ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ನಗರ ಠಾಣೆಯ ಕಾನೂನು, ಸುವ್ಯವಸ್ಥೆ ವಿಭಾಗದ ಪಿಎಸೈ ಆಗಿದ್ದ ಪರಶುರಾಮ್ ಶಂಕಾಸ್ಪದ ಸಾವು ಪ್ರಕರಣದ ಆರೋಪಿಗಳಾದ ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು, ಪುತ್ರ ಪಂಪನಗೌಡ (ಸನ್ನೀಗೌಡ) ಬಂಧನಕ್ಕೆ ಆಗ್ರಹಿಸಿ ಹಾಗೂ ತನಿಖೆಯನ್ನು ಸಿಐಡಿ ಬದಲು ಸಿಬಿಐಗೆ ವಹಿಸುವಂತೆ ಒತ್ತಾಯಿಸಿ ಜಿಲ್ಲೆಯಾದ್ಯಂತ ಪ್ರತಿಭಟನೆಯ ಕಿಚ್ಚು ಹೆಚ್ಚುತ್ತಿದೆ.ದಲಿತ, ಕನ್ನಡಪರ ಹಾಗೂ ಪ್ರಗತಿಪರ ಸಂಘಟನೆಗಳು ಸೋಮವಾರ ಜಿಲ್ಲೆಯ ವಿವಿಧೆಡೆ ಪ್ರತಿಭಟನೆ ನಡೆಸಿದವು. ಜಿಲ್ಲೆಯ ಗುರುಮಠಕಲ್, ಸುರಪುರ, ಶಹಾಪುರ, ಸೇರಿದಂತೆ ಹಲವೆಡೆ ಪ್ರತಿಭಟನೆಗಳು ನಡೆದಿವೆ. ನಗರ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದಲ್ಲೇ ಮುಂದುವರೆಯಲು ₹30 ಲಕ್ಷ ಬೇಡಿಕೆಯನ್ನು ಸ್ಥಳೀಯ ಶಾಸಕ ಹಾಗೂ ಪುತ್ರ ಇಟ್ಟಿದ್ದರು. ಇದಾಗದಿದ್ದರಿಂದ, ಮನನೊಂದ ಪರಶುರಾಮ್ ಮೃತಪಟ್ಟಿದ್ದಾರೆ. ಇವರ ಸಾವು ಅನುಮಾನ ಮೂಡಿಸಿದೆ ಎಂದು ವಿವಿಧ ಆರೋಪಿಸಿದ ಸಂಘಟನೆಗಳು ಎಸ್ಪಿ- ಡಿಎಸ್ಪಿ ಕಚೇರಿಯೆದುರು ಪ್ರತಿಭಟನೆ ನಡೆಸಿವು.
ದಕ್ಷ ಅಧಿಕಾರಿ ಸಾವಿನ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ರಾಜ್ಯ ಕಾಂಗ್ರೆಸ್ ಸರ್ಕಾರ ತಮ್ಮ ಪಕ್ಷದ ಶಾಸಕನ ರಕ್ಷಣೆಗೆ ನಿಂತಿದೆ. ವರ್ಗಾವಣೆ ದಂಧೆಯ ಕರಾಳಮುಖಗಳು ಅನಾವರಣಗೊಂಡಿವೆ. ಜಾತಿನಿಂದನೆ ಮತ್ತು ಗಂಭೀರ ಸ್ವರೂಪದ ಆರೋಪ ಎದುರಿಸುತ್ತಿರುವ ಶಾಸಕರೊಬ್ಬರನ್ನು ಪೊಲೀಸರು ಹುಟುಕಾಟದಲ್ಲಿದ್ದರೆ, ಆ ಶಾಸಕರು ಹಾಡುಹಗಲೇ ಹೋಗಿ ಸಿಎಂ ಅವರನ್ನು ಭೇಟಿಯಾಗುತ್ತಾರೆ ಎಂದರೆ ಹದಗೆಟ್ಟ ಕಾನೂನು ವ್ಯವಸ್ಥೆಗೆ ಇದು ಉದಾಹರಣೆ ಹಾಗೂ ಸರ್ಕಾರ ಶಾಸಕರ ರಕ್ಷಣೆಗೆ ನಿಂತಿದೆ ಎನ್ನುವುದಕ್ಕೆ ಸಾಕ್ಷಿ ಎಂದು ಕರವೇ ಭೀಮುನಾಯಕ್ ವಾಗ್ದಾಳಿ ನಡೆಸಿದರು.ದಲಿತ ಸಂಘರ್ಷ ಸಮಿತಿಯ ಮಲ್ಲಿಕಾರ್ಜುನ ಕ್ರಾಂತಿ, ಮರೆಪ್ಪ ನಾಟೇಕಾರ್, ನಿಂಗಪ್ಪ, ತಂಜಮ್ಮುಲ್, ಮಹೇಶ ಅನಪೂರ, ತೇಜರಾಜ ರಾಠೋಡ್, ನಿಂಗಣ್ಣ ಮುಂತಾದವರು ಡಿಎಸ್ಪಿ ಕಚೇರಿ ಬಳಿ ಜಮಾಯಿಸಿ, ಸರ್ಕಾರದ ವಿರುದ್ಧ ಕಿಡಿ ಕಾರಿದರು. ಇನ್ನೊಂದೆಡೆ, ಶರಣು ನಾಟೇಕಾರ್ ನೇತೃತ್ವದ ದಲಿತ ಸಂಘಟನೆಯು ಎಸ್ಪಿ ಕಚೇರಿ ಬಳಿ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.
*ಸಿಐಡಿ ತನಿಖೆ ಚುರುಕುಪಿಎಸೈ ಪರಶುರಾಮ ಸಾವಿನ ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿದ್ದರಿಂದ, ಭಾನುವಾರವೇ ಡಿವೈಎಸ್ಪಿ ಪುನೀತ್ ನೇತೃತ್ವದ ಅಧಿಕಾರಿಗಳು ಯಾದಗಿರಿಗೆ ಆಗಮಿಸಿ, ಪರಿಶೀಲನೆ ನಡೆಸುತ್ತಿದ್ದಾರೆ. ಸೋಮವಾರ ಸಿಐಡಿ ಎಸ್ಪಿ ಪ್ರಥ್ವಿಕ್ ಅವರು ಆಗಮಿಸಲಿದ್ದು, ಪೊಲೀಸರಿಂದ ಈ ಪ್ರಕರಣದ ಕಡತಗಳನ್ನು ಹಸ್ತಾಂತರಿಸಿಕೊಳ್ಳಲಿದ್ದಾರೆಂದು ಹೇಳಲಾಗುತ್ತಿದೆ. ದೂರವಾಣಿ ಕರೆ, ಹಣದ ವ್ಯವಹಾರ ಮುಂತಾದವುಗಳ ಕುರಿತು ಸಿಐಡಿ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.