ನಿರಂತರ ಅಧ್ಯಯನ ಸಾಧನೆಗೆ ರಹದಾರಿ: ಶೀಲವಂತರ

| Published : Dec 09 2023, 01:15 AM IST

ನಿರಂತರ ಅಧ್ಯಯನ ಸಾಧನೆಗೆ ರಹದಾರಿ: ಶೀಲವಂತರ
Share this Article
  • FB
  • TW
  • Linkdin
  • Email

ಸಾರಾಂಶ

ಗಜೇಂದ್ರಗಡದ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ ''ಕನ್ನಡಪ್ರಭ'' ಯುವ ಆವೃತ್ತಿ ಬಿಡುಗಡೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಕಾಂಗ್ರೆಸ್ ಜಿಲ್ಲಾ ಮಾಧ್ಯಮ ವಕ್ತಾರ ಬಿ.ಎಸ್. ಶೀಲವಂತರ ಮಾತನಾಡಿದರು.

ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಯುವ ಆ‍ವೃತ್ತಿ ಬಿಡುಗಡೆ

ಗಜೇಂದ್ರಗಡ: ಸಾಧನೆಯ ರಹದಾರಿಗೆ ಏಕಾಗ್ರತೆ ಮುಖ್ಯವಾಗಿದೆ. ನಿರಂತರ ಅಧ್ಯಯನವು ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹೆಚ್ಚಿಸುವುದರ ಜತೆಗೆ ಉತ್ತಮ ಫಲಿತಾಂಶವನ್ನು ತಂದುಕೊಡಲಿದೆ ಎಂದು ಕಾಂಗ್ರೆಸ್ ಜಿಲ್ಲಾ ಮಾಧ್ಯಮ ವಕ್ತಾರ ಬಿ.ಎಸ್. ಶೀಲವಂತರ ಹೇಳಿದರು.ಸ್ಥಳೀಯ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ ''''ಕನ್ನಡಪ್ರಭ'''' ಯುವ ಆವೃತ್ತಿ ಬಿಡುಗಡೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಪಾಲಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಒಬ್ಬರು ತಮ್ಮ ಕರ್ತವ್ಯ ನಿರ್ವಹಿಸಲು ಅಲಕ್ಷ್ಯ ಮಾಡಿದರೆ ವಿದ್ಯಾರ್ಥಿಯ ಶೈಕ್ಷಣಿಕ ಜೀವನ ಸಾಧನೆಯ ಪಥದತ್ತ ಸಾಗಲು ಸಾಧ್ಯವಿಲ್ಲ. ಸ್ಪರ್ಧಾತ್ಮಕ ಜಗದಲ್ಲಿ ಎಲ್ಲ ಕ್ಷೇತ್ರದಲ್ಲಿಯೂ ಸಹ ನಾನೇ ಮೊದಲು ಬರಬೇಕು ಎಂಬ ಸ್ಪರ್ಧಾ ಮನೋಭಾವ ಹೆಚ್ಚಾಗಿದೆ. ಹೀಗಾಗಿ ನಾಳೆಯಿಂದ ಅಧ್ಯಯನ ಮಾಡೋಣ ಎನ್ನುವ ಚಿಂತನೆಯಿಂದ ಹೊರಬಂದು ಈ ಕ್ಷಣದಿಂದಲೇ ಓದುವ ಕಾರ್ಯಕ್ಕೆ ಮುಂದಾಗಬೇಕು. ಯುವ ಸಮೂಹದ ಮನಸ್ಸು ಚಂಚಲವಾಗಿರುವುದರಿಂದ ಸ್ಪರ್ಧಾತ್ಮಕ ಜಗತ್ತಿಗೆ ಮೊಬೈಲ್ ಹಾಗೂ ಟಿವಿ ಬಳಕೆಯಿಂದ ವಿದ್ಯಾಭ್ಯಾಸಕ್ಕೆ ಹಾಗೂ ಏಕಾಗ್ರತೆಗೆ ಅಡೆತಡೆ ಉಂಟಾಗುತ್ತಿರುವುದು ವಾಸ್ತವ ಸಂಗತಿಯಾಗಿದೆ. ಹೀಗಾಗಿ ತಂತ್ರಜ್ಞಾನ ಬಳಕೆಯು ನಮ್ಮ ಶೈಕ್ಷಣಿಕ ಜೀವನದ ಸಾಧನೆಗೆ ಸಹಾಯಕವಾಗಬೇಕು ಹೊರತು ಅದರ ಬಳಕೆಯು ಓದಿನಿಂದ ವಿಮುಖಗೊಳಿಸುವಂತಾಗಬಾರದು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.