ಸೌಲಭ್ಯವಿಲ್ಲದ ಕೊಟ್ಟೂರು ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಫಜೀತಿ

| Published : Jan 21 2025, 12:30 AM IST

ಸಾರಾಂಶ

ಪಟ್ಟಣದಲ್ಲಿನ ಕೆಕೆಆರ್‌ಟಿಸಿ ಬಸ್ ನಿಲ್ದಾಣ ಮೂಲಭೂತ ಸೌಕರ್ಯಗಳು ಇಲ್ಲದೇ ನರಳುತ್ತಿದೆ.

ಜಿ.ಸೋಮಶೇಖರ

ಕೊಟ್ಟೂರು: ಸದಾ ಪ್ರಯಾಣಿಕರಿಂದ ತುಂಬಿರುವ ಪಟ್ಟಣದಲ್ಲಿನ ಕೆಕೆಆರ್‌ಟಿಸಿ ಬಸ್ ನಿಲ್ದಾಣ ಮೂಲಭೂತ ಸೌಕರ್ಯಗಳು ಇಲ್ಲದೇ ನರಳುತ್ತಿದೆ. ಇದೀಗ ನೂತನ ಬಸ್ ನಿಲ್ದಾಣ ನಿರ್ಮಾಣ ಮಾಡುವ ನೆಪದಿಂದಾಗಿ ಸೌಕರ್ಯಗಳನ್ನು ಕಲ್ಪಿಸಿಕೊಡಲು ಮುಂದಾಗದೇ ಕೆಕೆಆರ್‌ಟಿಸಿ ಸಂಸ್ಥೆ ಪ್ರಯಾಣಿಕರ ಬೇಸರಕ್ಕೆ ಕಾರಣವಾಗಿದೆ.

ಕೊಟ್ಟೂರು ಬಸ್ ನಿಲ್ದಾಣವನ್ನು 1984ರಲ್ಲಿ ಆಗಿನ ಪ್ರಯಾಣಿಕರ ಸಂಖ್ಯೆಗೆ ಪಟ್ಟಣದ ಹೃದಯಭಾಗದಲ್ಲಿ ಕೇವಲ 60 ಸೆಂಟ್ಸ್ ಜಾಗದಲ್ಲಿ ನಿರ್ಮಾಣವಾಗಿತ್ತು. ಪ್ರಸ್ತುತ ಈ ಬಸ್ ನಿಲ್ದಾಣವನ್ನು ಅಭಿವೃದ್ಧಿಪಡಿಸಿ ಹೊಸ ನಿಲ್ದಾಣ ನಿರ್ಮಿಸುವ ಯೋಜನೆಯನ್ನು ಸಂಸ್ಥೆ ಹಮ್ಮಿಕೊಂಡಿತು. ಇದಕ್ಕೆ ಅನುದಾನವನ್ನು ಸರ್ಕಾರದಿಂದ ನಿರೀಕ್ಷಿಸಲಾಗಿತ್ತಾದರೂ ಹತ್ತಾರು ವರ್ಷಗಳಿಂದ ಸರ್ಕಾರ ಈ ನಿಲ್ದಾಣ ನಿರ್ಮಾಣಕ್ಕೆ ಅನುದಾನ ನೀಡಲು ಹಿಂದೇಟು ಹಾಕಿ ಪ್ರಸ್ತಾವನೆಗೆ ಅಂತಿಮ ಶರಾ ಬರೆದಿತ್ತು. ಸಾರಿಗೆ ಸಂಸ್ಥೆ ಈ ಬಸ್ ನಿಲ್ದಾಣ ಕೆಕೆಆರ್‌ಟಿಸಿ ವ್ಯಾಪ್ತಿಗೆ ಬರುವ ಹಿನ್ನೆಲೆಯಲ್ಲಿ ಶಾಸಕ ಕೆ.ನೇಮರಾಜ ನಾಯ್ಕ ಕೆಕೆಆರ್‌ಡಿಬಿಯಿಂದ ₹3 ಕೋಟಿ ಅನುದಾನ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾದರು. ಹೊಸ ಬಸ್ ನಿಲ್ದಾಣ ನಿರ್ಮಿಸಲು ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಈ ಹಿನ್ನೆಲೆಯಲ್ಲಿ ನೂತನ ಬಸ್ ನಿಲ್ದಾಣ ನಿರ್ಮಿಸಲು ಕೆಕೆಆರ್ ಟಿಸಿ ಎಂಜಿನಿಯರ್ ಕಚೇರಿಯವರು ಟೆಂಡರ್ ಹೊರಡಿಸಿದರಾದರು ಯಾವ ಗುತ್ತಿಗೆದಾರನೂ ಮುಂದೆ ಬಾರದ ಹಿನ್ನೆಲೆಯಲ್ಲಿ ಮರು ಟೆಂಡರ್ 3ನೇ ಬಾರಿಗೆ ಆಹ್ವಾನಿಸಿದಾಗ ಗುತ್ತಿಗೆದಾರರು ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಕೊಟ್ಟೂರು ಹೊಸ ಬಸ್ ನಿಲ್ದಾಣ ನಿರ್ಮಿಸಲು ಹಾಲಿ ನಿಲ್ದಾಣದಲ್ಲಿನ ಸಂಸ್ಥೆಯ ಮಳಿಗೆಗಳಲ್ಲಿನ ಹೋಟೆಲ್ ಮತ್ತಿತರ ಬಾಡಿಗೆ ಅಂಗಡಿಗಳನ್ನು ಜ.10ರಿಂದ ಬಂದ್ ಮಾಡಲಾಗಿದೆ. ಆದರೆ ನಿಲ್ದಾಣದ ಒಳಗೆ ಬಸ್ ಸಂಚಾರ ಯಥಾ ರೀತಿ ಮುಂದುವರಿದಿದೆ. ಯಾವ ದಿನದಿಂದ ಬಸ್ ನಿಲ್ದಾಣ ಕಾಮಗಾರಿ ಕೈಗೊಳ್ಳಲಾಗುತ್ತದೆ ಎನ್ನುವ ಖಾತರಿ ಕೂಡ ಇಲ್ಲ. ಕುಡಿಯುವ ನೀರು, ಸ್ವಚ್ಛತೆ ಸಮಸ್ಯೆ ಇವೆ. ಪ್ರಯಾಣಿಕರಿಗೆ ಕುಳಿತುಕೊಳ್ಳಲು ಆಸನವಿಲ್ಲ. ಇಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳು ಇಲ್ಲ. ಪ್ರಯಾಣಿಕರ ಗೋಳನ್ನು ಕೇಳುವವರಿಲ್ಲ.

ಕೊಟ್ಟೂರು ಬಸ್ ನಿಲ್ದಾಣದಲ್ಲಿ ಯಾವುದೇ ಸೌಲಭ್ಯಗಳು ಇಲ್ಲ. ಕೇಳಿದರೆ ಸೂಕ್ತ ಉತ್ತರ ಯಾರಿಂದಲು ಸಿಗುತ್ತಿಲ್ಲ ಎನ್ನುತ್ತಾರೆ ವಿದ್ಯಾರ್ಥಿ ಕೊಟ್ಟೂರು ಅನಿಲ್.

ಕೊಟ್ಟೂರಿನ ಬಸ್ ನಿಲ್ದಾಣವನ್ನು ಹೊಸದಾಗಿ ನಿರ್ಮಿಸುವ ಉದ್ದೇಶದಿಂದ ಹಿರಿಯ ಅಧಿಕಾರಿಗಳು ಸೂಚಿಸಿರುವ ಮೇರೆಗೆ ನಿಲ್ದಾಣದಲ್ಲಿ ಹೋಟೆಲ್ ಅಂಗಡಿಗಳನ್ನು ಬಂದ್ ಮಾಡಿಸಿದ್ದೇವೆ. ಹೊಸ ಬಸ್‌ ನಿಲ್ದಾಣವಾದ ಬಳಿಕ ಎಲ್ಲ ಸೌಲಭ್ಯಗಳನ್ನು ಕಲ್ಪಿಸುತ್ತೇವೆ ಎನ್ನುತ್ತಾರೆ ವಿಭಾಗಿಯ ನಿಯಂತ್ರಣ ಅಧಿಕಾರಿ ತಿಮ್ಮಾರೆಡ್ಡಿ.