ಸಾರಾಂಶ
ಮಳವಳ್ಳಿ: ವಿದ್ಯಾರ್ಥಿಗಳು ಓದುವ ಜೊತೆಗೆ ಕ್ರೀಡಾಕೂಟದಲ್ಲಿ ಭಾಗವಹಿಸುವುದೂ ಗೆಲುವಿನಷ್ಟೇ ಮುಖ್ಯ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು. ಪಟ್ಟಣದ ಶ್ರೀ ಭಕ್ತಕನಕದಾಸ ಕ್ರೀಡಾಂಗಣದಲ್ಲಿ ನಡೆದ 14 ಮತ್ತು 17 ವರ್ಷದೊಳಗಿನ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಬಾಲಕ ಬಾಲಕಿಯರ ಜಿಲ್ಲಾಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು. ಕ್ರೀಡೆಯಲ್ಲಿ ಭಾಗವಹಿಸಿದರೆ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ. ಗ್ರಾಮೀಣ ವಿದ್ಯಾರ್ಥಿಗಳು ತಮ್ಮಲ್ಲಿನ ಕೀಳರಿಮೆ ಬಿಟ್ಟು ಪ್ರತಿಭೆ ಅನಾವರಣಗೊಳಿಸುವುದರ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ಪಡೆಯಬೇಕೆಂದು ಸಲಹೆ ನೀಡಿದರು. ಪುರಸಭೆ ಸದಸ್ಯ ನೂರುಲ್ಲಾ, ಶಿಕ್ಷಣ ಇಲಾಖೆ ಉಪನಿರ್ದೇಶಕ (ಅಭಿವೃದ್ಧಿ) ಪುರುಷೋತ್ತಮ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಸ್. ಲಿಂಗರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ ರಾಜು, ಕ್ಷೇತ್ರ ಸಮಾನ್ವಯಾಧಿಕಾರಿ ಎಂ.ಕೆ ಶ್ರೀನಿವಾಸ್, ಎಸ್‌ಡಿಎಂಸಿ ಅಧ್ಯಕ್ಷ ಪ್ರಕಾಶ್ ಸೇರಿದಂತೆ ಜಿಲ್ಲೆಯ ಎಂಟು ತಾಲೂಕಿನ ದೈಹಿಕ ಶಿಕ್ಷಣಾಧಿಕಾರಿಗಳು, ಎಲ್ಲಾ ತಾಲೂಕಿನ ಕ್ರೀಡಾಕೂಟದ ವ್ಯವಸ್ಥಾಪಕರು, ತಾಲೂಕಿನ ಎಲ್ಲಾ ದೈಹಿಕ ಶಿಕ್ಷಕರು, ಅನುಷ್ಠಾನ ಅಧಿಕಾರಿಗಳು ಇದ್ದರು.