ರಿಯಾಯ್ತಿಯಿಂದ ಸಂಚಾರ ನಿಯಮ ಬಗ್ಗೆ ಪ್ರಯಾಣಿಕರ ಅಸಡ್ಡೆ

| Published : Nov 22 2025, 04:15 AM IST

ರಿಯಾಯ್ತಿಯಿಂದ ಸಂಚಾರ ನಿಯಮ ಬಗ್ಗೆ ಪ್ರಯಾಣಿಕರ ಅಸಡ್ಡೆ
Share this Article
  • FB
  • TW
  • Linkdin
  • Email

ಸಾರಾಂಶ

ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರು, ಸರ್ಕಾರ ಶೇ.50 ರಿಯಾಯ್ತಿ ಕೊಟ್ಟಾಗ ದಂಡ ಪಾವತಿಸಿದರಾಯಿತು ಎಂದು ರಾಜಾರೋಷವಾಗಿ ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ. ಇದರಿಂದಾಗಿ ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡುವವರ ಸಂಖ್ಯೆ ದೀನೇ ದಿನೇ ಹೆಚ್ಚಾಗುತ್ತಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರು, ಸರ್ಕಾರ ಶೇ.50 ರಿಯಾಯ್ತಿ ಕೊಟ್ಟಾಗ ದಂಡ ಪಾವತಿಸಿದರಾಯಿತು ಎಂದು ರಾಜಾರೋಷವಾಗಿ ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ. ಇದರಿಂದಾಗಿ ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡುವವರ ಸಂಖ್ಯೆ ದೀನೇ ದಿನೇ ಹೆಚ್ಚಾಗುತ್ತಿದೆ.

ಸರ್ಕಾರ ತನ್ನ ಆದಾಯ ಹೆಚ್ಚಿಸಿಕೊಳ್ಳಲು ಆಗ್ಗಿಂದ್ದಾಗೆ ಬಾಕಿ ಇರುವ ದಂಡ ಪಾವತಿಸಲು ವಾಹನ ಸವಾರರಿಗೆ ಶೇ.50 ರಷ್ಟು ರಿಯಾಯಿತಿ ನೀಡುತ್ತಾ ಬರುತ್ತಿದ್ದು, ಇದರಿಂದಾಗಿ ವಾಹನ ಸವಾರರಲ್ಲಿ ಸಂಚಾರ ನಿಯಮಗಳನ್ನು ಪಾಲಿಸುವ ಬಗ್ಗೆ ಒಂದು ರೀತಿಯ ತಾತ್ಸಾರ ಮನೋಭಾವನೆ ಬಂದಿದೆ.

ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ಬಾಕಿ ಇರುವ ದಂಡ ಪಾವತಿಸಲು ಸರ್ಕಾರ ಶುಕ್ರವಾರದಿಂದ ಮತ್ತೊಮ್ಮೆ ಶೇ.50 ರಷ್ಟು ರಿಯಾಯಿತಿ ನೀಡಿದೆ. ಈ ರೀತಿಯ ರಿಯಾಯಿತಿಯನ್ನು ಆಗಾಗ್ಗೆ ನೀಡುತ್ತಿರುವುದರಿಂದ ಸಂಚಾರ ನಿಯಮ ಉಲ್ಲಂಘಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಜತೆಗೆ ಸಂಚಾರ ನಿಯಮ ಉಲ್ಲಂಘಿದವರು ಶೇ.50 ರಷ್ಟು ರಿಯಾಯಿತಿ ಕೊಟ್ಟಾಗ ಅದನ್ನು ಪಾವತಿಸಿದರೆ ಆಯಿತು ಎಂದು ನಿಯಮಗಳನ್ನು ಪಾಲಿಸಲು ಅಸಡ್ಡೆ ತೋರುತ್ತಿದ್ದಾರೆ. ಜತೆಗೆ ದಂಡದ ಮೊತ್ತ ಕಡಿಮೆ ಮಾಡುತ್ತಿರುವುದರಿಂದ ದಂಡದ ಬಗ್ಗೆ ವಾಹನ ಸವಾರರಿಗೆ ಭಯವೇ ಇಲ್ಲದಂತಾಗಿದೆ.

₹54 ಕೋಟಿ ಸಂಗ್ರಹ:

ಕಳೆದ ಆ.23 ರಿಂದ ಸೆ.12ವರೆಗೂ ನೀಡಿದ್ದ ರಿಯಾಯ್ತಿ ವೇಳೆ ₹54 ಕೋಟಿ ದಂಡ ಸಂಗ್ರಹವಾಗಿತ್ತು. ಇದೀಗ ನ.21 ರಿಂದ ಡಿ.12 ವರೆಗೂ ಶೇ.50ರಷ್ಟು ರಿಯಾಯಿತಿ ನೀಡಲಾಗಿದೆ. ಈಗಲೂ ಕೋಟ್ಯಂತರ ರು. ದಂಡ ಸಂಗ್ರಹವಾಗಲಿದೆ. ಸರ್ಕಾರ ಆದಾಯ ತುಂಬಿಸಿಕೊಳ್ಳಲು ನಿಯಮ ಉಲ್ಲಂಘಿಸುವವರಿಗೆ ಪರೋಕ್ಷವಾಗಿ ಉತ್ತೇಜನ ನೀಡುವಂತಾಗಿದೆ.

