ಪಾಟೀಲರ ದೇಹಕ್ಕೆ ವಯಸ್ಸಾಗಿದೆ, ಮನಸಿಗಲ್ಲ

| Published : Aug 01 2024, 01:47 AM IST

ಸಾರಾಂಶ

ಎಸ್.ಆರ್.ಪಾಟೀಲ್ ಅವರ ದೇಹಕ್ಕೆ ವಯಸ್ಸಾಗಿದೆ ಹೊರತು ಮನಸ್ಸಿಗಲ್ಲ ಎಂದು ಶಿರಹಟ್ಟಿ ಜಗದ್ಗುರು ಫಕೀರೇಶ್ವರ ಭಾವೈಕ್ಯತಾ ಪೀಠದ ಫಕೀರದಿಂಗಾಲೇಶ್ವರ ಮಹಾಸ್ವಾಮಿಗಳು ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೀಳಗಿ

ಎಸ್.ಆರ್.ಪಾಟೀಲ್ ಅವರ ದೇಹಕ್ಕೆ ವಯಸ್ಸಾಗಿದೆ ಹೊರತು ಮನಸ್ಸಿಗಲ್ಲ ಎಂದು ಶಿರಹಟ್ಟಿ ಜಗದ್ಗುರು ಫಕೀರೇಶ್ವರ ಭಾವೈಕ್ಯತಾ ಪೀಠದ ಫಕೀರದಿಂಗಾಲೇಶ್ವರ ಮಹಾಸ್ವಾಮಿಗಳು ತಿಳಿಸಿದರು.

ತಾಲೂಕಿನ ಬಾಡಗಂಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಎಸ್.ಆರ್.ಪಾಟೀಲ್ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಲ್ಲಿನ ನಿಮ್ಮನ್ನು ಹೆತ್ತವರ ಮಂದಿರ ಉದ್ಘಾಟನೆ ನೆರವೇರಿಸಿ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಇನ್ನು 250 ವರ್ಷದ ಯುವಕರಂತೆ ಜನರ ಸೇವೆ ಮಾಡಲು ಹಂಬಲಿಸಿ ಗ್ರಾಮೀಣ ಭಾಗದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿರುವ ಪಾಟೀಲರ ಕೆಲಸ ಅಜರಾಮರವಾಗಿದೆ. ಕಳೆದ ಎರಡು ವರ್ಷಗಳಿಂದ ರಾಜಕೀಯ ವಿಶ್ರಾಂತಿಯಲ್ಲಿರುವ ಎಸ್‌.ಆರ್‌. ಪಾಟೀಲ ಅವರನ್ನು ಇಲ್ಲಿರುವ ಸಚಿವರು ಆದಷ್ಟು ಶೀಘ್ರದಲ್ಲಿ ರಾಜಕೀಯವಾಗಿ ಮೇಲ್ಪಂಕ್ತಿಗೆ ಕರೆದುಕೊಂಡು ಹೋಗಿ ಎಂದು ಹೇಳಿದರು.

ಶ್ರವಣಕುಮಾರನ ನಂತರ ಹೆತ್ತವರ ಮಂದಿರ ಸ್ಥಾಪಿಸಿದವರಲ್ಲಿ ಎಸ್‌.ಆರ್‌.ಪಾಟೀಲ್ ಮೊದಲಿಗರು. ಜನ್ಮಕೊಟ್ಟ ಊರು, ಹೆತ್ತ ತಂದೆ ತಾಯಿನ್ನು ದೇವರ ರೂಪದಲ್ಲಿ ಕಂಡು ಅವರ ಜೀವನವನ್ನು ಗ್ರಾಮಗಳ ಅಭಿವೃದ್ಧಿಗೆ ಮೀಸಲಾಗಿಸಿ ಮುಂದೆ ಯಾರು ಮಾಡದ ಸಾಧನೆ ಮಾಡಿದ್ದಾರೆ. ಸನ್ಯಾಸಿಯಾಗಿರುವ ನನಗೆ ಈ ಆಸ್ಪತ್ರೆಗೆ ಕೊಡಲು ಏನು ಸಾಧ್ಯವಿದೆ. ಅದಕ್ಕಾಗಿ ಪ್ರತಿವರ್ಷ ಒಂದು ಕ್ವಿಂಟಲ್ ರಕ್ತದಾನ ಮುಖಾಂತರ ಈ ಆಸ್ಪತ್ರೆಗೆ ನೀಡುತ್ತೇನೆ ಎಂದರು.

ನಂತರ ಎರೆಹೊಸಳ್ಳಿಯ ಮಹಾಯೋಗಿ ವೇಮನ ಸಂಸ್ಥಾನ ಮಠದ ವೇಮನಾನಂದ ಮಹಾಸ್ವಾಮಿಗಳು ಕೂಡಿ ಎಸ್‌.ಆರ್‌.ಪಾಟೀಲ್ ಅವರಿಗೆ ಸನ್ಮಾನಿಸಿದರು.