ಸಾರಾಂಶ
ಯಲ್ಲಾಪುರ: ಯಕ್ಷಗಾನ ಪರಂಪರೆಯಿಂದ ಅತ್ಯಂತ ಪ್ರಾಚೀನ ಕಲೆಯಾಗಿದ್ದು, ಕೇವಲ ಮನರಂಜನೆ ಮಾತ್ರ ನೀಡದೇ ಭೌದ್ಧಿಕ ವಿಕಾಸದ ಶಕ್ತಿ ಹೊಂದಿದೆ. ಕಲೆಯನ್ನು ಆರಾಧಿಸುವವರ ಸಂಖ್ಯೆ ಹೆಚ್ಚಾದಂತೆ ಆ ಕಲೆ ಜೀವಂತವಾಗಿ ಮುಂದಿನ ಪೀಳಿಗೆಗೆ ಪರಿಚಯಗೊಳ್ಳಲು ಸಾಧ್ಯ. ಯಕ್ಷಗಾನ ಆರಾಧನೆಯ ಕಲೆಯಾಗಿದೆ. ಯಾವುದೇ ಸಾಂಸ್ಕೃತಿಕ ಕಲೆ ಉಳಿಯಬೇಕಾದರೆ ಕಲಾಸಕ್ತರ ಪ್ರೋತ್ಸಾಹ ಬಹು ಮುಖ್ಯ ಎಂದು ಶ್ರೀಮಾತಾ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಉಮ್ಮಚಗಿಯ ಜಿ.ಎನ್. ಹೆಗಡೆ ಹಿರೇಸರ ಹೇಳಿದರು.
ಸೋಮವಾರ ಸಂಜೆ ತಾಲೂಕಿನ ಆನಗೋಡ ಗೋಪಾಲಕೃಷ್ಣ ದೇವಸ್ಥಾನದ ಸುದರ್ಶನ ಸಭಾಭವನದಲ್ಲಿ ತೆಲಂಗಾರಿನ ಕರ್ನಾಟಕ ಕಲಾ ಸನ್ನಿಧಿ ಹಮ್ಮಿಕೊಂಡಿದ್ದ ಕಲಾವಿದರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಯಕ್ಷಗಾನ ಕಲಾವಿದರ ಪರಿಚಯಾತ್ಮಕ ಬರಹಗಳ ಸಂಕಲನ ''''ದಿವ್ಯ ದೀವಟಿಗೆ'''' ಕೃತಿಯನ್ನು ಲೋಕಾರ್ಪಣೆ ಮಾಡಿದ ಧಾರವಾಡದ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ಅಧ್ಯಾಪಕ ವಿ. ವಿನಾಯಕ ಭಟ್ಟ ಶೇಡಿಮನೆ ಮಾತನಾಡಿ, ಪರಂಪರೆಯಿಂದ ಬಂದ ಯಕ್ಷಗಾನ ಕಲೆಯನ್ನು ತಮ್ಮ ಬದುಕಿನ ಭಾಗವಾಗಿ ಹಿರಿಯರು ಅನುಸರಿಸಿಕೊಂಡು ಬಂದಿದ್ದಾರೆ. ದಿವ್ಯವಾದ ಅನುಭೂತಿ ಪಡೆದು ಕಲೆಯ ಶ್ರೀಮಂತಿಕೆಗೆ ಸಾಕ್ಷಿಯಾಗಿದ್ದಾರೆ. ಅಂತಹ ಹಿರಿಯರನ್ನು ಗೌರವಿಸುವ ಮನೋಭಾವ ದೊಡ್ಡದು ಎಂದು ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಲಾ ಸನ್ನಿಧಿ ಸಂಸ್ಥೆಯ ಅಧ್ಯಕ್ಷ ದಿನೇಶ ಭಟ್ಟ ಅಬ್ಬಿತೋಟ ಮಾತನಾಡಿ, ಸಂಘಟನೆಯ ಶ್ರಮ ಸವಾಲಿನದಾದರೂ ಯಕ್ಷಗಾನ ಕಲೆಯಲ್ಲಿ ಬದುಕನ್ನು ಸವೆಸಿದ ಆನೇಕರ ಜೀವನಗಾಥೆಗಳನ್ನು