ಸಾರಾಂಶ
ಯೂತ್ ಹಾಸ್ಟೆಲ್ ತರುಣೋದಯ ಘಟಕದಿಂದ ಆಯೋಜನೆ । ವಿಶ್ರಾಂತಿಗೆ ಪ್ರವಾಸ ಸಹಕಾರಿ
ಕನ್ನಡಪ್ರಭ ವಾರ್ತೆ ಶಿವಮೊಗ್ಗಚಾರಣದಲ್ಲಿ ಪಾಲ್ಗೊಳ್ಳುವುದರಿಂದ ಆತ್ಮವಿಶ್ವಾಸ ವೃದ್ಧಿಸುವ ಜತೆಯಲ್ಲಿ ಮಾನಸಿಕ ಸಾಮಾರ್ಥ್ಯ ಹೆಚ್ಚಾಗುತ್ತದೆ ಎಂದು ಯೂತ್ ಹಾಸ್ಟೆಲ್ ತರುಣೋದಯ ಘಟಕದ ಅಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.
ನಗರದಲ್ಲಿ ಯೂತ್ ಹಾಸ್ಟೆಲ್‌ನಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತಿ, ಡಾ. ಗುರುಪಾದಪ್ಪ ದಂಪತಿಯನ್ನು ಸನ್ಮಾನಿಸಿ ಮಾತನಾಡಿ, ಒತ್ತಡದ ಜೀವನಶೈಲಿಯಲ್ಲಿ ಎಲ್ಲರೂ ಕೆಲಸ ಮಾಡುತ್ತಿದ್ದು, ವಿಶ್ರಾಂತಿ ಪಡೆಯಲು ಚಾರಣ ಪ್ರವಾಸ ತುಂಬಾ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.ವಾಗೇಶ್ ಅವರು ಚೇರ್ಮನ್ ಆಗಿ ಅಧಿಕಾರ ವಹಿಸಿಕೊಂಡ ನಂತರ ನಮ್ಮ ತರುಣೋದಯ ಘಟಕ ಸದಸ್ಯತ್ವದಲ್ಲಿ ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿದೆ. ರಾಷ್ಟ್ರಮಟ್ಟದ ಚಾರಣಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕಳಿಸಲು ಸಾಧ್ಯವಾಗಿರುವುದು ಈ ರೀತಿಯ ಚಲನಶೀಲ ಸದಸ್ಯರು ಕಾರಣ. ಇದೇ ರೀತಿ ಇನ್ನು ಹೆಚ್ಚಿನ ಸದಸ್ಯರು ತಮ್ಮೊಂದಿಗೆ ಇತರರನ್ನು ಕರೆದುಕೊಂಡು ಬಂದು ರಾಜ್ಯದಲ್ಲೇ ನಮ್ಮ ಘಟಕ ಪ್ರಥಮ ಸ್ಥಾನ ಗಳಿಸಬೇಕು ಎಂದರು.
