ಹಾವೇರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಅವರ ಪತ್ನಿ ಆಶಾ ಪಾಟೀಲ ಹೆಸರಿನಲ್ಲಿ ಮತ ಚಲಾಯಿಸಿದ್ದಾರೆ. ಈ ಅಕ್ರಮದ ಬಗ್ಗೆ ಸಮಗ್ರ ತನಿಖೆ ನಡೆಸಿ, ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಬೇಕು.
ಹುಬ್ಬಳ್ಳಿ:
ಪಶ್ಚಿಮ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಹಾವೇರಿಯ ಮತಗಟ್ಟೆ ಸಂಖ್ಯೆ 85ರಲ್ಲಿ ಕಾಂಗ್ರೆಸ್ ಕಾರ್ಯಕರ್ತೆ ಶಿಲ್ಪಾ ಬುಡಮ್ಮನವರ್ ಅವರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಅವರ ಪತ್ನಿ ಆಶಾ ಪಾಟೀಲ ಹೆಸರಿನಲ್ಲಿ ಮತ ಚಲಾಯಿಸಿದ್ದಾರೆ. ಈ ಅಕ್ರಮದ ಬಗ್ಗೆ ಸಮಗ್ರ ತನಿಖೆ ನಡೆಸಿ, ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸುವಂತೆ ಶಾಸಕ ಮಹೇಶ ಟೆಂಗಿನಕಾಯಿ ಆರೋಪಿಸಿದರು.ಸುದ್ದಿಗೋಷ್ಠಿಯಲ್ಲಿ ಇದಕ್ಕೆ ಸಂಬಂಧಿಸಿದ ದಾಖಲೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ದೇಶಾದ್ಯಂತ ವೋಟ್ ಚೋರಿ ಎಂದು ಆರೋಪಿಸುತ್ತಿದ್ದಾರೆ. ಆದರೆ, ಹಾವೇರಿಯಲ್ಲಿ ನಡೆದಿರುವ ಘಟನೆ ಕಾಂಗ್ರೆಸ್ನ ಮತದಾನ ಪ್ರಕ್ರಿಯೆಯ ಬಗ್ಗೆಯೇ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ದೃಶ್ಯಾವಳಿ ಮತ್ತು ಮತದಾರರ ಪಟ್ಟಿಯ ಮಾಹಿತಿಯನ್ನು ನಿಮ್ಮ ಮುಂದಿಟ್ಟಿದ್ದೇವೆ. ಆಶಾ ಪಾಟೀಲ ಮತದಾನಕ್ಕೆ ಬಾರದಿದ್ದರೂ, ಅವರ ಹೆಸರಿನಲ್ಲಿ ಬೇರೊಬ್ಬರು ಮತ ಚಲಾಯಿಸಿರುವ ಆರೋಪ ಕೇಳಿಬಂದಿದೆ ಎಂದರು.
ಮತಗಟ್ಟೆ ಸಂಖ್ಯೆ 85ರಲ್ಲಿ ನಡೆದಿರುವ ಮತದಾನ ಪ್ರಕ್ರಿಯೆಯನ್ನು ಗಮನಿಸಿದಾಗ, ಮತದಾರರ ಗುರುತಿನ ಚೀಟಿ ಪರಿಶೀಲನೆ ಸಮರ್ಪಕವಾಗಿ ನಡೆದಿದೆಯೇ ಎಂಬ ಅನುಮಾನ ಮೂಡುತ್ತದೆ. ಮತದಾರರ ಗುರುತನ್ನು ಖಚಿತಪಡಿಸಿಕೊಳ್ಳದೆ ಮತ ಚಲಾಯಿಸಲು ಅವಕಾಶ ನೀಡಲಾಗಿದೆಯೇ ಎಂಬುದರ ಕುರಿತು ಚುನಾವಣಾಧಿಕಾರಿಗಳು ತನಿಖೆ ನಡೆಸಬೇಕು. ಚುನಾವಣಾ ಕರ್ತವ್ಯದಲ್ಲಿದ್ದ ಅಧಿಕಾರಿಗಳ ಪಾತ್ರವನ್ನೂ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.ಸಚಿವ ರುದ್ರಪ್ಪ ಲಮಾಣಿ ಮತ ಚಲಾಯಿಸುವ ಸಂದರ್ಭದಲ್ಲಿ ಶಿಲ್ಪಾ ಬಡಮ್ಮನವರ್ ಸರತಿ ಸಾಲಿನಲ್ಲಿ ಇದ್ದರು. ಬಳಿಕ ಮತಗಟ್ಟೆಯೊಳಗೆ ನಡೆದ ಮತದಾನ ಪ್ರಕ್ರಿಯೆಗೆ ಸಂಬಂಧಿಸಿದ ದೃಶ್ಯಾವಳಿಗಳನ್ನು ನಾವು ಪರಿಶೀಲನೆಗೆ ಮುಂದಿಟ್ಟಿದ್ದೇವೆ. ಆಶಾ ಪಾಟೀಲ ಹೆಸರಿನಲ್ಲಿ ಮತ ಚಲಾವಣೆಯಾಗಿರುವ ಬಗ್ಗೆ ಚುನಾವಣಾ ಆಯೋಗ ಸೂಕ್ತ ತನಿಖೆ ನಡೆಸಿ ಸತ್ಯಾಂಶ ಹೊರತರುವ ಅಗತ್ಯವಿದೆ ಎಂದರು.
ದೂರು ಸಲ್ಲಿಸಲು ನಿರ್ಧಾರ:ಚುನಾವಣೆಯಲ್ಲಿ ಅಕ್ರಮ ನಡೆದಿರುವ ಆರೋಪವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಈ ಕುರಿತು ಚುನಾವಣಾ ಆಯೋಗಕ್ಕೆ ಲಿಖಿತ ದೂರು ಸಲ್ಲಿಸುತ್ತೇವೆ. ಮತಗಟ್ಟೆ ಸಂಖ್ಯೆ 85ರಲ್ಲಿ ನಡೆದಿರುವ ಪ್ರಕ್ರಿಯೆಯ ಸಂಪೂರ್ಣ ತನಿಖೆ ನಡೆಸಿ, ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಪ ಮಾಜಿ ಸದಸ್ಯ ಶಿವರಾಜ ಸಜ್ಜನರ, ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಕಿರಣ ಕೊಳ್ಳಿ, ರಾಜು ಕೋರ್ಯಾಣಮಠ ಸೇರಿದಂತೆ ಹಲವರಿದ್ದರು.