ಪಟೇಲರು ರಾಷ್ಟ್ರದ ಏಕತೆಗಾಗಿ ಜೀವನ ಮುಡುಪು

| Published : Nov 01 2025, 02:30 AM IST

ಸಾರಾಂಶ

ಸ್ವಾತಂತ್ರ್ಯ ಪೂರ್ವದಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲ್ ಸೇರಿದಂತೆ ಇತರೆ ಹಲವಾರು ನಾಯಕರು ಎಷ್ಟು ಶ್ರಮ ಪಟ್ಟಿದ್ದಾರೆ. ರಾಷ್ಟ್ರೀಯ ಐಕ್ಯತೆ ರಕ್ತದಲ್ಲಿತ್ತು.

ಕೊಪ್ಪಳ: ಸರ್ದಾರ್ ವಲ್ಲಭಭಾಯ್‌ ಪಟೇಲ್ ತಮ್ಮ ಜೀವನದುದ್ದಕ್ಕೂ ರಾಷ್ಟ್ರದ ಏಕತೆಗಾಗಿ ಶ್ರಮಿಸಿದ್ದರು ಎಂದು ಉಪಲೋಕಾಯುಕ್ತ ಬಿ. ವೀರಪ್ಪ ಹೇಳಿದರು.

ಅವರು ಶುಕ್ರವಾರ ಕೊಪ್ಪಳ ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಐಕ್ಯತಾ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಐಕ್ಯತೆಗಾಗಿ ಓಟ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲ್ ಸೇರಿದಂತೆ ಇತರೆ ಹಲವಾರು ನಾಯಕರು ಎಷ್ಟು ಶ್ರಮ ಪಟ್ಟಿದ್ದಾರೆ. ರಾಷ್ಟ್ರೀಯ ಐಕ್ಯತೆ ರಕ್ತದಲ್ಲಿತ್ತು. ಐಕ್ಯತೆ ಬೆಳೆಸಬೇಕಾದರೆ ನಮ್ಮಲ್ಲಿ ನಿಸ್ವಾರ್ಥ ದೇಶಭಕ್ತಿ ಇರಬೇಕು. ಭಾರತ ಹಲವಾರು ಧರ್ಮಗಳ ಸಮ್ಮಿಲನವಾಗಿದೆ. ಐಕ್ಯತೆಗಾಗಿ ನಾವು ದಿನದ 24 ತಾಸು ಶ್ರಮಿಸಬೇಕಿದೆ ಎಂದರು.

ಐಕ್ಯತೆ ಜತೆಗೆ ಈ ದೇಶದ ದೊಡ್ಡ ಪಿಡುಗು ಭ್ರಷ್ಟಾಚಾರವಾಗಿದೆ.ಇದರ ನಿರ್ಮೂಲನೆಗೆ ನಾವೆಲ್ಲರೂ ಶ್ರಮಿಸಬೇಕಿದೆ. ನಮ್ಮ ಮಕ್ಕಳಿಗೆ ದೇಶಭಕ್ತಿ, ದೇಶಾಭಿಮಾನ ಹಾಗೂ ಐಕ್ಯತೆಯಿಂದ ಬಾಳುವಂತೆ ಅವರಿಗೆ ತಿಳಿ ಹೇಳಬೇಕೆಂದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಎಸ್ಪಿ ಡಾ.ರಾಮ್ ಎಲ್. ಅರಸಿದ್ದಿ, ಕರ್ನಾಟಕ ಲೋಕಾಯುಕ್ತದ ವಿಚಾರಣೆ ಅಪರ ನಿಬಂಧಕ ಡಾ.ಕಸನಪ್ಪ ನಾಯ್ಕ,ರಮಾಕಾಂತ್ ಚವ್ಹಾಣ ಹಾಗೂ ಅರವಿಂದ ಎನ್.ವಿ., ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮಹಾಂತೇಶ್ ಎಸ್.ದರಗದ, ರಾಯಚೂರು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸತೀಶ್ ಎಸ್. ಚಿಟಗುಬ್ಬಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಹೇಮಂತಕುಮಾರ್, ಉಪ ವಿಭಾಗಾಧಿಕಾರಿ ಮಹೇಶ ಮಾಲಗಿತ್ತಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ನಿರ್ಮಲಾ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಠಲ ಜಾಬಗೌಡರ ಸೇರಿದಂತೆ ಇತರೆ ಅಧಿಕಾರಿಗಳು ಹಾಗೂ ಜಿಲ್ಲಾ ಕ್ರೀಡಾ ವಸತಿ ನಿಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಂತರ ಉಪಲೋಕಾಯುಕ್ತರು ಜಿಲ್ಲಾ ಕ್ರೀಡಾ ವಸತಿ ನಿಲಯಕ್ಕೆ ಭೇಟಿ ನೀಡಿ ವಸತಿ ನಿಲಯದಲ್ಲಿ ಮಕ್ಕಳಿಗೆ ನೀಡುತ್ತಿರುವ ಸೌಲಭ್ಯ ಪರಿಶೀಲಿಸಿದ ನಂತರ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ ವಸತಿ ನಿಲಯದಲ್ಲಿ ಮಕ್ಕಳಿಗೆ ಯಾವುದೇ ಸಮಸ್ಯೆಗಳಾಗದಂತೆ ನೋಡಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.