ಕಾಂಗ್ರೆಸ್ ಬಹುದೊಡ್ಡ ಇತಿಹಾಸವನ್ನು ಹೊಂದಿದ್ದು, ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರ, ದೇಶದ ಹಿತರಕ್ಷಣೆಗಾಗಿ ಕಾಂಗ್ರೆಸನವರು ಮಾಡಿದ ತ್ಯಾಗ ಬಲಿದಾನಗಳ ಇತಿಹಾಸವನ್ನು ಹೊಸತಲೆಮಾರಿಗೆ ಮುಟ್ಟಿಸುವ ಜವಾಬ್ದಾರಿಯು ನಮ್ಮೆಲ್ಲರ ಮೇಲಿದೆ.
ಹಳಿಯಾಳ: ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರಿಗೆ ವಿರೋಧ ಪಕ್ಷದ ಬಿಸಿ ಇನ್ನೂ ತಟ್ಟಲಿಲ್ಲ. ಅದಕ್ಕೆ ಅವರು ನಿಶ್ಚಿಂತೆರಾಗಿದ್ದಾರೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಶಾಸಕ ಆರ್.ವಿ. ದೇಶಪಾಂಡೆ ಅವರು ಖೇದ ವ್ಯಕ್ತಪಡಿಸಿದರು.
ಭಾನುವಾರ ಪಟ್ಟಣದ ಶೆಟ್ಟಿಗಲ್ಲಿಯಲ್ಲಿರುವ ಶ್ರೀ ವಿರೂಪಾಕ್ಷೇಶ್ವರ ಸಭಾಭವನದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಸಂಘಟನ್- ಸೃಜನ್ ಅಭಿಯಾನ- 2ರ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಹಳಿಯಾಳ ಕ್ಷೇತ್ರದಿಂದ ಒಂಬತ್ತು ಬಾರಿ ನಾನು ಆಯ್ಕೆಯಾಗಿರುವುದರಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಿರಂತರವಾಗಿ ನಡೆಯುತ್ತಿರುವುದರಿಂದ ಕಾರ್ಯಕರ್ತರು ಮತ್ತು ಮುಖಂಡರಲ್ಲಿ ಪಕ್ಷ ಸಂಘಟನೆ ಮಾಡಬೇಕೆಂಬ ಹುಮ್ಮಸ್ಸಿನ ಭಾವನೆಯು ಕಡಿಮೆಯಾಗಿರುವುದನ್ನು ನೋಡುತ್ತಿದ್ದೇನೆ. ಜೀವನದಲ್ಲಾಗಲಿ ಅಥವಾ ರಾಜಕೀಯದಲ್ಲಾಗಲಿ ಯಶಸ್ವಿಯಾಗಲು ಸ್ಪಷ್ಟ ಗುರಿಯಿರಬೇಕು ಹಾಗೂ ಅದನ್ನು ಸಾಧಿಸುವ ಛಲ, ಪೈಪೋಟಿ ಮತ್ತು ಸ್ಪರ್ಧೆಯ ಭಾವನೆ ಇರಬೇಕು ಎಂದರು.
ಕಾಂಗ್ರೆಸ್ ಬಹುದೊಡ್ಡ ಇತಿಹಾಸವನ್ನು ಹೊಂದಿದ್ದು, ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರ, ದೇಶದ ಹಿತರಕ್ಷಣೆಗಾಗಿ ಕಾಂಗ್ರೆಸನವರು ಮಾಡಿದ ತ್ಯಾಗ ಬಲಿದಾನಗಳ ಇತಿಹಾಸವನ್ನು ಹೊಸತಲೆಮಾರಿಗೆ ಮುಟ್ಟಿಸುವ ಜವಾಬ್ದಾರಿಯು ನಮ್ಮೆಲ್ಲರ ಮೇಲಿದೆ ಎಂದರು.ಕಾಂಗ್ರೆಸ್ ನೂತನ ಜಿಲ್ಲಾಧ್ಯಕ್ಷ ಜಿ.ಟಿ. ನಾಯ್ಕ ಮಾತನಾಡಿ, ದೇಶದ ನಿರ್ಮಾಣದಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರವೇನೆಂದು ಯುವಪೀಳಿಗೆಗೆ ಜೆನ್ ಝೀಗಳಿಗೆ ತಿಳಿಸಿ ಹೇಳಬೇಕಾಗಿದೆ ಎಂದರು. ಪಕ್ಷವೆಂದರೆ ಭಿನ್ನಾಭಿಪ್ರಾಯಗಳು ಸಹಜ. ಆದರೆ ಈ ಭಿನ್ನಾಭಿಪ್ರಾಯಗಳು ಪಕ್ಷದ ಸಂಘಟನೆಗೆ ತೊಡಕಾಗಬಾರದು ಎಂದು ಎಚ್ಚರಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಾ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಹಳಿಯಾಳದಲ್ಲಿ ಪಕ್ಷ ಸಂಘಟನೆಗಾಗಿ ಕೈಗೊಳ್ಳಲಾಗುತ್ತಿರುವ ಕ್ರಮಗಳ ಬಗ್ಗೆ ವಿವರಿಸಿದರು.ಸಭೆಯಲ್ಲಿ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶಾರದಾ ರಾಥೋಡ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಡಿ. ಚೌಗಲೆ, ಪ್ರಮುಖರಾದ ಅಜರ್ ಬಸರಿಕಟ್ಟಿ, ಅಲಿಂ ಬಸರಿಕಟ್ಟಿ, ಫಯಾಜ್ ಶೇಖ್, ರವಿ ತೋರಣಗಟ್ಟಿ, ಉಮೇಶ ಬೊಳಶೆಟ್ಟಿ, ಎಚ್.ಬಿ. ಪರಶುರಾಮ್, ಅರ್ಜುನ ಭೋವಿ, ಶಂಕರ ಬೆಳಗಾಂವಕರ, ಹನೋರಿಯಾ ಬೃಗಾಂಜಾ, ವಿಮಲಾ ವಡ್ಡರ ಹಾಗೂ ಇತರರು ಇದ್ದರು. ದೇಮಾಣಿ ಶಿರೋಜಿ ಹಾಗೂ ವೆಂಕಟೇಶ್ ಸಾಳುಂಕೆ ಕಾರ್ಯಕ್ರಮ ನಿರ್ವಹಿಸಿದರು.