ಸಾರಾಂಶ
- ಹರಿಹರ ತಾಲೂಕು ಆಡಳಿತ ನೇತೃತ್ವದ ವಾಲ್ಮೀಕಿ ಜಯಂತಿಯಲ್ಲಿ ಬಿ.ಪಿ.ಹರೀಶ್
- - -ಕನ್ನಡಪ್ರಭ ವಾರ್ತೆ ಹರಿಹರ
ಆದಿಕವಿ ವಾಲ್ಮೀಕಿ ರಚಿಸಿದ ರಾಮಾಯಣ ಸೇರಿದಂತೆ ಹಲವಾರು ಅಮೂಲ್ಯ ಗ್ರಂಥಗಳ ಕುರಿತು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಆಗಬೇಕಿದೆ ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.ನಗರದ ಗುರುಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಸಮಾರಂಭ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮನುಕುಲಕ್ಕೆ ದಾರಿದೀಪವಾಗಿರುವ ರಾಮಾಯಣ ಮತ್ತು ಮಹಾಭಾರತದಂತಹ ಕೃತಿಗಳು ಇಂದಿಗೂ ಜನರಿಗೆ ಮಾರ್ಗದರ್ಶನ ನೀಡುತ್ತಿವೆ ಎಂದು ಹೇಳಿದರು.
ವಾಲ್ಮೀಕಿಯನ್ನು ಕೆಲವರು ಬ್ರಾಹ್ಮಣ ಎನ್ನುತ್ತಾರೆ. ಕೆಲವರು ರತ್ನಾಕರ ಎಂಬ ದರೋಡೆಕೋರನಾಗಿದ್ದ ಎಂದು ಹೇಳುತ್ತಾರೆ. ಆದರೆ ಮಹಾನ್ ವ್ಯಕ್ತಿಗಳನ್ನು ಜಾತಿ, ಕುಲಕ್ಕೆ ಸೀಮಿತಗೊಳಿಸದೇ ಅವರ ಆಶಯಗಳನ್ನು ಜಗತ್ತಿಗೆ ಸಾರಬೇಕು ಎಂದು ಹೇಳಿದರು.ವಿದ್ಯೆಯೇ ಶಕ್ತಿಯ ಅಸ್ತ್ರ:
ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ಮಾತನಾಡಿ, “ವಿದ್ಯಾರ್ಥಿನಿಯರು ತಮ್ಮ ಉಜ್ವಲ ಭವಿಷ್ಯಕ್ಕಾಗಿ ವಿದ್ಯೆ ಎಂಬ ಅಸ್ತ್ರ ಅಳವಡಿಸಿಕೊಳ್ಳಬೇಕು. ಬೇಡ ಕುಲ ಎನ್ನದೇ ಸರ್ವಜನಾಂಗಕ್ಕೂ ವಾಲ್ಮೀಕಿಯವರ ರಾಮಾಯಣ ಪ್ರೇರಣಾದಾಯಕ. ವಾಲ್ಮೀಕಿ ಸಮಾಜವು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದೆ. ಸರ್ಕಾರ ಮೀಸಲಾತಿಯಲ್ಲಿ ತಾರತಮ್ಯ ತೋರದೆ ಸಹಾಯ ನೀಡಬೇಕು ಎಂದರು.ಕ್ಷೇತ್ರ ಸಮನ್ವಯ ಅಧಿಕಾರಿ ಎಚ್.ಕೃಷ್ಣಪ್ಪ ಉಪನ್ಯಾಸ ನೀಡಿ, ವಾಲ್ಮೀಕಿ ಮಹರ್ಷಿ ಆರಂಭಿಕ ಹೆಸರು ರತ್ನಾಕರ. ದರೋಡೆಕೋರರಾಗಿದ್ದರೂ ನಾರದ ಮಹರ್ಷಿ ಮಾರ್ಗದರ್ಶನದಿಂದ ತಪಸ್ಸು ಮಾಡಿ, ಆಧ್ಯಾತ್ಮಿಕ ಜ್ಞಾನೋದಯ ಹೊಂದಿದರು. ಅವರ ಜೀವನ ಪಶ್ಚಾತ್ತಾಪ, ಭಕ್ತಿ ಮತ್ತು ರೂಪಾಂತರದ ಶಕ್ತಿಯನ್ನು ಸಂಕೇತಿಸುತ್ತದೆ ಎಂದು ವಿವರಿಸಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್ ಮಾತನಾಡಿ, ವಾಲ್ಮೀಕಿ ರಾಮಾಯಣ ಸಾರವನ್ನು ಅಳವಡಿಸಿಕೊಂಡರೆ ಜೀವನ ಅರ್ಥಪೂರ್ಣವಾಗಿರುತ್ತದೆ ಎಂದರು.ಇದೇ ವೇಳೆ ವಾಲ್ಮೀಕಿ ಸಮುದಾಯದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಗರಿಷ್ಠ ಅಂಕ ಗಳಿಸಿದ ೧೨ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ತಾಪಂ ಇಒ ಸುಮಲತಾ ಎಸ್.ಪಿ. ಕ್ಷೇತ್ರ ಶಿಕ್ಷಣಾಧಿಕಾರಿ ದುರುಗಪ್ಪ ಡಿ., ನಗರ ವೃತ್ತ ನಿರೀಕ್ಷಕ ಆರ್.ಎಫ್. ದೇಸಾಯಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಹನುಮಂತಪ್ಪ ಲಮಾಣಿ, ಆರೋಗ್ಯ ಅಧಿಕಾರಿ ಡಾ. ಅಬ್ದುಲ್ ಖಾದರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ನರ‍್ದೇಶಕಿ ಪ್ರಿಯದರ್ಶಿನಿ, ಪರಿಶಿಷ್ಟ ಪಂಗಡ ಮಹಿಳಾ ಘಟಕ ಅಧ್ಯಕ್ಷೆ ಪಾರ್ವತಿ ಬೋರಯ್ಯ, ಕೆ.ವಿ. ಮಂಜುನಾಥ್ ಇತರರು ಭಾಗವಹಿಸಿದ್ದರು.
- - -(ಕೋಟ್) ರಾಮಾಯಣದ ಓದು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗದೇ ಪ್ರತಿಯೊಬ್ಬರೂ ರೂಢಿಗತವಾಗಿ ಅಳವಡಿಸಿಕೊಳ್ಳಬೇಕು. ಇಂತಹ ಜಯಂತಿಗಳನ್ನು ಎಲ್ಲ ಸಮಾಜದವರು ಸೇರಿ ಆಚರಿಸಿದಾಗ ಅರ್ಥಪೂರ್ಣ ಆಗಿರುತ್ತದೆ.
- ಕೆ.ಎಂ. ಗುರುಬಸವರಾಜ್, ತಹಸೀಲ್ದಾರ್.- - -
-07HRR08:ಹರಿಹರದ ಗುರುಭವನದಲ್ಲಿ ಮಂಗಳವಾರ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಶಾಸಕ ಬಿ.ಪಿ.ಹರೀಶ ಮಾತನಾಡಿದರು.