ಕನ್ನಡಪ್ರಭ ವಾರ್ತೆ ಆಲೂರುದೇಶ ಮತ್ತು ದೇಶಾಭಿಮಾನ ಎದೆಯೊಳಗೆ ಇದ್ದಾಗ ಮಾತ್ರ ಸ್ವಾತಂತ್ರ್ಯ ಎಂಬುದು ಪರಿಪೂರ್ಣ ಅರ್ಥ ಪಡೆಯುತ್ತದೆ. ದೇಶದ ಸರ್ವತೋಮುಖ ಬೆಳವಣಿಗೆಯಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯ ಪಾಲುಗಾರಿಕೆಯೂ ಮುಖ್ಯ ಪಾತ್ರ ವಹಿಸುತ್ತದೆ ಎಂದು ಕರವೇ ಪ್ರವೀಣ್ ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ಎಚ್.ವಿ ರಾಘವೇಂದ್ರ ತಿಳಿಸಿದರು.ಪಟ್ಟಣದ ಯಡೂರು ಕೊಡಿಗೆಯಲ್ಲಿರುವ ಎಪ್. ಎಂ ಚಿಕನ್ ಸೆಂಟರ್‌ ಮುಂಭಾಗ ಸ್ನೇಹಜೀವಿ ಚೇತನ್ ಹಾಗೂ ನವಾಜ್ ಯುವಕ ಬಳಗದವರಿಂದ ಆಯೋಜಿಸಿದ 80ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ದೇಶವು ಪ್ರಜಾಸತ್ತಾತ್ಮಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೊಳಗೊಂಡು ಬೇರೆ ಬೇರೆ ಧರ್ಮ, ಜಾತಿ, ಭಾಷೆ, ವಿಭಿನ್ನ ಸಂಸ್ಕೃತಿ ಸಂಪ್ರದಾಯ ಆಚಾರ ವಿಚಾರಗಳಿದ್ದರೂ ವಿಭಿನ್ನತೆಯಲ್ಲಿ ಏಕತೆಯನ್ನ ಸಾರುವ ನಮ್ಮ ಭಾರತೀಯರಿಗೆ ಭಾರತ ಒಂದು ಧರೆಯ ಸ್ವರ್ಗವೇ ಸರಿ. ಭಾರತೀಯರು ತಲೆ ಎತ್ತಿ, ಎದೆ ತಟ್ಟಿ ಗೌರವಿಸುತ್ತ ಆಚರಿಸುವ ಸ್ವಾಭಿಮಾನದ ಹಬ್ಬವೇ ಆಗಸ್ಟ್ 15ರ ಸ್ವಾತಂತ್ರೋತ್ಸವ. ಆದರೆ ಸ್ವಾತಂತ್ರ್ಯ ದಿನಾಚರಣೆ ಒಂದು ದಿನದ ತೋರ್ಪಡಿಕೆಯ ಕಾರ್ಯಕ್ರಮವಾಗಬಾರದು. ದೇಶ ಮತ್ತು ದೇಶಾಭಿಮಾನ ಎದೆಯೊಳಗೆ ಇದ್ದಾಗ ಮಾತ್ರ ಸ್ವಾತಂತ್ರ್ಯ ಎಂಬುದು ಪರಿಪೂರ್ಣ ಅರ್ಥ ಪಡೆಯುತ್ತದೆ. ದೇಶದ ಸರ್ವತೋಮುಖ ಬೆಳವಣಿಗೆಯಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯ ಪಾಲುಗಾರಿಕೆಯೂ ಮುಖ್ಯ ಪಾತ್ರ ವಹಿಸುತ್ತದೆ. ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ಧಾರ್ಮಿಕ, ಸಾಂವಿಧಾನಿಕ, ರಾಜಕೀಯ, ಪ್ರಾದೇಶಿಕ, ಪ್ರಾಕೃತಿಕ, ಮಾನಸಿಕ ಮನಸ್ಥಿತಿ ಮತ್ತು ದೈಹಿಕ ವ್ಯಾಪ್ತಿ ಇವೆರಡರ ಸಮ್ಮಿಲನದ ಒಟ್ಟು ಒಂದೊಳ್ಳೆ ನಾಗರಿಕನ ವ್ಯಕ್ತಿತ್ವವೇ ಸ್ವಾತಂತ್ರ್ಯ ಎಂದು ಹೇಳಿದರು.

