ಹಳೇಬೀಡು ಚಿಕ್ಕಮಗಳೂರು ಮತ್ತು ಸಕಲೇಶಪುರಕ್ಕೆ ಸಂಪರ್ಕಿಸುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳ ಸ್ಥಿತಿ ಅಧೋಗತಿಗೆ ತಲುಪಿದೆ. ರಸ್ತೆಗೆ ಇಳಿಯಲು ಯೋಗ್ಯವಲ್ಲದ ಹಳೆಯ ಹಾಗೂ ತುಕ್ಕು ಹಿಡಿದ ‘ಡಕೋಟಾ’ ಬಸ್‌ಗಳನ್ನೇ ಈ ಮಾರ್ಗದಲ್ಲಿ ಕಾರ್ಯಾಚರಣೆಗೆ ಬಿಡುತ್ತಿರುವುದರಿಂದ, ಬಸ್‌ಗಳು ಎಲ್ಲೆಂದರಲ್ಲಿ ಕೆಟ್ಟು ನಿಲ್ಲುವುದು ಮಾಮೂಲಾಗಿದೆ. ಇದರಿಂದ ನಿಗದಿತ ಸಮಯಕ್ಕೆ ತಮ್ಮ ಸ್ವಸ್ಥಾನ ತಲುಪಲಾಗದೆ ಪ್ರಯಾಣಿಕರು ನಡುರಸ್ತೆಯಲ್ಲಿ ಬದಲಿ ಬಸ್ಸಿಗಾಗಿ ಕಾಯುವುದು ಸಾಮಾನ್ಯವಾಗಿವೆ.

ಕನ್ನಡಪ್ರಭ ವಾರ್ತೆ ಬೇಲೂರು

ರಾಜ್ಯ ಸಾರಿಗೆ ಸಂಸ್ಥೆಯ ಚಿಕ್ಕಮಗಳೂರು, ಬೇಲೂರು ಹಾಗೂ ಸಕಲೇಶಪುರ ಡಿಪೋದಿಂದ ಹಳೆ ಡಕೋಟಾ ಬಸ್ಸುಗಳನ್ನೇ ರಸ್ತೆಗೆ ಬಿಡುತ್ತಿದ್ದು ಎಲ್ಲೆಂದರಲ್ಲಿ ಕೆಟ್ಟುನಿಂತು ಪ್ರಯಾಣಿಕರು ತಮ್ಮ ಸ್ವಸ್ಥಾನ ತಲುಪಲಾಗದೇ ನಡುರಸ್ತೆಯಲ್ಲಿ ನಿಂತು ಪರದಾಡುವ ದೃಶ್ಯ ಸಾಮಾನ್ಯವಾಗಿದ್ದು ಸಾರಿಗೆ ಸಂಸ್ಥೆಯ ಸಚಿವರಿಗೆ ಹಿಡಿಶಾಪ ಹಾಕುತ್ತಿದ್ದಾರೆ.ವಿಶ್ವವಿಖ್ಯಾತ ಪ್ರವಾಸಿ ತಾಣ ಬೇಲೂರು, ಹಳೇಬೀಡು ಚಿಕ್ಕಮಗಳೂರು ಮತ್ತು ಸಕಲೇಶಪುರಕ್ಕೆ ಸಂಪರ್ಕಿಸುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳ ಸ್ಥಿತಿ ಅಧೋಗತಿಗೆ ತಲುಪಿದೆ. ರಸ್ತೆಗೆ ಇಳಿಯಲು ಯೋಗ್ಯವಲ್ಲದ ಹಳೆಯ ಹಾಗೂ ತುಕ್ಕು ಹಿಡಿದ ‘ಡಕೋಟಾ’ ಬಸ್‌ಗಳನ್ನೇ ಈ ಮಾರ್ಗದಲ್ಲಿ ಕಾರ್ಯಾಚರಣೆಗೆ ಬಿಡುತ್ತಿರುವುದರಿಂದ, ಬಸ್‌ಗಳು ಎಲ್ಲೆಂದರಲ್ಲಿ ಕೆಟ್ಟು ನಿಲ್ಲುವುದು ಮಾಮೂಲಾಗಿದೆ. ಇದರಿಂದ ನಿಗದಿತ ಸಮಯಕ್ಕೆ ತಮ್ಮ ಸ್ವಸ್ಥಾನ ತಲುಪಲಾಗದೆ ಪ್ರಯಾಣಿಕರು ನಡುರಸ್ತೆಯಲ್ಲಿ ಬದಲಿ ಬಸ್ಸಿಗಾಗಿ ಕಾಯುವುದು ಸಾಮಾನ್ಯವಾಗಿವೆ.

