ಬಿಸಿಲಿನಲ್ಲಿ ಬಸವಳಿಯುತ್ತಿರುವ ಪ್ರಯಾಣಿಕರು

| Published : Apr 20 2025, 01:56 AM IST

ಸಾರಾಂಶ

ಮಹಾರಾಷ್ಟ್ರ -ಕರ್ನಾಟಕವನ್ನು ಸಂಪರ್ಕಿಸುವ ಸೋಲಾಪುರ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಮೇಲಿರುವುದೇ ಧೂಳಖೇಡ ಗ್ರಾಮ. ಬೇಸಿಗೆ, ಮಳೆಗಾಲ ಬಂದರೆ ಪ್ರಯಾಣಿಕರು ನೆರಳಿಗೆ ಹುಡುಕಬೇಕಿದೆ. ಇಲ್ಲ ಆಶ್ರಯವೇ ಇಲ್ಲ. ಕಾರಣ ಧೂಳಖೇಡಕ್ಕೆ ಬಸ್‌ ತಂಗುದಾಣವೇ ಇಲ್ಲ. ಹೀಗಾಗಿ ಬಿಸಿಲು, ಮಳೆಯಲ್ಲಿ ನಿಂತು ಬಸ್‌ಗಳಿಗೆ ಪ್ರಯಾಣಿಕರು ನಿತ್ಯ ಕಾಯಬೇಕಿದೆ.ಇಂಡಿ,

ಖಾಜು ಸಿಂಗೆಗೋಳ

ಕನ್ನಡಪ್ರಭ ವಾರ್ತೆ ಇಂಡಿ

ಮಹಾರಾಷ್ಟ್ರ -ಕರ್ನಾಟಕವನ್ನು ಸಂಪರ್ಕಿಸುವ ಸೋಲಾಪುರ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಮೇಲಿರುವುದೇ ಧೂಳಖೇಡ ಗ್ರಾಮ. ಬೇಸಿಗೆ, ಮಳೆಗಾಲ ಬಂದರೆ ಪ್ರಯಾಣಿಕರು ನೆರಳಿಗೆ ಹುಡುಕಬೇಕಿದೆ. ಇಲ್ಲ ಆಶ್ರಯವೇ ಇಲ್ಲ. ಕಾರಣ ಧೂಳಖೇಡಕ್ಕೆ ಬಸ್‌ ತಂಗುದಾಣವೇ ಇಲ್ಲ. ಹೀಗಾಗಿ ಬಿಸಿಲು, ಮಳೆಯಲ್ಲಿ ನಿಂತು ಬಸ್‌ಗಳಿಗೆ ಪ್ರಯಾಣಿಕರು ನಿತ್ಯ ಕಾಯಬೇಕಿದೆ.ಇದರಿಂದ ಪ್ರಯಾಣಿಕರು, ವಿದ್ಯಾರ್ಥಿಗಳು, ವೃದ್ಧರು ಇದ್ದ ಜಾಗದಲ್ಲಿಯೇ ಆಶ್ರಯ ಪಡೆದುಕೊಳ್ಳಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿದೆ. ಜಿಲ್ಲೆಯ ಗಡಿಯಲ್ಲಿರುವ ಧೂಳಖೇಡದಿಂದ ಸಾವಿರಾರು ಪ್ರಯಾಣಿಕರು ಪ್ರತಿನಿತ್ಯ ಈ ಗ್ರಾಮದ ಮುಖಾಂತರ ವಿವಿಧ ಗ್ರಾಮಗಳಿಗೆ ಪ್ರಯಾಣಿಸುತ್ತಾರೆ. ನಿತ್ಯ ನೂರಾರು ಅಂತಾರಾಜ್ಯ ಹಾಗೂ ಸ್ಥಳೀಯ ಬಸ್ಸುಗಳು ಈ ಗ್ರಾಮದ ಹೆದ್ದಾರಿ ಮೂಲಕವೇ ಹಾದು ಹೋಗುತ್ತವೆ. ಮಾತ್ರವಲ್ಲ ಎಲ್ಲ ಬಸ್ಸುಗಳಿಗೂ ಇಲ್ಲಿ ನಿಲುಗಡೆ ವ್ಯವಸ್ಥೆ ಇದೆ.