ಗೌರವಿಸಿ, ಸಮಾಜಕ್ಕೆ ಪರಿಚಯಿಸುವ ಕೆಲಸದಲ್ಲಿ ನಮಗೆ ತೃಪ್ತಿ ತಂದಿದೆ. ಮುಂದಿನ ದಿನಗಳಲ್ಲಿ ನಮ್ಮ ಸಂಸ್ಥೆಯಿಂದ ಯಕ್ಷಗಾನದ ಜೊತೆಗೆ ಸಂಗೀತ, ನಾಟಕ, ನೃತ್ಯ ಕಲೆಗಳ ಸಾಧಕರ ಪರಿಚಯಿಸುವ ಇರಾದೆ ಇದೆ. ನಮ್ಮ ಸಂಘಟನೆಯನ್ನು ವಿಸ್ತಾರಗೊಳಿಸಿ ಎಲೆಮರೆಯ ಪ್ರತಿಭೆಗಳನ್ನು ಗೌರವಿಸುವ ಸಂಕಲ್ಪ ಇದೆ. ನಮ್ಮ ಶ್ರಮಕ್ಕೆ ಎಲ್ಲರೂ ಕೈ ಜೋಡಿಸುವಂತಾಗಬೇಕು ಎಂದರು.ಟಿ.ಎಂ.ಎಸ್. ನಿರ್ದೇಶಕ ವೆಂಕಟ್ರಮಣ ಭಟ್ಟ ಕಿರಕುಂಭತ್ತಿ, ಆನಗೋಡ ಗ್ರಾಪಂ ಅಧ್ಯಕ್ಷೆ ಮೀನಾಕ್ಷಿ ಭಟ್ಟ, ಸುದರ್ಶನ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಗಣಪತಿ ಮಾನಿಗದ್ದೆ ಉಪಸ್ಥಿತರಿದ್ದರು.
ಬರಹಗಾರ ದತ್ತಾತ್ರಯ ಭಟ್ಟ ಕಣ್ಣಿಪಾಲ ದಿವ್ಯ ದೀವಟಿಗೆ ಪುಸ್ತಕದ ಪರಿಚಯಿಸಿದರು. ನಲವತ್ತೈದಕ್ಕೂ ಹೆಚ್ಚು ಕಲಾವಿದರನ್ನು ವೇದಿಕೆಗೆ ಕರೆಸಿ, ಗೌರವಿಸಲಾಯಿತು. ಗೌರವ ಸ್ವೀಕರಿಸಿ ಮಾತನಾಡಿದ ಕಲಾವಿದರಾದ ಸಿ.ಜಿ ಹೆಗಡೆ, ಗೋಪಾಲ ಹೆಗಡೆ ಚಾವಡಿಯವರು ಸಂಸ್ಥೆಯ ಇಂತಹ ಕಾರ್ಯಕ್ರಮಗಳಿಗೆ ಕಲಾವಿದರಾದ ನಾವು ಸದಾಕಾಲ ಬೆನ್ನೆಲುಬಾಗಿ ನಿಲ್ಲುತ್ತೇವೆ. ಕಲಾವಿದರ ಕುರಿತಾದ ಇಂತಹ ಕಾರ್ಯಕ್ರಮ ಶ್ಲಾಘನೀಯವಾದದ್ದು ಎಂದರು.ಯಕ್ಷಗಾನ ಕ್ಷೇತ್ರದಲ್ಲಿನ ಸಾಧನೆಯ ಬಾಲ ಪ್ರತಿಭೆ ಶ್ರೀವತ್ಸ ಗುಡ್ಡೆ ದಿಂಬರವರಿಗೆ ಪ್ರಸಕ್ತ ಸಾಲಿನ ಕಲಾ ಸನ್ನಿಧಿ ಪುರಸ್ಕಾರ ನೀಡಿ ಗೌರವಿಸಲಾಯಿತು. ಕರ್ನಾಟಕ ಕಲಾ ಸನ್ನಿಧಿ ಅಧ್ಯಕ್ಷ ಶ್ರೀಧರ ಅಣಲಗಾರ ಪ್ರಾಸ್ತಾವಿಕ ಮಾತನಾಡಿದರು. ದಿನೇಶ ಗೌಡ ನಿರ್ವಹಿಸಿದರು. ಪ್ರಧಾನ ಕಾರ್ಯದರ್ಶಿ ದೀಪಕ ಭಟ್ಟ ಕುಂಕಿ ವಂದಿಸಿದರು. ನಂತರ ಯಕ್ಷಗಾನದ ಯುವ ಕಲಾವಿದರಿಂದ ''''ಗಾನ ಸಂಜೆ'''' ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.