ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ:
ಸುಮಾರು 9 ಶತಮಾನಗಳ ಹಿಂದೆ ಅದ್ವೈತ ಮತದ ಪ್ರವರ್ತಕರಾದ ಮಧ್ವಾಚಾರ್ಯರು (1238 -1317) ಉಡುಪಿಯಲ್ಲಿ ಕೃಷ್ಣ ದೇವರ ಮಠ (ಕೃಷ್ಣ ಮಠ) ಮತ್ತು ಅದರ ಅಕ್ಕಪಕ್ಕ ಪಲಿಮಾರು, ಅದಮಾರು, ಪುತ್ತಿಗೆ, ಕಾಣಿಯೂರು ಮಠ... ಹೀಗೆ ಎಂಟು ಮಠಗಳನ್ನು ಸ್ಥಾಪಿಸಿ, ಅವುಗಳಿಗೆ ತನ್ನ ಎಂಟು ಮಂದಿ ಶಿಷ್ಯರನ್ನು ಮಠಾಧಿಪತಿಗಳನ್ನಾಗಿ ನಿಯೋಜಿಸಿದರು. ಶ್ರೀಕೃಷ್ಣ ಮಠಕ್ಕೆ ಪ್ರತ್ಯೇಕ ಮಠಾಧಿಪತಿ ಇಲ್ಲ. ಅಷ್ಟಮಠಗಳ ಮಠಾಧೀಶರು ಸರದಿಯಂತೆ ಈ ಮಠಕ್ಕೆ ಬಂದು, ಅಲ್ಲೇ ಉಳಿದುಕೊಂಡು 2 ತಿಂಗಳ ಕಾಲ ಶ್ರೀಕೃಷ್ಣನನ್ನು ದಿನಕ್ಕೆ 14 ಬಾರಿ ಪೂಜಿಸುತ್ತಿದ್ದರು. ಸುಮಾರು ಮುನ್ನೂರು ವರ್ಷಗಳ ಹಿಂದೆ ಸೋದೆ ಮಠದ ಶ್ರೀ ವಾದಿರಾಜ ತೀರ್ಥ ಶ್ರೀಪಾದರು (1481-1601) ಈ 2 ತಿಂಗಳ ಪೂಜಾಧಿಕಾರದ ಸರದಿಯ ಅವಧಿಯನ್ನು 2 ತಿಂಗಳಿಂದ ಎರಡು ವರ್ಷಕ್ಕೇರಿಸಿದರು. ಹೀಗೆ ಅಷ್ಟಮಠಗಳ ಮಠಾಧೀಶರ ನಡುವೆ ಕೃಷ್ಣನ ಪೂಜಾಧಿಕಾರ ಹಸ್ತಾಂತರವಾಗುವ, ಶಾಸ್ತ್ರಬದ್ಧ ಪ್ರಕ್ರಿಯೆಯೇ ಪರ್ಯಾಯೋತ್ಸವ. ಇದು ಕೇವಲ ಕೃಷ್ಣಮಠದ ಅಧಿಕಾರ ಹಸ್ತಾಂತ ಅಷ್ಟೇ ಅಲ್ಲ, ಕೃಷ್ಣನಿಗೆ ನಿತ್ಯ 14 ಪೂಜೆಗಳನ್ನು ಮಾಡುವ ಕರ್ತವ್ಯದ ಹಸ್ತಾಂತರವೂ ಹೌದು. ಹಿಂದೆ ಈ ಅಧಿಕಾರ ಸ್ವೀಕಾರ ಕೇವಲ ಎರಡು ಮಠಗಳ ನಡುವೆ ನಡೆಯುವ ಸಂಪ್ರದಾಯವಷ್ಟೇ ಆಗಿತ್ತು. ಇಂದು ವೈಭದ ಉತ್ಸವ, ನಾಡಹಬ್ಬದ ಸ್ವರೂಪ ಪಡೆದಿದೆ.ಶ್ರೀ ಕೃಷ್ಣಮಠದ ಮೊದಲ ಪರ್ಯಾಯ ಅಧಿಕಾರ ಪಡೆದದ್ದು ಪಲಿಮಾರು ಮಠ, ನಂತರ ಕ್ರಮವಾಗಿ ಅದಮಾರು ಮಠ, ಕೃಷ್ಣಾಪುರ ಮಠ, ಪುತ್ತಿಗೆ ಮಠ, ಶಿರೂರು ಮಠ, ಸೋದೆ ಮಠ, ಕಾಣಿಯೂರು ಮಠ ಮತ್ತು ಕೊನೆಯದಾಗಿ ಪೇಜಾವರ ಮಠ. ಅಲ್ಲಿಗೆ ಅಷ್ಟಮಠಗಳಲ್ಲಿ 16 ವರ್ಷಗಳ ಒಂದು ಸುತ್ತು ಪೂರ್ಣಗೊಳ್ಳುತ್ತದೆ. 