ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ನಗರಾಭಿವೃದ್ಧಿ ಪ್ರಾಧಿಕಾರದ (ಹುಡಾ) ಅಧ್ಯಕ್ಷರಾಗಿ ಕುರುಬ ಸಮಾಜದ ಜಿಲ್ಲಾಧ್ಯಕ್ಷ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಪಟೇಲ್ ಶಿವಪ್ಪ ಅವರು ಸೋಮವಾರ ಮಧ್ಯಾಹ್ನ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು.ಹುಡಾ ಅಧ್ಯಕ್ಷ ಹುದ್ದೆ ಕಳೆದ ಎರಡು ವರ್ಷಗಳಿಂದ ಖಾಲಿಯಿತ್ತು. ಹುದ್ದೆ ನೇಮಕಾತಿ ಕುರಿತು ವಿವಿಧ ರಾಜಕೀಯ ಪಕ್ಷಗಳು ಪೈಪೋಟಿ ನಡೆಸಿದ್ದರಿಂದ ಸ್ಥಳೀಯ ಮುಖಂಡರ ಒತ್ತಡ ಮತ್ತು ದಟ್ಟ ಲಾಭಿ ಕಾರ್ಯಾಚರಣೆಗಳ ನಡುವೆಯೇ ಸರ್ಕಾರ ನಿರ್ಧಾರ ಕೈಗೊಳ್ಳುವಲ್ಲಿ ವಿಳಂಭವಾಗಿತ್ತು. ಆದರೆ ಅಂತಿಮವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಪಟೇಲ್ ಶಿವಪ್ಪ ಅವರ ನೇಮಕಾತಿ ಸರ್ಕಾರದ ಆದೇಶದ ಮೂಲಕ ಖಚಿತಗೊಂಡಿತು. ಅಧಿಕಾರ ಸ್ವೀಕಾರ ಸಂದರ್ಭದಲ್ಲಿ ಅರಸೀಕೆರೆ ಭಾಗದ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಪಟೇಲ್ ಶಿವಪ್ಪ ನೇಮಕಾತಿ ಹಾಸನ ಜಿಲ್ಲೆಯಲ್ಲಿ ಕುರುಬ ಸಮುದಾಯದ ಬಲವರ್ಧನೆಗೆ ಕಾರಣವಾಗಿದೆ ಎಂಬ ಅಭಿಪ್ರಾಯ ಸಹ ವ್ಯಕ್ತವಾಯಿತು.
ಆದರೆ ಹಾಸನ ನಗರದ ಪ್ರಮುಖ ನಾಯಕರು ಬಹುತೇಕ ಗೈರು ಹಾಜರಾಗಿದ್ದು, ಇದರಿಂದ ಸ್ಥಳೀಯ ಅಸಮಾಧಾನ ಬಯಲಾಯಿತು. ಹಾಸನ ನಗರದ ವಿವಿಧ ಸಂಘಟನೆಗಳು ಮತ್ತು ಮುಖಂಡರು, ಅಧ್ಯಕ್ಷ ಹುದ್ದೆ ಹಾಸನ ನಗರಸ್ಥರಿಗೆ ನೀಡಬೇಕು ಎಂದು ಹಲವು ಬಾರಿ ಸರ್ಕಾರಕ್ಕೆ ಒತ್ತಡ ಹೇರಿದ್ದರು. ಈ ಬೇಡಿಕೆ ಪೂರೈಸದ ಹಿನ್ನೆಲೆ ನಗರ ಮುಖಂಡರ ಅಸಮಾಧಾನ ಸ್ಪಷ್ಟವಾಗಿ ವ್ಯಕ್ತವಾಯಿತು.ಪಟೇಲ್ ಶಿವಪ್ಪ ಅವರ ನೇಮಕಾತಿ ಹಾಸನ ರಾಜಕೀಯದಲ್ಲಿ ಹೊಸ ಸಮೀಕರಣ ಮೂಡಿಸಿದೆ. ಒಂದು ಕಡೆ ಕುರುಬ ಸಮುದಾಯದ ನೇತೃತ್ವ ಬಲವಾಗುತ್ತಿದ್ದರೆ, ಇನ್ನೊಂದು ಕಡೆ ಹಾಸನ ನಗರದ ಮುಖಂಡರು ಕಡೆಗಣನೆಯ ಅನುಭವವನ್ನು ಹೊಂದಿದ್ದಾರೆ. ಕಾಂಗ್ರೆಸ್ ಒಳಜಗಳ ಹಾಗೂ ನಾಯಕತ್ವದ ಪೈಪೋಟಿ ಮುಂದುವರಿಯುವ ಸಾಧ್ಯತೆ ಇದೆ ಎಂದು ರಾಜಕೀಯ ವಲಯ ಅಂದಾಜು ಮಾಡುತ್ತಿದೆ. ಹಾಸನ ಹುಡಾ ವ್ಯಾಪ್ತಿಯಲ್ಲಿ ಹಲವು ಯೋಜನೆಗಳು ಬಾಕಿ ಉಳಿದಿದ್ದು, ಭೂಸ್ವಾಧೀನ, ವಸತಿ ಯೋಜನೆಗಳು, ಮೂಲಸೌಕರ್ಯ ಕಾಮಗಾರಿಗಳು, ರಸ್ತೆ- ಚರಂಡಿ ಅಭಿವೃದ್ಧಿ ಮುಂತಾದ ಪ್ರಮುಖ ವಿಷಯಗಳನ್ನು ಬಗೆಹರಿಸುವ ಜವಾಬ್ದಾರಿ ಪಟೇಲ್ ಶಿವಪ್ಪ ಅವರ ಮೇಲಿದೆ. ಜೊತೆಗೆ ಸ್ಥಳೀಯ ನಾಯಕರು ಮತ್ತು ಸಮುದಾಯದ ಅಸಮಾಧಾನವನ್ನು ಶಮನಗೊಳಿಸುವುದೂ ಅವರ ಮುಂದಿರುವ ದೊಡ್ಡ ರಾಜಕೀಯ ಸವಾಲಾಗಿದೆ.
ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಪಟೇಲ್ ಶಿವಪ್ಪ ಮಾತನಾಡಿ, ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಮೂಲಕ ಹಾಸನದಲ್ಲಿ ಬಾಕಿ ಉಳಿದ ಯೋಜನೆಗಳನ್ನು ಶೀಘ್ರ ಪೂರ್ಣಗೊಳಿಸುವುದು ನನ್ನ ಮೊದಲ ಆದ್ಯತೆ. ಹಾಸನದ ಜನತೆಗೆ ಸಮರ್ಪಕ ಸೇವೆ ಒದಗಿಸುವುದೇ ನನ್ನ ಕರ್ತವ್ಯ. ಎಲ್ಲರ ಸಹಕಾರದೊಂದಿಗೆ ನಗರಾಭಿವೃದ್ಧಿಗೆ ನಿಷ್ಠೆಯಿಂದ ಕೆಲಸ ಮಾಡುವೆ ಎಂದು ಭರವಸೆ ನೀಡಿದರು.ಸಂಸದ ಶ್ರೇಯಸ್ ಎಂ. ಪಟೇಲ್, ಕಾಂಗ್ರೆಸ್ ಮುಖಂಡ ಹೆಚ್.ಕೆ. ಜವರೇಗೌಡ, ಆಯುಕ್ತ ರಮೇಶ್ ಇತರರು ಶುಭಹಾರೈಸಿದರು.