ವೈದ್ಯರ ನಿರ್ಲಕ್ಷ್ಯದಿಂದಾಗಿ ರೋಗಿ ಸಾವು: ಆರೋಪ, ಪ್ರತಿಭಟನೆ

| Published : Aug 07 2024, 01:10 AM IST

ಸಾರಾಂಶ

ಯುವಕನಿಗೆ ತಕ್ಷಣವೇ ಚಿಕಿತ್ಸೆ ನೀಡಿದ್ದರೆ ಆತ ಬದುಕಿ ಉಳಿಯುತ್ತಿದ್ದ.

ಮರಿಯಮ್ಮನಹಳ್ಳಿ: ತಕ್ಷಣ ಚಿಕಿತ್ಸೆ ದೊರೆಯದೇ ಯುವಕ ಮೃತಪಟ್ಟಿದ್ದಾನೆ ಎಂದು ಆರೋಪಿಸಿ ಮೃತ ಸಂಬಂಧಿಕರು, ಸ್ಥಳೀಯರು ಮಂಗಳವಾರ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿನ 11 ನೇ ವಾರ್ಡಿನ ನಿವಾಸಿ ನಾಲಬಂದಿ ಸಲೀಂ (28) ಮೃತ ಯುವಕ. ಅನಾರೋಗ್ಯದ ಹಿನ್ನೆಲೆಯಲ್ಲಿ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಅರ್ಧ ಗಂಟೆ ವೈದ್ಯರಿಗಾಗಿ ಕಾದು ಕುಳಿತರೂ ಸೂಕ್ತ ಚಿಕಿತ್ಸೆ ನೀಡಲಿಲ್ಲವೆಂದು ಬಳಿಕ ಆ್ಯಂಬುಲೆನ್ಸನಲ್ಲಿ ಹೊಸಪೇಟೆ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಯುವಕ ಅಸುನೀಗಿದ್ದಾನೆ.

ಯುವಕನಿಗೆ ತಕ್ಷಣವೇ ಚಿಕಿತ್ಸೆ ನೀಡಿದ್ದರೆ ಆತ ಬದುಕಿ ಉಳಿಯುತ್ತಿದ್ದ. ಆಸ್ಪತ್ರೆಯಲ್ಲಿ ವೈದ್ಯರು, ಆಸ್ಪತ್ರೆ ಸಿಬ್ಬಂದಿ ಇಲ್ಲದ ಕಾರಣ ಯುವಕ ಪ್ರಾಣ ಕಳೆದುಕೊಂಡಿದ್ದಾನೆ. ವೈದ್ಯರು ಆಸ್ಪತ್ರೆಯಲ್ಲಿ ಇರುವುದೇ ಇಲ್ಲ. ಆಸ್ಪತ್ರೆಯಲ್ಲಿ ಯಾವುದೇ ಸೌಲಭ್ಯಗಳು ಇಲ್ಲ ಎಂದು ಸ್ಥಳೀಯರು ಆರೋಪಿಸಿ ಪ್ರತಿಭಟನೆ ನಡೆಸಿದರು.

ಆಸ್ಪತ್ರೆ ಮುಂಭಾಗ ನೂರಾರು ಜನರು ಜಮಾಯಿಸಿದ ತಕ್ಷಣವೇ ತಹಸೀಲ್ದಾರ ಶ್ರುತಿ ಮಾಳಪ್ಪಗೌಡ್ರು, ಎಎಸ್‌ಪಿ ಸಲೀಂ ಪಾಷ, ಡಿವೈಎಸ್‌ಪಿ ಮಲ್ಲೇಶಪ್ಪ ಮಲ್ಲಾಪುರ, ಸಿಪಿಐ ವಿಕಾಸ್‌ ಲಮಾಣಿ, ಪಿಎಸ್‌ಐ ಮೌನೇಶ್‌ ರಾಥೋಡ, ಡಿಎಚ್‌ಒ ಡಾ. ಶಂಕರ ನಾಯ್ಕ್, ಡಾ.ಭಾಸ್ಕರ ಆಸ್ಪತ್ರೆಗೆ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಿದರು.

ನಂತರ ಸ್ಥಳೀಯ ಶಾಸಕ ಕೆ.ನೇಮಿರಾಜ ನಾಯ್ಕ್‌ ಆಸ್ಪತ್ರೆಗೆ ಭೇಟಿ ನೀಡಿದರು.

ಬಳಿಕ ಮಾತನಾಡಿದ ಶಾಸಕ ನೇಮಿರಾಜ್‌ ನಾಯ್ಕ್‌, ಇವತ್ತಿನಿಂದಲೇ ಮರಿಯಮ್ಮನಹಳ್ಳಿ ಸಮುದಾಯ ಆರೋಗ್ಯ ಕೇಂದ್ರದ ಆಸ್ಪತ್ರೆಯಲ್ಲಿ ಮೂವರು ವೈದ್ಯರು ಸೇವೆ ಸಲ್ಲಿಸಲಿದ್ದಾರೆ. ಹಗಲು ವೇಳೆ ಇಬ್ಬರು, ರಾತ್ರಿ ಓರ್ವ ವೈದ್ಯರು ಸೇವೆ ಸಲ್ಲಿಸಲಿದ್ದಾರೆ. ಇವರೊಂದಿಗೆ ಓರ್ವ ಮಹಿಳಾ ವೈದ್ಯರು ಸೇವೆ ಸಲ್ಲಿಸಲಿದ್ದಾರೆ. ಈಗ ಐವರು ಸ್ಟಾಫ್‌ ನರ್ಸ್‌ ಇದ್ದಾರೆ. ಇವರೊಂದಿಗೆ ಹೆಚ್ಚುವರಿ ಮೂವರು ನರ್ಸ್‌ ಸೇವೆ ಸಲ್ಲಿಸಲಿದ್ದಾರೆ ಎಂದರು.

ಈ ವೇಳೆ ಮುಖಂಡರಾದ ಗೋವಿಂದರ ಪರುಶುರಾಮ, ಗರಗ ಪ್ರಕಾಶ ಪೂಜಾರ್‌, ಗುಂಡಾಸ್ವಾಮಿ, ದೊಡ್ಡ ರಾಮಣ್ಣ, ಆದಿಮನಿ ಹುಸೇನ್‌ ಬಾಷಾ, ಎಸ್‌.ಮಹಮ್ಮದ್‌, ಬೆಣಕಲ್‌ ಬಾಷಾ, ಮರಡಿ ಸುರೇಶ್‌, ಪರುಶುರಾಮ, ವಸಂತ, ಎಲೆಗಾರ್‌ ಮಂಜುನಾಥ, ವೆಂಕಟೇಶ್‌, ನಂದೀಶ್‌, ನಾಗೇಶ್‌, ರಘುವೀರ್‌, ರವಿಕಿರಣ್‌, ಬಾಷಾ ಸೇರಿದಂತೆ ನೂರಾರು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.