ಸಾರಾಂಶ
ಬೆಂಗಳೂರು ಉತ್ತರದಲ್ಲಿ ಸ್ಪರ್ಧೆ ಬಗ್ಗೆ ಮಾತಾಡ್ಬೇಡಿ ಎಂದು ಪಕ್ಷದ ನಾಯಕರು ನನಗೆ ಸೂಚನೆ ನೀಡಿದ್ದಾರೆ ಎಂದು ಸಂಸದ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರುವಿಧಾನಸಭಾ ಚುನಾವಣೆಯಲ್ಲಿ ಕಳೆದುಕೊಂಡಿರುವುದನ್ನು ನಾವು ಲೋಕಸಭಾ ಚುನಾವಣೆಯಲ್ಲಿ ಪಡೆದುಕೊಳ್ಳಬೇಕಿದೆ ಎಂದು ಸಂಸದ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ. ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಸ್ಪರ್ಧಿಸುವ ಕುರಿತು ಶನಿವಾರ ಪ್ರತಿಕ್ರಿಯೆ ನೀಡಿದ ಅವರು, ನಾನು ಪಕ್ಷಗಿಂತ ದೊಡ್ಡವನಲ್ಲ. ನಾನೇನು ಮಾತನಾಡದಂತೆ ಪಕ್ಷ ಸೂಚನೆ ಇದೆ. ಹೀಗಾಗಿ ನಾನು ಈ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿದರು.
ಇನ್ನು, ಮಲ್ಲೇಶ್ವರದಲ್ಲಿ ನಡೆದ ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾ ಕಾರ್ಯಕಾರಿಣಿ ಸಭೆ ಉದ್ದೇಶಿಸಿ ಮಾತನಾಡಿದ ಸದಾನಂದಗೌಡ, ರಾಜ್ಯದಲ್ಲಿ ಬಿಜೆಪಿಗೆ ಹಿನ್ನೆಡೆ ಆಗಿರಬಹುದು. ಆದರೆ, ಬೆಂಗಳೂರು ಉತ್ತರದಲ್ಲಿ ಹಿನ್ನಡೆಯಾಗಿಲ್ಲ. ನಮ್ಮ ಸ್ವಯಂ ಅಪರಾಧದಿಂದ ಎರಡು ಕ್ಷೇತ್ರದಲ್ಲಿ ಸೋಲನುಭವಿಸಿದ್ದೇವೆ ಎಂದರು.ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಬ್ಬರೇ ಶಾಸಕರಿದ್ದರು. ಅವರ ನಿರಂತರ ಹೋರಾಟದಿಂದ ಪಕ್ಷ ಸಂಘಟಿತವಾಗಿದೆ. ರಾಜ್ಯದಲ್ಲಿ ಈಗ ಬಿಜೆಪಿ ಬಲಗೊಂಡಿದ್ದು, ಪ್ರಬಲ ಪಕ್ಷವಾಗಿ ಹೊರಹೊಮ್ಮಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದಂತೆ ನಡೆದಿದ್ದೇವೆ ಎಂದು ಹೇಳುತ್ತಾರೆ. ಆದರೆ, ನುಡಿದಂತೆ ನಡೆದಿರುವುದು ರಾಜ್ಯ ಸರ್ಕಾರವಲ್ಲ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ. ಸಂಘಟನೆಯಿಂದ ಚುನಾವಣೆ ಗೆಲ್ಲಲು ಸಾಧ್ಯವೇ ಹೊರತು ಹಣದಿಂದ ಅಲ್ಲ ಎಂದು ಹೇಳಿದರು.ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಪ್ರತಿಪಕ್ಷ ನಾಯಕ ಆರ್.ಅಶೋಕ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಜನರ ಆಶೀರ್ವಾದ ನಮ್ಮ ಪಕ್ಷದ ಮೇಲಿದೆ ಎಂದು ತಿಳಿಸಿದರು.