ಸಾರಾಂಶ
ಮೂಡುಬೆಳ್ಳೆ ಲಯನ್ಸ್ ಸೇವಾ ಭವನದಲ್ಲಿ ಆಟಿಡೊಂಜಿ ದಿನ” ಕಾರ್ಯಕ್ರಮ ನಡೆಯಿತು. ಉಡುಪಿ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಡಾ.ಪ್ರಜ್ಞಾ ಮಾರ್ಪಳ್ಳಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಕಾಪು
ಆಟಿ ತಿಂಗಳ ವಿಶೇಷತೆಯನ್ನು ಒಂದು ಸಂಭ್ರಮದ ದಿನವನ್ನಾಗಿ ಆಚರಿಸುವುದರ ಜೊತೆಗೆ ತುಳುನಾಡಿನ, ತುಳುವರ ಭಾಷೆ, ಸಂಸ್ಕೃತಿಯ ಸೊಬಗನ್ನು ಮುಂದಿನ ತಲೆಮಾರಿಗೆ ತಲುಪಿಸುವ ಮಹತ್ತರವಾದ ಜವಾಬ್ದಾರಿ ನಮ್ಮದಾಗಲಿ. ಈ ಮಣ್ಣಿನ ಸೊಗಡನ್ನು, ಕಾಯುವ ದೈವಗಳನ್ನು, ಔಷದ ಆಹಾರ ಪದ್ದತಿಗಳನ್ನು ಉಳಿಸಿ ಬೆಳೆಸುವಲ್ಲಿ ನಮ್ಮ ಪಾತ್ರವನ್ನು ನಾವು ಇಂತಹ ಕೂಟಗಳ ಮೂಲಕ ಅರಿತುಕೊಳ್ಳುವಂತಾಗಬೇಕು, ಆಟಿಕೂಟಗಳು ನಮ್ಮ ಬದುಕಿಗೆ ಪಾಠವಾಗಬೇಕು ಎಂದು ಉಡುಪಿ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಡಾ.ಪ್ರಜ್ಞಾ ಮಾರ್ಪಳ್ಳಿ ಅಭಿಪ್ರಾಯಪಟ್ಟರು. ಅವರು ಭಾನುವಾರ ಮೂಡುಬೆಳ್ಳೆ ಲಯನ್ಸ್ ಸೇವಾ ಭವನದಲ್ಲಿ ಜರುಗಿದ “ಆಟಿಡೊಂಜಿ ದಿನ” ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.ಕಾರ್ಯಕ್ರಮವನ್ನು ಲಯನ್ಸ್ 317 ಸಿ. ಜಿಲ್ಲಾ ಉಪಗವರ್ನರ್ ಹರಿಪ್ರಸಾದ್ ರೈ ಉದ್ಘಾಟಿಸಿ ಶುಭ ಹಾರೈಸಿದರು. ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ, ಕೋಶಾಧಿಕಾರಿ ತೆರೆಜಾ ಲೋಬೊ, ಲಿಯೊ ಪ್ರಿನ್ಸನ್ ವೇದಿಕೆಯಲ್ಲಿದ್ದರು.ಸಮಾರಂಭದ ಅಧ್ಯಕ್ಷತೆಯನ್ನು ಮೂಡುಬೆಳ್ಳೆ ಲಯನ್ಸ್ ಅಧ್ಯಕ್ಷೆ ಲವಿನಾ ಬರ್ಬೋಜ ವಹಿಸಿ ಸ್ವಾಗತಿಸಿದರು. ಝೋನ್ ಚೆರ್‍ಮನ್ ವಲೇರಿಯನ್ ನೊರೋನ್ಹಾ ಶುಭಾಶಂಸನೆಗೈದರು. ಈ ಸಂದರ್ಭದಲ್ಲಿ ಲಯನ್ಸ್ ವೈಸ್ ಡಿಜಿ ಹರಿಪ್ರಸಾದ್ ರೈ, ಸಂಪನ್ಮೂಲ ವ್ಯಕ್ತಿ ಡಾ.ಪ್ರಜ್ಞಾ ಮಾರ್ಪಳ್ಳಿ ಇವರನ್ನು ಮೂಡುಬೆಳ್ಳೆ ಧರ್ಮಕೇಂದ್ರದ ಪ್ರಧಾನ ಗುರುಗಳಾದ ರೆ,ಫಾ. ಜೋರ್ಜ್ ಥಾಮಸ್ ಡಿಸೋಜ ಸನ್ಮಾನಿಸಿದರು.ಕಟ್ಟಿಂಗೇರಿ ದೇವದಾಸ್ ಹೆಬ್ಬಾರ್ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ಸಂಯೋಜಿಸಿದ್ದರು. ಲಯನ್ಸ್ ಕಾರ್ಯದರ್ಶಿ ಅವನಿ ಪಟೇಲ್ ಧನ್ಯವಾದವಿತ್ತರು. ಐವನ್ ಮಿನೇಜಸ್ ಸೌಹಾರ್ದ ಆಟಗಳನ್ನು ಸಂಯೋಜಿಸಿದ್ದರು. ಆಟಿಕೂಟದ ವೈವಿಧ್ಯಮಯ ತಿಂಡಿ ತಿನಿಸುಗಳು ಗಮನ ಸೆಳೆದವು