ಆದರೆ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಒಂದು ಆಸನದ ವ್ಯವಸ್ಥೆ ಕೂಡ ಇಲ್ಲವಾಗಿದೆ. ಒಂದು ತಂಗುದಾಣವನ್ನು ಕೂಡ ಸರ್ಕಾರ ನಿರ್ಮಿಸಿಲ್ಲ. ಮರದ ನೆರಳೋ, ಗೋಡೆಯ ನೆರಳಿನಲ್ಲಿ ನಿಂತು ಬಸ್ಸುಗಳನ್ನು ಕಾಯುವ ಅನಿವಾರ್ಯತೆ ಪ್ರಯಾಣಿಕರದ್ದು.

ಧೂಳಖೇಡ ಗ್ರಾಮದಿಂದ - ಶಿರನಾಳ, ಮರಗೂರ, ಚಣೇಗಾಂವ, ಶಿರಗೂರ, ಹಲಸಂಗಿ, ಮರಗೂರ, ಅಂತಾರಾಜ್ಯದ ನಗರಗಳಾದ ಸೋಲಾಪುರ, ಪುಣೆ, ಮುಂಬೈ ನಗರಗಳಿಗೆ ಹೋಗುತ್ತಾರೆ. ಹಗಲು-ರಾತ್ರಿ ದಿನದ 24 ತಾಸು ಗಂಟೆಗಳ ಪ್ರಯಾಣಿಕರ ಪ್ರಮುಖ ಕೇಂದ್ರ ಬಿಂದುವಾಗಿದೆ. ಇಷ್ಟಿದ್ದರೂ ಯಾರೊಬ್ಬರು ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲು ಮುಂದಾಗಿಲ್ಲ.

ರಾಷ್ಟ್ರೀಯ ಹೆದ್ದಾರಿ ಇಲಾಖೆ ಬಸ್ಸು ನಿಲ್ದಾಣ ನಿರ್ಮಾಣ ಮಾಡಬೇಕಿತ್ತು. ಇಲ್ಲಿಯವರೆಗೆ ನಿಲ್ದಾಣದ ವ್ಯವಸ್ಥೆ ಮಾಡಿಲ್ಲ. ಇದರಿಂದಾಗಿ ಪ್ರಯಾಣಿಕರ ಗೋಳು ಹೇಳತೀರದಾಗಿದೆ. ಈಗಲಾದರೂ ಸಂಬಂದಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಬಸ್ ನಿಲ್ದಾಣ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ಮೂತ್ರಾಲಯ ವ್ಯವಸ್ಥೆ ಕಲ್ಪಿಸಿ:

ಪ್ರಯಾಣಿಕರು ಗಂಟೆಗಟ್ಟಲೆ ಬಸ್ಸಿಗಾಗಿ ಕಾಯ್ದು ಮೂತ್ರ ವಿಸರ್ಜನೆಗೆ ಜಾಗವಿಲ್ಲದೆ ಮಹಿಳೆಯರಿಗೆ ತುಂಬಾ ತೊಂದರೆಯಾಗಿದೆ. ಬೇಗನೆ ಸಂಬಂಧಪಟ್ಟ ಅಧಿಕಾರಿಗಳಾಗಲಿ, ಗ್ರಾಪಂನವರಾಗಲಿ ಇತ್ತ ಕಡೆ ಗಮನಹರಿಸಿ ಮಹಿಳೆಯರಿಗೆ ಮೂತ್ರ ವಿಸರ್ಜನೆಗಾಗಿ ಮೂತ್ರಾಲಯ ವ್ಯವಸ್ಥೆ ಮಾಡಿಸಬೇಕು ಎಂದೂ ಆಗ್ರಹಿಸಲಾಗಿದೆ.

