ಸಾರಾಂಶ
ಧಾರವಾಡ:
ನಮ್ಮ ಪರಂಪರೆ, ಸಂಸ್ಕೃತಿಗಳ ಅರಿವು ಇದ್ದಾಗ ಮಾತ್ರ ಮಕ್ಕಳಲ್ಲಿ ದೇಶ ಪ್ರೇಮ ಬೆಳೆಸಲು ಸಾಧ್ಯ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹಲವಾರು ಕಾರ್ಯಕ್ರಮ ಆಯೋಜಿಸಿದ್ದು, ಸ್ಮಾರಕಗಳ ಛಾಯಾಚಿತ್ರ ಪ್ರದರ್ಶನವೂ ಒಂದಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.ನಗರದ ಆರ್ಟ್ ಗ್ಯಾಲರಿಯಲ್ಲಿ ಕೇಂದ್ರ ಪುರಾತತ್ವ ಇಲಾಖೆ ಹಾಗೂ ಜಿಲ್ಲಾಡಳಿತ ಆಯೋಜಿಸಿರುವ ಉತ್ತರ ಕರ್ನಾಟಕ ವಾಸ್ತುಶಿಲ್ಪ ಪರಂಪರೆ ಹಾಗೂ ಸ್ಮಾರಕಗಳು ಅಂದು ಮತ್ತು ಇಂದು ಕುರಿತು ಛಾಯಾಚಿತ್ರ ಪ್ರದರ್ಶನಕ್ಕೆ ಸೋಮವಾರ ಚಾಲನೆ ನೀಡಿದ ಅವರು, ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆಯಲ್ಲಿ ರಾಷ್ಟ್ರದ ಐತಿಹಾಸಿಕ ಹೋರಾಟ ಮತ್ತು ಸಾಧನೆಗಳ ಬಗ್ಗೆ ಮಕ್ಕಳಲ್ಲಿ ಅರಿವು, ಹೆಮ್ಮೆ ಮೂಡಿಸುವುದು ನಮ್ಮ ಜವಾಬ್ದಾರಿ ಎಂದರು.
ಸ್ವಾತಂತ್ರ್ಯ ಸಂಭ್ರಮಾಚರಣೆಯಲ್ಲಿ ಜಿಲ್ಲೆಯ ಹೋರಾಟಗಾರರು ಹಾಗೂ ಹೋರಾಟಗಳ ಬಗ್ಗೆ ಬೆಳಕು ಚೆಲ್ಲುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈಗಾಗಲೇ 77 ಪಿಯು ಕಾಲೇಜುಗಳಲ್ಲಿ ಜಿಲ್ಲೆಯ ಐತಿಹಾಸಿಕತೆ ಕುರಿತು ಸರಣಿ ಉಪನ್ಯಾಸ ಸಂಘಟಿಸಲಾಗುತ್ತಿದೆ. ವಿಶ್ವವಿದ್ಯಾಲಯ ಮಟ್ಟದ ವಿಚಾರ ಸಂಕಿರಣ, ರಾಜ್ಯ ಪುರಾತತ್ವ ಇಲಾಖೆಯಿಂದ ಐತಿಹಾಸಿಕ ದಾಖಲೆಗಳ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.ಭಾರತೀಯ ಪುರಾತತ್ವ ಸರ್ವೇಕ್ಷಣ ಧಾರವಾಡ ವಲಯ ಅಧೀಕ್ಷಕ ಪುರಾತತ್ವ ಅಧಿಕಾರಿ ಡಾ. ರೇಷ್ಮಾ ಸಾವಂತ, ಉಪ ಅಧೀಕ್ಷಕ ಪುರಾತತ್ವ ಅಧಿಕಾರಿ ಶ್ರೀಗುರು ಬಾಗಿ, ಸಹಾಯಕ ಅಧೀಕ್ಷಕ ಪುರಾತತ್ವ ಅಧಿಕಾರಿ ಡಾ. ದೇವರಾಜು ಸಾರಂಗಮಠ, ಡಿಡಿಪಿಐ ಎಸ್.ಎಸ್. ಕೆಳದಿಮಠ, ಬಿಇಒ ಅಶೋಕ ಸಿಂದಗಿ, ಪ್ರಾಚಾರ್ಯ ಡಾ. ಬಸವರಾಜ ಕುರಿಯವರ, ಉಪನ್ಯಾಸಕರಾದ ಎಸ್.ಕೆ. ಪತ್ತಾರ, ಮುಖ್ಯ ಶಿಕ್ಷಕಿ ಶ್ರೀದೇವಿ ಲದ್ದಿಮಠ, ಡಾ. ಗಾಯತ್ರಿ ಜೋಶಿ, ಶಿಕ್ಷಕರಾದ ಎಂ.ಜಿ. ಹಿರೇಮಠ, ಅರ್ಜುನ ಲಮಾಣಿ ಭಾಗವಹಿಸಿದ್ದರು. ಆರ್ಟ್ ಗ್ಯಾಲರಿಯಲ್ಲಿ ಛಾಯಾಚಿತ್ರ ಪ್ರದರ್ಶನವು ಆ. 9ರ ವರೆಗೆ ನಡೆಯಲಿದ್ದು, ಮಕ್ಕಳು ವೀಕ್ಷಿಸಲು ಮುಕ್ತ ಅವಕಾಶವಿದೆ.