ಯೂತ್ ಹಾಸ್ಟೆಲ್ಸ್ ರಾಜ್ಯ ಮಾಜಿ ಉಪಾಧ್ಯಕ್ಷ ವಿಜಯಕುಮಾರ್ ಮಾತನಾಡಿ, ಉತ್ತಮ ಆರೋಗ್ಯಕ್ಕೆ ಚಾರಣ ಅತ್ಯುತ್ತಮ ಎಂದು ವೈದ್ಯರೂ ಸಹ ಭಾಗವಹಿಸುತ್ತಿದ್ದಾರೆ. ಇವರ ಸಮಾಜಮುಖಿ ಕಾರ್ಯ ನಿವೃತಿ ನಂತರವು ಮುಂದುವರಿಯಲಿ ಎಂದು ಆಶಿಸಿದರು.ಸನ್ಮಾನ ಸ್ವೀಕರಿಸಿದ ಡಾ. ಗುರುಪಾದಪ್ಪ ಮಾತನಾಡಿ, ಕಾರ್ಯ ನಿಮಿತ್ತ ಶಿವಮೊಗ್ಗಕ್ಕೆ ಬಂದಾಗ, ಚಾರಣದ ಆಸಕ್ತಿಯಿದ್ದ ನಮಗೆ ತರುಣೋದಯ ಘಟಕದ ಪರಿಚಯವಾಗಿ, ಸದಸ್ಯತ್ವ ಪಡೆದು ಇವರು ಆಯೋಜಿಸುವ ಕಾರ್ಯಕ್ರಮ ಹಾಗೂ ಇವರು ತೆಗೆದುಕೊಳ್ಳುವ ಜವಾಬ್ದಾರಿ ಉತ್ತಮ ಆಹಾರ, ಸ್ನೇಹ ಬಾಂಧವ್ಯಗಳನ್ನು ಕಂಡು ಮನಸೋತು, ಸ್ನೇಹಿತರಿಗೆ, ಸಹೋದ್ಯೋಗಿಗಳಿಗೆ ತಿಳಿಸಿದಾಗ ಅವರು ಸಹ ಸದಸ್ಯತ್ವ ಪಡೆದಿದ್ದಾರೆ. ನಾವು ಮಾತ್ರ ಸಂತೋಷ ಪಡುವುದರ ಬದಲು, ನಮ್ಮ ಪರಿಚಿತರೊಂದಿಗೆ, ಹೊಸಬರನ್ನು ಪರಿಚಯ ಮಾಡಿಕೊಂಡು, ಅವರೊಂದಿಗೆ ಚಾರಣ ಮಾಡುವ ಅನುಭವ ಅನನ್ಯ. ಎಲ್ಲರೂ ಆರೋಗ್ಯ ದೃಢತೆಗೆ, ಮನಃ ಸಂತೋಷಕ್ಕೆ ತಪ್ಪದೆ ಚಾರಣದಲ್ಲಿ ಭಾಗವಹಿಸಬೇಕು ಎಂದರು.
ಭಾರತಿ, ಡಾ.ಗುರುಪಾದಪ್ಪ ದಂಪತಿ ಚಾರಣದಲ್ಲಿ ತಾವು ಪಾಲ್ಗೊಳ್ಳುವ ಜತೆಯಲ್ಲಿ ಸಂಬಂಧಿ, ಸ್ನೇಹಿತರು, ಸಹೋದ್ಯೋಗಿಗಳಿಗೂ ಭಾಗವಹಿಸುವಂತೆ ಪ್ರೊತ್ಸಾಹಿಸುವ ಕೆಲಸ ಮಾಡುತ್ತಿದ್ದು, ಸ್ಥಳೀಯ, ರಾಜ್ಯ, ರಾಷ್ಟ್ರೀಯ ಚಾರಣಗಳಿಗೆ ಕರೆದುಕೊಂಡು ಹೋಗುತ್ತಾರೆ. ವಯೋನಿವೃತ್ತಿ ಸಂದರ್ಭದಲ್ಲಿ ಯೂತ್ ಹಾಸ್ಟೆಲ್‌ನಿಂದ ವಿಶೇಷವಾಗಿ ಸನ್ಮಾನಿಸಲಾಯಿತು.ಮಮತಾ ಪ್ರಾರ್ಥಿಸಿದರು. ಚೇರ್ಮನ್ ಎಸ್.ಎಸ್.ವಾಗೇಶ್ ಸ್ವಾಗತಿಸಿದರು. ಕಾರ್ಯದರ್ಶಿ ಸುರೇಶ್ ಕುಮಾರ್ ನಿರೂಪಿಸಿದರು. ಮಲ್ಲಿಕಾರ್ಜುನ್ ಕಾನೂರು ವಂದಿಸಿದರು. ರವಿಕುಮಾರ್, ನಾಗಲಾಂಭಿಕ, ಬಿಂದು ವಿಜಯಕುಮಾರ್, ವಿಜಯೇಂದ್ರ ಇತರರು ಇದ್ದರು.