲ್ಲಿ ಭಾಗವಹಿಸುವುದು ಬಹಳ ಮುಖ್ಯ ಎಂದು ಶ್ರೀ ಜಗದ್ಗುರು ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯ ಚೇರ್‌ಮನ್‌ ಸಂಜಯ ಕೊತ್ಬಾಳ್ ಹೇಳಿದ್ದಾರೆ.ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕರ್ನಾಟಕ ಸಹಯೋಗದೊಂದಿಗೆ ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯದಲ್ಲಿ ಆರ್‌ಜಿಯುಎಚ್‌ಎಸ್‌ ಕಲ್ಬುರ್ಗಿ ವಿಭಾಗ ಮಟ್ಟದ ಪುರುಷ ಮತ್ತು ಮಹಿಳಾ ಷಟಲ್ ಪಂದ್ಯಾವಳಿಯ ಸಮಾರೋಪದಲ್ಲಿ ಭಾಗವಹಿಸಿ ಮಾತನಾಡಿದರು. ಆಟದಲ್ಲಿ ಸೋಲು ಗೆಲುವು ಸಹಜ. ಆದರೆ ಕ್ರೀಡೆಯಲ್ಲಿ ಭಾಗವಹಿಸಿದ ಸಂತೋಷ ನಮಗಿರಬೇಕು. ನಮ್ಮ ಮಹಾವಿದ್ಯಾಲಯ ಇಂತಹ ಕ್ರೀಡಾ ಚಟುವಟಿಕೆಗೆ ಸದಾ ಪ್ರೋತ್ಸಾಹ ನೀಡುತ್ತದೆ. ಅಧ್ಯಯನದ ಜತೆಗೆ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಕ್ರೀಡೆಗಳು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸದೃಢಗೊಳಿಸುತ್ತವೆ. ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಕೇವಲ ವೈದ್ಯಕೀಯ ಚಟುವಟಿಕೆಗೆ ಅಲ್ಲದೆ ಕ್ರೀಡಾ ಚಟುವಟಿಕೆಗೂ ಪ್ರೋತ್ಸಾಹ ನೀಡುತ್ತಿರುವುದು ಬಹಳ ಸಂತೋಷ ತಂದಿದೆ ಎಂದರು.

ಪ್ರಾಚಾರ್ಯ ಡಾ. ಎಂ.ಎಂ. ಸಾಲಿಮಠ ಮಾತನಾಡಿ, ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಕ್ರೀಡೆಯಿಂದ ಎಲ್ಲ ತೆರನಾದ ದೈಹಿಕ, ಮಾನಸಿಕ ಸದೃಢತೆಯ ಜತೆಗೆ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬಹುದು ಎಂದರು.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕಲಬುರ್ಗಿ ವಿಭಾಗದ ನಿಯೋಜಿತ ಸಂಯೋಜಕ ಹನುಮಂತ ಪವಾರ ಮಾತನಾಡಿದರು.

ಪುರುಷರ ವಿಭಾಗದಲ್ಲಿ - ನವೋದಯ ಮೆಡಿಕಲ್ ಕಾಲೇಜ್ ರಾಯಚೂರು ಪ್ರಥಮ ಸ್ಥಾನ, ಶ್ರೀ ನಿಜಲಿಂಗಪ್ಪ ಮೆಡಿಕಲ್ ಕಾಲೇಜು ಬಾಗಲಕೋಟೆ ದ್ವಿತೀಯ ಸ್ಥಾನ, ಕೊಪ್ಪಳ ವೈದ್ಯಕೀಯ ಮಹಾವಿದ್ಯಾಲಯ ತೃತೀಯ ಸ್ಥಾನ ಅಲ್ ಅಮಿನ್ ಮೆಡಿಕಲ್ ಕಾಲೇಜ್ ವಿಜಯಪುರ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ.

ಮಹಿಳೆಯರ ವಿಭಾಗದಲ್ಲಿ -ಶ್ರೀ ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಬಾಗಲಕೋಟೆ, ಪ್ರಥಮ ಸ್ಥಾನ, ಕೊಪ್ಪಳ ವೈದಕೀಯ ಮಹಾವಿದ್ಯಾಲಯ ದ್ವಿತಿಯ ಸ್ಥಾನ ಶ್ರೀ ವಿಜಯಾಮಹಾಂತೇಶ್ ಆಯುರ್ವೇದ ಮಹಾವಿದ್ಯಾಲಯ, ಇಳಕಲ್ ತೃತೀಯ ಸ್ಥಾನ, ಶ್ರೀಮತಿ ಶಾಂತಾದೇವಿ ಆಯುರ್ವೇದ ಮಹಾವಿದ್ಯಾಲಯ ಬಾಗಲಕೋಟೆ ನಾಲ್ಕನೇ ಸ್ಥಾನ ಪಡೆದುಕೊಂಡಿರುತ್ತಾರೆ.

ಒಟ್ಟು 21 ಪುರುಷರ ಹಾಗೂ 9 ಮಹಿಳೆಯರ ತಂಡಗಳು ಭಾಗವಹಿಸಿದ್ದರು. ಕ್ರೀಡಾ ತರಬೇತುದಾರರಾದ ಡಾ. ಜಗದೀಶ್, ಡಾ. ವಿಜಯಕುಮಾರ್ ಹಿರೇಮಠ, ಶ್ರೀ ಚಂದ್ರಕಾಂತ, ಈಶಪ್ಪ ದೊಡ್ಡಮನಿ ಹಾಗೂ ಮಹಾವಿದ್ಯಾಲಯದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.