ದಿನನಿತ್ಯ ಈ ಮಾರ್ಗದಲ್ಲಿ ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಿಗಳು, ವ್ಯಾಪಾರಿಗಳು ಹಾಗೂ ಹಿರಿಯ ನಾಗರಿಕರು ಲಕ್ಷಾಂತರ ಸಂಖ್ಯೆಯಲ್ಲಿ ಸಂಚರಿಸುತ್ತಾರೆ. ಆದರೆ, ಸಾರಿಗೆ ಸಂಸ್ಥೆಯ ನಿರ್ಲಕ್ಷ್ಯದಿಂದಾಗಿ ಇಲ್ಲಿನ ಜನರಿಗೆ ನೆಮ್ಮದಿ ಪ್ರಯಾಣಕ್ಕೆ ದಕ್ಕೆಯಾಗಿದೆ. ಅರ್ಧ ದಾರಿಯಲ್ಲೇ ಬಸ್ ಕೈಕೊಡುವುದರಿಂದ ಪ್ರಯಾಣಿಕರು ಬಿಸಿಲು, ಮಳೆಯಲ್ಲಿ ಗಂಟೆಗಟ್ಟಲೆ ರಸ್ತೆ ಬದಿಯಲ್ಲಿ ಕಾಯುವಂತಾಗಿದೆ. ತುರ್ತು ಕೆಲಸಗಳಿಗಾಗಿ ತೆರಳುವವರು ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗುತ್ತಿಲ್ಲ. ತುರ್ತು ಚಿಕಿತ್ಸೆಗೆ ತೆರಳುವ ರೋಗಿಗಳ ಪಾಡು ಹೇಳತೀರದಾಗಿದೆ. ಹಲವಾರು ವರ್ಷಗಳಿಂದ ಓಡಾಡುತ್ತಿರುವ, ಲಕ್ಷಾಂತರ ಕಿ.ಮೀ. ಓಡಾಡಿರುವ ಹಳೇ ಮಾದರಿ ಬಸ್ಸುಗಳನ್ನೇ ಕಾಟಾಚಾರದ ರಿಪೇರಿ ಮಾಡಿ ರಸ್ತೆಗೆ ಬಿಡಲಾಗುತ್ತಿದೆ. ಎಂಜಿನ್ ಸಾಮರ್ಥ್ಯ ಸಾಲದೆ ಬಸ್‌ಗಳು ಪದೇ ಪದೇ ಕೆಟ್ಟು ನಿಲ್ಲುತ್ತಿವೆ. ಬ್ರೇಕ್ ಫೇಲ್ ಆಗುವುದು, ಸ್ಟೇರಿಂಗ್ ಕಟ್ ಆಗುವುದು ಸರ್ವೇಸಾಮಾನ್ಯವಾಗಿದೆ. ಹತ್ತಾರು ವರ್ಷಗಳ ಹಿಂದೆ ಇದೇ ರೀತಿ ಹಳೆ ಕಾಲದ ಸಾರಿಗೆ ಬಸ್ಸು ಸ್ಟೇರಿಂಗ್ ತುಂಡಾಗಿ ಬೇಲೂರು ಬಳಿಯ ವಿಷ್ಣುಸಮುದ್ರ ಕೆರೆಗೆ ಬಿದ್ದು ಆರು ಜನ ಜಲಸಮಾಧಿಯಾಗಿರುವ ಘಟನೆ ನಡೆದಿದ್ದರೂ ಸಾರಿಗೆ ಇಲಾಖೆ ಪಾಠ ಕಲಿತಿಲ್ಲ ಎನ್ನುವುದು ಬೇಸರದ ವಿಷಯವಾಗಿದೆ. ಸಾಮಾನ್ಯ ಜನರ ತೆರಿಗೆ ಹಣದಿಂದ ನಡೆಯುವ ಸಾರಿಗೆ ಸಂಸ್ಥೆ ಪ್ರಯಾಣಿಕರಿಗೆ ಕನಿಷ್ಠ ಸುರಕ್ಷತೆ ಹಾಗೂ ಸೌಲಭ್ಯ ನೀಡಲು ವಿಫಲವಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಆಗದ ಕಾರಣ ಸಾರಿಗೆ ಬಸ್ಸುಗಳ ರಿಪೇರಿಗೆ ಹಾಗೂ ಹೊಸ ವಾಹನ ಖರೀದಿಸಲು ಆಗದೆ ಸರ್ಕಾರ ಪರದಾಡುತ್ತಿದೆ. ಕೂಡಲೇ ಈ ಮಾರ್ಗದಲ್ಲಿ ಸಂಚರಿಸುತ್ತಿರುವ ಎಲ್ಲ ಹಳೆ ಬಸ್‌ಗಳನ್ನು ವಾಪಸ್ ಪಡೆದು, ಹೊಸ ಮತ್ತು ಸುಧಾರಿತ ಬಸ್‌ಗಳನ್ನು ನಿಯೋಜಿಸಬೇಕು. ಇಲ್ಲದಿದ್ದರೆ ಸಾರಿಗೆ ಇಲಾಖೆ ಕಚೇರಿ ಮುಂದೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಕರವೇ ಪ್ರವೀಣ್ ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ವಿ ಎಸ್ ಭೋಜೇಗೌಡ ಎಚ್ಚರಿಕೆ ನೀಡಿದ್ದಾರೆ.