೮೫ ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸುವ ವಿದ್ಯಾರ್ಥಿಗೆ ರು.೨ ಸಾವಿರ ನೀಡಲಾಗುತ್ತದೆ ಎಂದ ಅವರು, ಬಿಸಿಯೂಟ ಅಡುಗೆಯಿಂದ ಶಿಕ್ಷಕರು ಸಮಪರ್ಕವಾಗಿ ಹಾಗೂ ಗುಣಾತ್ಮಕ ಶಿಕ್ಷಣವನ್ನು ನೀಡಲು ತೊಂದರೆಯಾಗುತ್ತಿದೆ. ಹೀಗಾಗಿ ಸರ್ಕಾರವು ಬಿಸಿಯೂಟ ಕರ್ತವ್ಯದ ಹೊರೆಯಿಂದ ಹೊರತರಲು ಪ್ರತ್ಯೇಕ ಸಿಬ್ಬಂದಿ ನೇಮಕಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದರು.ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯ ಝಡ್.ಯು. ಗೊಡೇಕಾರ ಮಾತನಾಡಿ, ಜ್ಞಾನಕ್ಕೆ ಸಮಾನವಾದ ಮತ್ತೊಂದು ಸಂಪತ್ತಿಲ್ಲ. ಎಲ್ಲ ಧರ್ಮಗಳಲ್ಲಿ ವಿದ್ಯೆಯೇ ಸರ್ವಶ್ರೇಷ್ಠ ಎನ್ನುವುದನ್ನು ದಾಖಲಿಸಲಾಗಿದೆ. ವಿದ್ಯಾರ್ಥಿಗಳು ವಿದ್ಯೆಯ ಮಹತ್ವವನ್ನು ಅರಿತು ಅಧ್ಯಯನ ಮಾಡಲು ಮುಂದಾಗಬೇಕು. ಸಾಧನೆ ಮಾಡಲು ಈಗಾಗಲೇ ಹಲವಾರು ಮಾರ್ಗಗಳಿವೆ. ಅದರಲ್ಲಿ ''''ಕನ್ನಡಪ್ರಭ'''' ಯುವ ಆವೃತ್ತಿ ಸಹ ಒಂದಾಗಿದೆ. ಹೀಗಾಗಿ ನಿಮಗೆ ಉಚಿತವಾಗಿ ನೀಡಿರುವ ಪತ್ರಿಕೆಗಳನ್ನು ಸದುಪಯೋಗ ಮಾಡಿಕೊಂಡು ಉತ್ತಮ ಸಾಧನೆ ಮಾಡಬೇಕು ಅಂದಾಗ ಮಾತ್ರ ಸಾಧನೆ ಸರಳವಾಗಲಿದೆ ಎಂದ ಅವರು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೆ.೮೫ರಷ್ಟು ಪ್ರತಿಶತ ಅಂಕಗಳನ್ನು ಗಳಿಸುವ ಪ್ರತಿ ವಿದ್ಯಾರ್ಥಿಗಳಿಗೆ ರು.೨ ಸಾವಿರ ನೀಡುವುದಾಗಿ ತಿಳಿಸಿದರೆ ಶಿಕ್ಷಕ ಎಂ.ಎನ್. ಕಡಗದ ಮಾತನಾಡಿ, ಶೇ. ೯೫ ಪ್ರತಿಶತ ಪಡೆಯುವ ವಿದ್ಯಾರ್ಥಿಗಳಿಗೆ ರು. ೫೦೦೦ ನೀಡುವುದಾಗಿ ಘೋಷಿಸುವ ಮೂಲಕ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.

ಕನ್ನಡಪ್ರಭ ವರದಿಗಾರ ಎಸ್.ಎಂ. ಸೈಯದ್ ಮಾತನಾಡಿ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಸಾಧನೆಯು ಸರಳವಾಗಲಿ ಎಂಬ ಸದುದ್ದೇಶದಿಂದ ಶಿಕ್ಷಣ ಪ್ರೇಮಿಗಳಾದ ಮುತ್ತಣ್ಣ ಮ್ಯಾಗೇರಿ ಹಾಗೂ ಬಿ.ಎಸ್. ಶೀಲವಂತರ ಅವರ ಸಾಮಾಜಿಕ ಕಾರ್ಯ ಅನುಕರಣೀಯ. ಹೀಗಾಗಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಬೇಕು ಎಂದರು.

ಸಹ ಶಿಕ್ಷಕರಾದ ಆರ್.ಜಿ. ಹೊಂಬಳ, ಎಂ.ಎಸ್. ಚುಂಚಾ, ಎಸ್.ಆರ್. ಹಿರೇಮಠ, ಬಿ.ಎಂ. ಪತ್ತಾರ ಸೇರಿ ಇತರರು ಇದ್ದರು.