ಧೂಳಖೇಡ ಗ್ರಾಮದ ಸರ್ವಿಸ್ ರಸ್ತೆಯ ಎರಡೂ ಬದಿಯ ಎಲ್ಲೆಂದರಲ್ಲಿ ಕಸ(ಹುಲ್ಲು) ಮತ್ತು ತ್ಯಾಜ್ಯ ವಸ್ತುಗಳಿಂದ ಕಸದ ರಾಶಿ ತುಂಬಿದೆ. ಗ್ರಾಮದ ರಸ್ತೆಯ ಪಕ್ಕಕ್ಕೆ ಇರುವ ಸ್ಥಳದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಇದಕ್ಕೆ ಸಂಬಂದಿಸಿದಂತೆ ರಾಷ್ಟ್ರೀಯ ಹೆದ್ದಾರಿಯವರು ಎರಡೂ ಬದಿಗೂ ಕಾಂಕ್ರಿಟ್ ಹಾಕಬೇಕು ಎಂದು ಆಗ್ರಹಿಸಿದ್ದಾರೆ.

ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ:

ರಣ ಬಿಸಿಲಿಗೆ ಜೀವ ತತ್ತರಿಸಿ ಹೋಗಿದೆ. ಬಸ್ಸು ನಿಲ್ದಾಣವೇ ಇಲ್ಲ. ಬಸ್ಸಿಗಾಗಿ ಕಾಯುವ ಸ್ಥಳದಲ್ಲಿ ನಲ್ಲಿ ಅಳವಡಿಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಬಸ್ ನಿಲ್ದಾಣ ನಿರ್ಮಾಣ ಆಗುವವರೆಗೆ ತಾತ್ಕಾಲಿಕ ಬಸ್ ಶೆಲ್ಟರ್ ನಿರ್ಮಿಸಲು ಗ್ರಾಪಂ ಮುಂದಾಗಬೇಕು ಎಂಬುದು ಪ್ರಯಾಣಿಕರ ಆಗ್ರಹವಾಗಿದೆ.

-----------------

ಕೋಟ್........

ಧೂಳಖೇಡ ಗಡಿ ಗ್ರಾಮವಾಗಿರುವುದರಿಂದ ಅನೇಕ ಸುತ್ತಮುತ್ತಲಿನ ಗ್ರಾಮಗಳ ಕೇಂದ್ರ ಬಿಂದುವಾಗಿದೆ. ಇಲ್ಲಿಂದ ರಾಜ್ಯ ಮತ್ತು ಅಂತರಾಜ್ಯ ಗ್ರಾಮಗಳಿಗೆ ಪ್ರಯಾಣಿಕರು ಪ್ರಯಾಣಿಸಬೇಕು. ಪ್ರಯಾಣಿಕರಿಗೆ ಬಸ್ ನಿಲ್ದಾಣ, ಸಾರ್ವಜನಿಕ ಮೂತ್ರಾಲಯ ವ್ಯವಸ್ಥೆ ಇಲ್ಲದಿರುವುದು ಬೇಸರವಾಗಿದೆ. ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಪ್ರಯಾಣಿಕರಿಗೆ ನಿಲ್ದಾಣ, ಮೂತ್ರಾಲಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು.

- ಮಹಿಳಾ ಪ್ರಯಾಣಿಕರು.ಧೂಳಖೇಡ.

ಸಾರ್ವಜನಿಕರಿಗೆ ಮೂತ್ರಾಲಯಕ್ಕೆ ಸೂಕ್ತ ಸ್ಥಳವನ್ನು ಪರಿಶೀಲಿಸಲಾಗುವುದು. ಮುಂದಿನ 15 ದಿನ ನನಗೆ ಕಾಲಾವಕಾಶ ನೀಡಿ, ಅದರೊಳಗೆ ಮಹಿಳೆಯರಿಗೆ ಮೂತ್ರಾಲಯ ಮತ್ತು ಬಸ್‌ ನಿಲ್ದಾಣ ಎರಡನ್ನು ನಿರ್ಮಾಣ ಮಾಡಲಾಗುವುದು.

- ಲಾಲಸಾಹೇಬ ನಧಾಪ್, ಅಭಿವೃದ್ಧಿ ಅಧಿಕಾರಿ ಗ್ರಾಪಂ ಧೂಳಖೇಡ.

--------------