ದೊಡ್ಡಬಳ್ಳಾಪುರ ರೆಸಾರ್ಟ್‌ನಲ್ಲಿ ಪತ್ತೆಯಾದ್ರಾ ಪಪಂ ಸದಸ್ಯ?

| Published : Sep 02 2024, 02:01 AM IST

ದೊಡ್ಡಬಳ್ಳಾಪುರ ರೆಸಾರ್ಟ್‌ನಲ್ಲಿ ಪತ್ತೆಯಾದ್ರಾ ಪಪಂ ಸದಸ್ಯ?
Share this Article
  • FB
  • TW
  • Linkdin
  • Email

ಸಾರಾಂಶ

ಅಪಹರಣಕ್ಕೊಳಗಾದ ಚನ್ನಮ್ಮನ ಕಿತ್ತೂರು ಪಟ್ಟಣ ಪಂಚಾಯತಿ ಬಿಜೆಪಿ ಸದಸ್ಯ ನಾಗರಾಜ ಅಸುಂಡಿ ಹಾಗೂ ಅಪಹರಣ ಮಾಡಿದ ವ್ಯಕ್ತಿಗಳು ಬೆಂಗಳೂರಿನ ದೊಡ್ಡಬಳ್ಳಾಪುರ ರೆಸಾರ್ಟ್‌ ಬಳಿ ಕಾಣಿಸಿಕೊಂಡಿದೆ.

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರ

ಅಪಹರಣಕ್ಕೊಳಗಾದ ಕಿತ್ತೂರು ಪಟ್ಟಣ ಪಂಚಾಯತಿ ಬಿಜೆಪಿ ಸದಸ್ಯ ನಾಗರಾಜ ಅಸುಂಡಿ ಹಾಗೂ ಅಪಹರಣ ಮಾಡಿದ ವ್ಯಕ್ತಿಗಳು ಬೆಂಗಳೂರಿನ ದೊಡ್ಡಬಳ್ಳಾಪುರ ರೆಸಾರ್ಟ್‌ನಲ್ಲಿದ್ದು, ಕೃತ್ಯಕ್ಕೆ ಬಳಸಿದ ವಾಹನ ಕೂಡ ಅದೇ ರೆಸಾರ್ಟ್‌ ಆವರಣದಲ್ಲಿದೆ ಎಂದು ಬಿಜೆಪಿ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ, ಪೊಲೀಸರಿಗೆ ಪತ್ತೆಯಾಗದಿರುವುದು ಅಚ್ಚರಿ ತಂದಿದೆ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಂಡೆ ಆರೋಪಿಸಿದ್ದಾರೆ.

ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪೊಲೀಸರೊಂದಿಗೆ ಮಾತನಾಡಿದ ಅವರು, ನಮ್ಮ ಸದಸ್ಯ ಆ ರೆಸಾರ್ಟ್‌ ಬಳಿ ಇರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆದರೂ ಪತ್ತೆ ಆಗದಿರುವುದು ಆಡಳಿತ ವ್ಯವಸ್ಥೆಯ ವೈಫಲ್ಯವನ್ನು ಎತ್ತಿ ತೋರುತ್ತಿದೆ ಎಂದು ದೂರಿದರು.

ಬಿಜೆಪಿ ಮಂಡಳ ಅಧ್ಯಕ್ಷ ಬಸವರಾಜ ಪರವಣ್ಣವರ ಮಾತನಾಡಿ, ನಮ್ಮ ಸದಸ್ಯನನ್ನು ಅಪಹರಿಸಿದ್ದಾರೆ. ಇದುವರೆಗೆ ಪತ್ತೆಯಾಗಿಲ್ಲ. ಅವರ ಕುಟುಂಬ ಬಹಳ ಆತಂಕದಲ್ಲಿದೆ. ಅವರ ತಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೇಗನೆ ಹುಡುಕುವ ಕೆಲಸ ಮಾಡಬೇಕು. ಚುನಾವಣೆ ಮುಂದೂಡಲು ಮನವಿ ಸಲ್ಲಿಸಿದರೂ ಕ್ರಮ ಜರುಗಿಸುತ್ತಿಲ್ಲ. ಇದನ್ನು ಖಂಡಿಸಿ ಸೋಮವಾರ ತಹಸೀಲ್ದಾರ ಕಚೇರಿಯ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಕಿತ್ತೂರು ಸಿಪಿಐ ಶಿವಾನಂದ ಗುಡಗನಟ್ಟಿ ಮಾತನಾಡಿ, ಪೊಲೀಸ್ ಇಲಾಖೆಯಿಂದ ಅಪಹರಣಗೊಂಡ ಸದಸ್ಯನನ್ನು ಹುಡುಕಲು ಎಲ್ಲ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಶ್ರೀಕರ ಕುಲಕರ್ಣಿ, ನಿಂಗನಗೌಡ ದೊಡ್ಡಗೌಡರ, ಸಕ್ಕರಗೌಡ ಪಾಟೀಲ, ಮಲ್ಲಿಕಾರ್ಜುನ ಉಳ್ಳಾಗಡ್ಡಿ, ರವಿರಾಜ ಇನಾಮದಾರ, ಸುರೇಶ ಪತ್ತಾರ, ಶಿವಾನಂದ ಹನಮಸಾಗರ, ಬಸವರಾಜ ಮಾತನವರ, ಮಂಜುನಾಥ ದೊಡಮನಿ ಇತರರು ಇದ್ದರು.