ನಿವೃತ್ತ ಶಿಕ್ಷಕ ಎ.ಟಿ ಮಲ್ಲೇಶ್ ಮಾತನಾಡಿ, ದೇಶದ ಬಗ್ಗೆ ಎಲ್ಲಾ ವಿದ್ಯಾರ್ಥಿಗಳು ತಿಳಿದುಕೊಳ್ಳುವ ಅಗತ್ಯವಿದೆ.ಸ್ವಾತಂತ್ರ್ಯ ಹೋರಾಟದ ಜೊತೆಗೆ ದೇಶದ ಎಲ್ಲಾ ವಿಚಾರಗಳು ತಿಳಿದಿರಬೇಕು, ಅದರ ಜೊತೆಗೆ ದೇಶ ಪ್ರೇಮವನ್ನು ಬೆಳೆಸುವಂತಾಗಬೇಕು. ನಾನು ಸೈನ್ಯಕ್ಕೆ ಸೇರಿದಾಗ ಸರ್ಕಾರಿ ಕೆಲಸಕ್ಕೆ ಸೇರುತ್ತಿದ್ದೇನೆ ಎಂದು ಸೇರಿಕೊಳ್ಳಲಿಲ್ಲ ಬದಲಾಗಿ ದೇಶ ಸೇವೆ ಮಾಡಬೇಕೆಂಬ ಹೆಮ್ಮೆಯಿಂದ ಸೇರಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದೇನೆ. ದೇಶದ ಗಡಿಯಲ್ಲಿ ದಶಕಗಳ ಕಾಲ ಪ್ರಾಣದ ಹಂಗು ತೊರೆದು ಭಾರತ ಮಾತೆಯ ಸೇವೆ ಮಾಡಿರುವ ಎಲ್ಲ ನನ್ನ ಭಾರತೀಯ ಯೋಧರಿಗೆ ಗೌರವಸರ್ಪಣೆ ಮಾಡುತ್ತೇನೆ ಎಂದು ತಿಳಿಸಿದರು.

ಜಿಲ್ಲಾ ವಕ್ಫ್ ಬೋರ್ಡ್‌ ಮಾಜಿ ಸದಸ್ಯ ಕಬಿರ್ ಅಹಮದ್ ಮಾತನಾಡಿ, ಅನೇಕ ಮಹನೀಯರ ತ್ಯಾಗ, ಬಲಿದಾನದ ಫಲವಾಗಿ ನಾವೆಲ್ಲರೂ ಸ್ವಚ್ಛಂದವಾಗಿ ಬದುಕಲು ಸಾಧ್ಯವಾಗಿದೆ,ಸ್ವಾತಂತ್ರ್ಯ ಎಂಬುದು ಕೇವಲ ಒಂದು ದಿನ ಆಚರಿಸುವ ಹಬ್ಬವಲ್ಲ. ಪ್ರತಿದಿನ ಕ್ಷಣ ಕ್ಷಣವೂ ಸಂಭ್ರಮಿಸುವುದಾಗಿದೆ. ಡಾಕ್ಟರ್, ಎಂಜಿನಿಯರ್, ವಿಜ್ಞಾನಿ ಹಾಗೂ ಇನ್ನಿತರ ಉನ್ನತ ಉದ್ದೆಗಳನ್ನು ತಮ್ಮ ಮಕ್ಕಳಿಗೆ ಹರಸುವ ಪಾಲಕರು ಮಾತ್ರ ನನ್ನ ಮಗ ದೇಶ ಕಾಯುವ ಒಬ್ಬ ಸೈನಿಕನಾಗಬೇಕೆಂದು ಎಂದಿಗೂ ಬಯಸುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಇದೇ ಸಂದರ್ಭದಲ್ಲಿ ಹಲವರನ್ನು ಗೌರವಿಸಿ ಸನ್ಮಾನಿಸಲಾಯಿತು. ಉಪಹಾರದ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು.ಕಾರ್ಯಕ್ರಮದಲ್ಲಿ ಎಫ್. ಎಂ ಸ್ನೇಹಜೀವಿ ಬಳಗದ ಚೇತನ್, ನವಾಜ್, ಆರೀಫ್, ಮುಬಾರಕ್, ಎ‌ಪಿಸಿರ್ ಶಾಹಿದ್ ಸಲಿಂ, ಜಾಮಿಯ ಮಸೀದಿ ಮಾಜಿ ಅಧ್ಯಕ್ಷ ಅಬ್ದುಲ್ ವಹಿದ್, ಜಂಟಿ ಕಾರ್ಯದರ್ಶಿ ಮಹಮ್ಮದ್ ಜಾಫರ್, ಜಿಲ್ಲಾ ವಕ್ಫ್ ಮಾಜಿ ಸದಸ್ಯ ಕಬೀರ್ ಅಹಮದ್ ಸೇರಿದಂತೆ ಮುಂತಾದವರು ಹಾಜರಿದ್ದರು.