ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿಸ್ವರ್ಗ ಲೋಕಕ್ಕೆ ಹೋಗಬೇಕಾದರೆ ಸಂಸ್ಕೃತ ಕಲಿಯಬೇಕು ಎಂಬ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರ ಹೇಳಿಕೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪರವಿರೋಧ ಚರ್ಚೆ ನಡೆಯುತ್ತಿದೆ.
ಶ್ರೀಗಳು ಕೃಷ್ಣಮಠದ ರಾಜಾಂಗಣದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಮಾಸೋತ್ಸವದ ಸಮಾರೋಪ ಸಮಾರಂಭದಲ್ಲಿ ಸಂಸ್ಕೃತದಲ್ಲಿ ಸಂದೇಶ ನೀಡುತ್ತಿದ್ದರು.ಸಂಸ್ಕೃತ ಪವಿತ್ರ, ಶ್ರೇಷ್ಠ, ಪಾವನ ವಿಶ್ವ ಭಾಷೆಯಾಗಿದೆ. ದೇವರ ಶ್ಲೋಕಗಳು, ಪೂಜೆಗಳು ಸಂಸ್ಕೃತ ಭಾಷೆಯಲ್ಲಿ ನಡೆಯುತ್ತದೆ. ಸಂಸ್ಕೃತ ಒಂದು ದೇವ ಭಾಷೆ, ಈ ದೇವರ ಕಾರ್ಯಕ್ರಮದಲ್ಲಿ ದೇವ ಭಾಷೆಯನ್ನೇ ಬಳಸುತ್ತೇವೆ, ಸರ್ವ ಭಾಷೆಗಳಿಗೆ ಮೂಲ ಸಂಸ್ಕೃತ, ಎಲ್ಲ ಭಾಷೆಗಳ ತಾಯಿ ಸಂಸ್ಕೃತ. ತುಳು, ಕನ್ನಡ, ಮಲಯಾಳಂ, ಹಿಂದಿ, ತಮಿಳು, ತೆಲುಗು ಭಾಷೆಗಳು ಹುಟ್ಟಿಕೊಂಡಿರುವುದೇ ಸಂಸ್ಕೃತದಿಂದ. ಕೇವಲ ಭಾರತೀಯ ಭಾಷೆಗಳಿಗೆ ಮಾತ್ರ ಸಂಸ್ಕೃತ ಮೂಲವಲ್ಲ, ಆಂಗ್ಲ ಭಾಷೆಗಳಿಗೂ ಮೂಲ ಸಂಸ್ಕೃತವೇ. ಪಿತ ಎಂಬ ಶಬ್ದದಿಂದ ಫಾದರ್, ಮಾತಾ ಎಂಬ ಶಬ್ದದಿಂದ ಮದರ್ ಹುಟ್ಟಿಕೊಂಡಿದೆ ಎಂದು ಶ್ರೀಗಳು ಹೇಳಿದ್ದರು.
ಸಂಸ್ಕೃತ ಅಂತರ್ಲೋಕೀಯ ಭಾಷೆಯಾಗಿದೆ. ದೇವಲೋಕದಲ್ಲಿ ವ್ಯವಹರಿಸುವುದು ಸಂಸ್ಕೃತ ಭಾಷೆಯಲ್ಲಿ, ಸಂಸ್ಕೃತ ದೇವ ಭಾಷೆ. ಸಂಸ್ಕೃತ ಭಾಷೆ ತಿಳಿಯದಿದ್ದರೆ ದೇವಲೋಕಕ್ಕೆ ವೀಸಾ ಸಿಗುವುದಿಲ್ಲ, ಸ್ವರ್ಗ ಲೋಕಕ್ಕೆ ಹೋಗಬೇಕಾದರೆ ಸಂಸ್ಕೃತ ಕಲಿಯಬೇಕು ಎಂದು ಶ್ರೀಗಳು ಹೇಳಿದ್ದರು.ಕಾರ್ಯಕ್ರಮದಲ್ಲಿ ಕೇರಳ ರಾಜ್ಯಪಾಲ ಅರೀಫ್ ಮೊಹಮ್ಮದ್ ಖಾನ್, ಶಾಸಕ ಯಶ್ಪಾಲ್ ಸುವರ್ಣ, ಎಂಎಲ್ಸಿ ಪ್ರತಾಪ್ ಸಿಂಹ ನಾಯಕ್ ಮುಂತಾದವರು ಉಪಸ್ಥಿತರಿದ್ದರು.