ಸಂಶೋಧನೆ ತಪಸ್ಸು ಇದ್ದಂತೆ. ಅನೇಕ ಸಮಸ್ಯೆ, ಅನಾನುಕೂಲತೆ ಎದುರಿಸಿ ಸಾಧನೆ ಮಾಡಬೇಕಾಗುತ್ತದೆ. ತಾಳ್ಮೆ, ಅಧ್ಯಯನಶೀಲತೆ ಕ್ಷೇತ್ರ ಕಾರ್ಯ ಸಂಶೋಧಕರಿಗೆ ಮುಖ್ಯ.
ಧಾರವಾಡ:
ಸಂಶೋಧನೆ ತಪಸ್ಸು ಇದ್ದಂತೆ. ಅನೇಕ ಸಮಸ್ಯೆ, ಅನಾನುಕೂಲತೆ ಎದುರಿಸಿ ಸಾಧನೆ ಮಾಡಬೇಕಾಗುತ್ತದೆ. ತಾಳ್ಮೆ, ಅಧ್ಯಯನಶೀಲತೆ ಕ್ಷೇತ್ರ ಕಾರ್ಯ ಸಂಶೋಧಕರಿಗೆ ಮುಖ್ಯ ಎಂದು ಕಪ್ಪತಗುಡ್ಡದ ನಂದಿವೇರಿ ಮಠದ ಶಿವಕುಮಾರ ಸ್ವಾಮೀಜಿ ಹೇಳಿದರು.ಕರ್ನಾಟಕ ವಿದ್ಯಾವರ್ಧಕ ಸಂಘವು ಮಹಾದೇವಿ ಪ್ರಕಾಶನದ ಸಂಯುಕ್ತಾಶ್ರಯದಲ್ಲಿ ಡಾ. ಧನವಂತ ಹಾಜವಗೋಳ, ಡಾ. ಬಾಳಪ್ಪ ಚಿನಗುಡಿ ಹಾಗೂ ಡಾ. ಶಂಕ್ರಮ್ಮ ಹುಲಿಕಟ್ಟಿ ಅವರ ಗ್ರಂಥಗಳ ಲೋಕಾರ್ಪಣೆ ಮಾಡಿದ ಅವರು, ಹಾಜವಗೋಳ ಅವರ ಸಂಶೋಧನಾ ಮಹಾಪ್ರಬಂಧ “ಮುಳುಗುಂದ ನಾಡು ಒಂದು ಅಧ್ಯಯನ’ ಒಂದು ಮೌಲಿಕ ಕೃತಿ. ಈ ಕೃತಿ ರಚನೆಗೆ ಅವರು ಪಟ್ಟ ಪರಿಶ್ರಮ ಅಷ್ಟಿಷ್ಟಲ್ಲ. ಕಪ್ಪತಗುಡ್ಡದ ಜತೆ ಮುಳಗುಂದ ನಾಡು ಭಾವನಾತ್ಮಕವಾಗಿ ಬೆಸೆದುಕೊಂಡಿದೆ. ಮುಳುಗುಂದ ಹಾಗೂ ಸುತ್ತಲಿನ 12 ಹಳ್ಳಿಗಳು ಚಾರಿತ್ರಿಕವಾಗಿ ಮಹತ್ವ ಪಡೆದಿವೆ ಎಂದರು.
ಡಾ. ಬಿ.ವಿ. ಶಿರೂರ ಅವರು ಡಾ. ಧನವಂತ ಹಾಜವಗೋಳರ ಸಂಶೋಧನಾ ಪ್ರಬಂಧ “ತುಂಗಳ-ಸಾಂಸ್ಕೃತಿಕ ಅಧ್ಯಯನ ಕುರಿತು ಮಾತನಾಡಿ, ಹಾಜವಗೋಳ ಒಟ್ಟು ೨೦ ಕೃತಿ ರಚಿಸಿದ್ದಾರೆ. ತುಂಗಳ ಮೂವತ್ತು ಗ್ರಾಮಗಳನ್ನೊಳಗೊಂಡ ಪ್ರಮುಖ ಕೇಂದ್ರ. ಅದೊಂದು ಅಗ್ರಹಾರವಾಗಿತ್ತು ಎಂದು ಹೇಳಿ ಗ್ರಾಮದ ಕೆಳಸಮುದಾಯದ ಬದುಕು, ಜನರ ಸ್ಥಿತಿಗತಿ, ಆಚರಣೆ, ಶಾಸನ, ವೀರಗಲ್ಲುಗಳ ಬಗ್ಗೆ ಮನೋಜ್ಞವಾಗಿ ಚಿತ್ರಿಸಿದ್ದಾರೆ ಎಂದರು ಹೇಳಿದರು.ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಶಾಂತಿನಾಥ ದಿಬ್ಬದ, ಮಾಸ್ತಿಯವರ ಕತೆಗಳಲ್ಲಿ ಜೀವನ ದರ್ಶನ ಮಹಾಪ್ರಬಂಧ ಕುರಿತು ಮಾತನಾಡಿದರು. ಡಾ. ಬಾಳಪ್ಪ ಚಿನಗುಡಿ ಅವರು ಕನ್ನಡ ಸಾಹಿತ್ಯ, ಸಂಸ್ಕೃತಿ ಹಾಗೂ ಕನ್ನಡ ಸಾಹಿತ್ಯ: ತಲ್ಲಣಗಳು ಕುರಿತು ಮಾತನಾಡಿದರು. ಡಾ. ಶಂಕ್ರಮ್ಮ ಹುಲಿಕಟ್ಟಿ ಅವರು ಡಾ. ಧನವಂತ ಹಾಜವಗೋಳವರ ‘ಬಾನುಲಿ ಚಿಂತನಗಳು’ ಕೃತಿ ಪರಿಚಯಿಸಿದರು. ಸಂಶೋಧಕ ಡಾ. ಧನವಂತ ಹಾಜವಗೋಳ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಡಾ. ಸಂಜೀವ ಕುಲಕರ್ಣಿ ಮಾತನಾಡಿ, ನಮ್ಮ ಬದುಕಿಗೆ ಬೇಕಾದ ಸಾಹಿತ್ಯ ವೈದ್ಯಕೀಯ ಕ್ಷೇತ್ರದಲ್ಲಿ ಇಲ್ಲದಿರುವುದು ವಿಷಾದಕರ. ವೈದ್ಯರೂ ಸಾಹಿತ್ಯ ಓದುವಂತಾಗಬೇಕು ಎಂದರು.ಮಹಾದೇವಿ ಧ. ಹಾಜವಗೋಳ ಇದ್ದರು. ವೀರಣ್ಣ ಒಡ್ಡೀನ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕ ಮಾತನಾಡಿದರು. ಡಾ. ಪಿ.ಕೆ. ಧಾರವಾಡ ನಿರೂಪಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು. ಡಾ. ಕುಂ. ವೀರಭದ್ರಪ್ಪ, ಬಸವಪ್ರಭು ಹೊಸಕೇರಿ, ಸತೀಶ ತುರಮರಿ, ವಿಶ್ವೇಶ್ವರಿ ಹಿರೇಮಠ, ಡಾ. ಜಿನದತ್ತ ಹಡಗಲಿ ಇದ್ದರು.