1522ರಿಂದ ಆರಂಭವಾದ ದ್ವೈವಾರ್ಷಿಕ ಪರ್ಯಾಯದ 31 ಸುತ್ತುಗಳು ಪೂರ್ಣಗೊಂಡು, ಈ ಬಾರಿ ನಡೆಯುತ್ತಿರುವುದು 252ನೇ ಪರ್ಯಾಯೋತ್ಸವ. ಈ ಬಾರಿ ಪುತ್ತಿಗೆ ಮಠದ ಸುಗುಣೇಂದ್ರ ಶ್ರೀಗಳು ಪರ್ಯಾಯ ಪೀಠಾರೋಹಣ ಮಾಡುತ್ತಿದ್ದಾರೆ.ಪರ್ಯಾಯ ಮಹೋತ್ಸವದ ಹಿಂದಿನ ದಿನ ಅಂದರೆ ಅ.17ರಂದು ಪರ್ಯಾಯಾಧಿಕಾರ ಸ್ವೀಕರಿಸಲಿರುವ ಶ್ರೀಗಳು ಕಾಪು ಸಮೀಪದ ಶ್ರೀಮಧ್ವಾಚಾರ್ಯರಿಂದ ನಿರ್ಮಿತ ದಂಡತೀರ್ಥದಲ್ಲಿ ತೀರ್ಥಸ್ನಾನ ಮಾಡಿ ಉಡುಪಿಯ ಜೋಡುಕಟ್ಟೆಗೆ ಆಗಮಿಸುತ್ತಾರೆ. ಅಲ್ಲಿಂದ ಪರ್ಯಾಯ ಶ್ರೀಗಳೂ ಸೇರಿ ಅಷ್ಟಮಠಾಧೀಶರನ್ನು ನಗರದ ಭರ್ಜರಿ ಮೆರವಣಿಗೆಯೊಂದಿಗೆ ರಥಬೀದಿಗೆ ಕರೆತರಲಾಗುತ್ತದೆ. ಹುಲಿಕುಣಿತ, ಸೋಮನ ಕುಣಿತ, ಕಂಸಾಳೆ, ಡ್ಯಾನ್ಸ್‌ವೇಷ ಹೀಗೆ ನಾನಾ ಕಲಾತಂಡಗಳು, ಟ್ಯಾಬ್ಲೋಗಳೊಂದಿಗೆ ನಗರದಲ್ಲಿ ಸಾಗುವ ಈ ತಡರಾತ್ರಿಯ ಭವ್ಯ ಮೆರವಣಿಗೆಯನ್ನು ರಾಜ್ಯ, ಹೊರರಾಜ್ಯಗಳಿಂದ ಆಗಮಿಸಿದ ಲಕ್ಷಾಂತರ ಮಂದಿ ರಸ್ತೆ ಇಕ್ಕೆಲಗಳಲ್ಲಿ ನಿಂತು ಕಣ್ತುಂಬಿಕೊಳ್ಳುತ್ತಾರೆ. ಮೆರವಣಿಗೆ ಮೂಲಕ ಸ್ವಾಮೀಜಿ ರಥಬೀದಿ ತಲುಪಿದ ಬಳಿಕ ಹಿಂದಿನ ಪರ್ಯಾಯ ಶ್ರೀಗಳು ಹಾಲಿ ಪರ್ಯಾಯ ಶ್ರೀಗಳನ್ನು ಸರ್ವಜ್ಞ ಪೀಠದಲ್ಲಿ ಕೂರಿಸುವ ಮೂಲಕ ಮುಂದಿನ 2 ವರ್ಷಗಳ ಶ್ರೀಕೃಷ್ಣ ಮಠದ ಪೂಜಾಧಿಕಾರದ ಜವಾಬ್ದಾರಿ ಹಸ್ತಾಂತರಿಸುತ್ತಾರೆ. ವರ್ಷದಿಂದ ವರ್ಷಕ್ಕೆ ಉಡುಪಿಯ ದ್ವೈವಾರ್ಷಿಕ ಪರ್ಯಾಯೋತ್ಸವ ಪ್ರಸಿದ್ಧಿ ಪಡೆಯುತ್ತಿದೆ. ಇದೀಗ ನಾಲ್ಕನೇ ಬಾರಿಗೆ ಪರ್ಯಾಯ ಪೀಠಾರೋಹಣಗೈಯುತ್ತಿರುವ ಸುಗುಣೇಂದ್ರ ಶ್ರೀಗಳು ವಿಶ್ವದಾದ್ಯಂತ ಭಕ್ತಾಭಿಮಾನಿಗಳನ್ನೂ ಹೊಂದಿದ್ದಾರೆ. ಸುಗುಣೇಂದ್ರ ತೀರ್ಥರ ಹಿಂದಿನ ಪರ್ಯಾಯೋತ್ಸವಗಳು ವಿಭಿನ್ನವಾಗಿದ್ದವು. ಈ ಹಿಂದೆ ಪುತ್ತಿಗೆ ಶ್ರೀಗಳು ಗೀತಾ ಮಂದಿರ, ಉಡುಪಿ ಸ್ವಾಗತ ಗೋಪುರ ಹೀಗೆ ತಮ್ಮ ಪರ್ಯಾಯ ಅವಧಿಯಲ್ಲಿ ವಿಭಿನ್ನ ಯೋಜನೆಗಳನ್ನು ಹಾಕಿ ಕಾರ್ಯರೂಪಕ್ಕಿಳಿಸಿದ್ದರು. ಈ ಬಾರಿ ಒಂದು ಕೋಟಿ ಕೃಷ್ಣಭಕ್ತರಿಂದ ಗೀತೆ ಬರೆಸಿ ಅದನ್ನು ಕೃಷ್ಣನಿಗೆ ಅರ್ಪಿಸುವ, ಆ ಮೂಲಕ ವಿಶ್ವಶಾಂತಿಗಾಗಿ ಪ್ರಾರ್ಥಿಸುವ ಸಂಕಲ್ಪಕೈಗೊಂಡಿದ್ದಾರೆ. ಒಂದು ಕೋಟಿಗೂ ಹೆಚ್ಚು ಭಕ್ತರು ನಿತ್ಯವೂ ವ್ರತದಂತೆ ಗೀತೆ ಬರೆಯುವುದರಿಂದ ಕೋಟಿಕೋಟಿ ಮನ-ಮನೆಗಳಲ್ಲಿ ನೆಮ್ಮದಿಗೆ, ಆ ಮೂಲಕ ವಿಶ್ವದ ಶಾಂತಿಗೆ ಕಾರಣವಾಗುತ್ತದೆ ಎನ್ನುವುದು ಶ್ರೀಗಳ ಈ ಮಹತ್ಪಪೂರ್ಣ ಸಂಕಲ್ಪದ ಆಶಯ. ಪುತ್ತಿಗೆ ಮಠದ ಸುಗಣೇಂದ್ರ ತೀರ್ಥರ ಪೂರ್ವಾಶ್ರಮದ ಹೆಸರು ಹಯವದನ ಆಚಾರ್ಯ. 1961ರ ಸೆ.16ರಂದು ಕಾಪು ತಾಲೂಕಿನ ಎಲ್ಲೂರು ಗ್ರಾಮದ ಮಾಣಿಯೂರಲ್ಲಿ ಹುಟ್ಟಿದ ಅವರನ್ನು 14ನೇ ವಯಸ್ಸಿನಲ್ಲಿ (1974ರ ಏ.8ರಂದು) ಅಂದಿನ ಪುತ್ತಿಗೆ ಮಠದ ಶತಾಯುಷಿ ಶ್ರೀ ಸುಜ್ಞಾನೇಂದ್ರ ತೀರ್ಥರು ಉತ್ತರಾಧಿಕಾರಿಯಾಗಿ ಆರಿಸಿ ಸಂನ್ಯಾಸ ದೀಕ್ಷೆ ನೀಡಿ, ಶ್ರೀ ಸುಗುಣೇಂದ್ರ ತೀರ್ಥ ಎಂದು ನಾಮಕರಣ ಮಾಡಿದರು. 1976ರಲ್ಲಿ 14ನೇ ವಯಸ್ಸಿನಲ್ಲೇ ಪ್ರಥಮ ಪರ್ಯಾಯ ಪೀಠಾರೋಹಣಗೈದ ಶ್ರೀಪಾದರು, 1992-94ರಲ್ಲಿ ದ್ವಿತೀಯ, 2008-2010ರಲ್ಲಿ ತೃತೀಯ ಪರ್ಯಾಯಗಳನ್ನು ವೈಭವದಿಂದ ನಡೆಸಿದರು. ಇದೀಗ ತಮ್ಮ ಶಿಷ್ಯ ಸುಶ್ರೀಂದ್ರ ತೀರ್ಥ ಶ್ರೀಪಾದರೊಂದಿಗೆ ಚತುರ್ಥ ಪರ್ಯಾಯ (2024-26)ಕ್ಕೆ ಸಿದ್ಧರಾಗುತ್ತಿದ್ದಾರೆ. ತುಳು, ಕನ್ನಡ, ಸಂಸ್ಕೃತ, ಇಂಗ್ಲಿಷ್ ಭಾಷೆಗಳಲ್ಲಿ ಪ್ರಖರ ವಾಕ್ಪಟುತ್ವ ಹೊಂದಿರುವ ಶ್ರೀಗಳು ಬರಹಗಾರರೂ ಹೌದು. ಅವರ ಸಂಪಾದಕತ್ವದಲ್ಲಿ ಸುಗುಣಮಾಲ ಧಾರ್ಮಿಕ ಪತ್ರಿಕೆಯೂ ಹೊರಬರುತ್ತಿದೆ. 15ಕ್ಕೂ ಹೆಚ್ಚು ದೇಶಗಳಿಗೆ ಭೇಟಿ ನೀಡಿರುವ ಶ್ರೀಗಳು ಭಗವದ್ಗೀತೆಯನ್ನು ಜಗತ್ತಿನಾದ್ಯಂತ ಹರಡುತ್ತಿದ್ದಾರೆ.