ಮೊದಲ ಬಾರಿಗೆ ₹120 ಕೋಟಿ ಸಂಗ್ರಹ:

2023 ರಲ್ಲಿ ರಾಜ್ಯ ಸರ್ಕಾರ ಶೇ.50ರಷ್ಟು ರಿಯಾಯಿತಿ ಘೋಷಿಸಿದ್ದಾಗ ಸಾರ್ವಜನಿಕರಿಂದ ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆ ವೇಳೆ ಬರೋಬ್ಬರಿ ₹120 ಕೋಟಿ ದಂಡ ಸಂಗ್ರಹವಾಗಿತ್ತು. ದಂಡ ಪಾವತಿಸುವ ಅವಧಿಯನ್ನು ವಿಸ್ತರಿಸುತ್ತಾ ಬರಲಾಯಿತು. ಹಲವು ವರ್ಷಗಳಿಂದ ದಂಡ ಬಾಕಿ ಉಳಿಸಿಕೊಂಡಿದ್ದವರೂ ತಾವಾಗಿಯೇ ಪೊಲೀಸರ ಬಳಿ ತೆರಳಿ ದಂಡ ಪಾವತಿಸಿದ್ದರು. ರಿಯಾಯಿತಿ ಕೊಟ್ಟ 9 ದಿನದಲ್ಲಿ ₹120 ಕೋಟಿಗೂ ಅಧಿಕ ದಂಡ ಸಂಗ್ರಹವಾಗಿತ್ತು.

ವಿನಾಯಿತಿ ನೀಡುವಂತೆ ನ್ಯಾಯಮೂರ್ತಿಗಳ ಸಲಹೆ:

ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ಕೋಟ್ಯಂತರ ಪ್ರಕರಣಗಳು ಬಾಕಿ ಇರುವ ಹಾಗೂ ಸರ್ಕಾರಕ್ಕೆ ನೂರಾರು ಕೋಟಿ ರು. ದಂಡದ ಮೊತ್ತ ಬರಬೇಕಿರುವ ವಿಚಾರ ಮನಗಂಡ ನ್ಯಾಯಮೂರ್ತಿ ಬಿ.ವೀರಪ್ಪ, ರಿಯಾಯಿತಿ ದರದಲ್ಲಿ ಟ್ರಾಫಿಕ್ ದಂಡ ಪಾವತಿಗೆ ಅವಕಾಶ ಕಲ್ಪಿಸುವ ಬಗ್ಗೆ ಚಿಂತಿಸಿದ್ದರು. ಇದರಿಂದ, ಪ್ರಕರಣಗಳು ಶೀಘ್ರ ಇತ್ಯರ್ಥವಾಗುವುದಷ್ಟೇ ಅಲ್ಲದೆ, ಸಾರ್ವಜನಿಕರಿಗೂ ಹೊರೆ ಕಡಿಮೆಯಾಗುವ ಜತೆಗೆ ಸರ್ಕಾರದ ಬೊಕ್ಕಸಕ್ಕೂ ಕೋಟ್ಯಂತರ ರು. ಹರಿದು ಬರಲಿದೆ ಎಂದಿದ್ದರು.

ರಾಜ್ಯ ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ನ್ಯಾಯಮೂರ್ತಿಗಳು ಚರ್ಚೆ ನಡೆಸಿ, ಎಲ್ಲರಿಗೂ ನ್ಯಾಯ ಒದಗಿಸುವ ಸಲುವಾಗಿ ಬಾಕಿ ಇರುವ ಸಂಚಾರ ಉಲ್ಲಂಘನೆ ದಂಡ ಪಾವತಿಗೆ ವಿನಾಯಿತಿ ನೀಡುವಂತೆ ಸಲಹೆ ನೀಡಿದ್ದರು. ಇದಕ್ಕೆ ರಾಜ್ಯ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರೂ ಸಮ್ಮತಿಸಿದ್ದರು. ಇದರಿಂದ, ರಾಜ್ಯಾದ್ಯಂತ ಸಂಚಾರ ಪೊಲೀಸರು ದಾಖಲಿಸಿರುವ ಸಂಚಾರ ಉಲ್ಲಂಘನೆ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ.50 ವಿನಾಯಿತಿ ನೀಡುವಂತೆ ಕೆಎಸ್​ಎಲ್​ಎಸ್​ಎ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಕಾನೂನು ಇಲಾಖೆಯ ಒಪ್ಪಿಗೆ ಪಡೆದ ಸಾರಿಗೆ ಇಲಾಖೆ, ಫೆ.3ರಿಂದ ಫೆ.11ರವರೆಗೆ ಶೇ.50 ರಿಯಾಯಿತಿ ದರದಲ್ಲಿ ದಂಡ ಪಾವತಿಸಲು ಅವಕಾಶ ಕಲ್ಪಿಸಿತ್ತು.

ಸರ್ಕಾರ ತನ್ನ ಬೊಕ್ಕಸವನ್ನು ತುಂಬಿಸಿಕೊಳ್ಳಲು, ಸಂಚಾರ ನಿಯಮ ಉಲ್ಲಂಘಿಸಿದವರಿಗೆ ಆಗಾಗ ಶೇ.50ರಷ್ಟು ರಿಯಾಯಿತಿಯನ್ನು ನೀಡುತ್ತಿದೆ. ಇದರಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ. ನಿಯಮ ಉಲ್ಲಂಘಿಸಿದವರಿಂದ ಕಾಲಮಿತಿಯಲ್ಲಿ ದಂಡ ವಸೂಲಿ ಮಾಡಬೇಕು. ರಿಯಾಯಿತಿ ನೀಡಿ ದಂಡ ವಸೂಲಿ ಮಾಡಬಾರದು. ಈ ರೀತಿ ಮಾಡುವುದರಿಂದ ಕಾನೂನಿನ ಮೇಲೆ ಜನರಿಗೆ ಇರುವ ಗೌರವ ಹೋಗುತ್ತದೆ.

-ನ್ಯಾ.ಎನ್‌.ಸಂತೋಷ್ ಹೆಗ್ಡೆ, ಮಾಜಿ ಲೋಕಾಯುಕ್ತರು