ಸಾರಾಂಶ
ಧಾರವಾಡ:
ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಜೀವನದ ಎಲ್ಲ ಸಮಸ್ಯೆಗಳನ್ನು ನಗುಮುಖದಿಂದ ಗೆದ್ದ ಓರ್ವ ಸೃಜನಶೀಲ ಬರಹಗಾರರು. ವೃತ್ತಿಯಿಂದ ನಿವೃತ್ತರಾದರೂ ಅವರ ಬರವಣಿಗೆಗಳಿಗೆ ಇಂದಿಗೂ ವಿಶ್ರಾಂತಿ ಇಲ್ಲ ಎಂದು ಸಹಾಯಕ ಕೃಷಿ ನಿರ್ದೇಶಕ, ಸಾಹಿತಿ ಡಾ. ಚನ್ನಪ್ಪ ಅಂಗಡಿ ಹೇಳಿದರು.ಕರ್ನಾಟಕ ವಿದ್ಯಾವರ್ಧಕ ಸಂಘವು ರಾಜ್ಯೋತ್ಸವ ನಿಮಿತ್ತ ಆಯೋಜಿಸಿದ್ದ ‘ಧರೆಗೆ ದೊಡ್ಡವರು’ ಕಾರ್ಯಕ್ರಮದಲ್ಲಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಬದುಕು ಕುರಿತು ಮಾತನಾಡಿದರು. ಸಿದ್ಧಲಿಂಗ ಪಟ್ಟಣಶೆಟ್ಟಿ ಮಾತೃ ಹೃದಯಿಗಳು. ನಗುಮೊಗವೇ ಅವರ ಸಾಹಿತ್ಯದ ಜೀವಾಳ. ತಮ್ಮ ಹದಿನೆಂಟನೇ ವಯಸ್ಸಿನಲ್ಲಿಯೇ ದಿನಚರಿ ಬರೆದಿಡುವ ಪರಿಪಾಠವನ್ನು ಬೆಳೆಸಿಕೊಂಡು ಬಂದ ಅಪರೂಪದ ಸಾಹಿತಿಗಳು. ಅವರು ಬರೆದ ‘ಗಿರಿಜೆವ್ವನ ಮಗ’ ಕೃತಿಯಲ್ಲಿ ಜೀವನದ ಸಮಗ್ರ ವ್ಯಕ್ತಿತ್ವದ ಚಿತ್ರಣವೇ ಇದೆ ಎಂದರು.
ಬೆಂಗಳೂರಿನ ದೇವು ಪತ್ತಾರ ‘ಸಿದ್ಧಲಿಂಗ ಪಟ್ಟಣಶೆಟ್ಟಿ’ ಕುರಿತು ಮಾತನಾಡಿ, ಪಟ್ಟಣಶೆಟ್ಟಿ ಅವರ ಕೃತಿಗಳನ್ನು ಓದುವುದು ಮತ್ತು ಆಲಿಸುವುದೇ ಒಂದು ಸೌಭಾಗ್ಯ. ಭಾವಜೀವಿಗಳಾದ ಅವರ ಕೃತಿಗಳಲ್ಲಿ ವೈಚಾರಿಕ ಚಿಂತನೆಗಳಿವೆ. ಹಿಂದಿ ಭಾಷೆ ಕಲಿತು ಪ್ರಾಧ್ಯಾಪಕರಾದರು ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಅವರಿಗಿದ್ದ ಪ್ರಬುದ್ಧತೆ ದೊಡ್ಡದು. ಅವರ ಸಾಹಿತ್ಯದ ಮೂಲ ಸೆಲೆಯೇ ಪ್ರೀತಿ. ಅವರ ಸಾಹಿತ್ಯವನ್ನು ಓದಿದ ಕನ್ನಡಿಗರೇ ಇಲ್ಲ. ಒರಟಿಲ್ಲದ ಗುಣ ಅವರ ವ್ಯಕ್ತಿತ್ವದ ಇನ್ನೊಂದು ಮುಖವಾಗಿದೆ. ಅವರು 12 ಕಾವ್ಯ, ನಾಲ್ಕು ವಿಮರ್ಶೆ, ಜೀವನ ಚರಿತ್ರೆಯನ್ನು ಬರೆದರಲ್ಲದೆ ‘ಚಹಾದ ಜೊತೆ ಚೂಡಾ’ ಅಂಕಣವನ್ನು ಬರೆದರು. ಶ್ರೇಷ್ಠ ನಾಟಕಕಾರರಾದಂಥ ಅವರು ನಾಲ್ಕು ನಾಟಕಗಳನ್ನು ಅನುವಾದಗೊಳಿಸಿದ್ದಾರೆ ಎಂದು ಹೇಳಿದರು.ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿಯವರು ಧರೆಗೆ ದೊಡ್ಡವರಾಗಿ ಸನ್ಮಾನ ಸ್ವೀಕರಿಸಿ, ಸಾಹಿತ್ಯದ ಮಾತುಗಳನ್ನು ಆಲಿಸಲು ಬಂದ ವಿದ್ಯಾರ್ಥಿಗಳಾದ ನೀವು ನಿಜವಾಗಿಯೂ ಧರೆಗೆ ದೊಡ್ಡವರು. ವಿದ್ಯಾರ್ಥಿಗಳು ಭವಿಷ್ಯದಲ್ಲಿ ದೊಡ್ಡವರಾಗುವ ದೊಡ್ಡ ಗುಣಗಳನ್ನು ಬೆಳೆಸಿಕೊಳ್ಳಬೇಕು. ಪ್ರಶ್ನೆ ಕೇಳುವ ಮನೋಭಾವ ವಿದ್ಯಾರ್ಥಿಗಳಲ್ಲಿ ಬೆಳೆದು ಬರಬೇಕು. ಇದು ನಿಮ್ಮ ತಾರ್ಕಿಕ ಶಕ್ತಿ ಹೆಚ್ಚಿಸುತ್ತದೆ. ಜತೆಗೆ ಜ್ಞಾನದ ಕ್ಷಿತಿಜವನ್ನು ವಿಸ್ತರಿಸುತ್ತದೆ. ವಿದ್ಯಾರ್ಥಿಗಳಿಗೆ ಅಭಿವ್ಯಕ್ತತೆ ಅನ್ನುವುದು ಮುಖ್ಯ. ಪ್ರಾಥಮಿಕ ಶಾಲೆಯಲ್ಲಿ ತಮಗೆ ಕನ್ನಡ ಕಲಿಸಿದ ವಿದ್ಯಾ ಗುರುಗಳನ್ನು ಸ್ಮರಿಸಿಕೊಂಡರು. ಓರ್ವ ಕನ್ನಡಿಗನಾಗಿ ನಾನು ಹಿಂದಿ ಭಾಷಿಕರಿಗಿಂತಲೂ ಹೆಚ್ಚು ಪ್ರಬುದ್ಧತೆಯನ್ನು ಸಾಧಿಸಿದ್ದು ನನ್ನ ಸುದೈವ ಎಂದರು.ಮರಾಠಾ ವಿದ್ಯಾ ಪ್ರಸಾರಕ ಮಂಡಳಿಯ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದರು. ಹರ್ಲಾಪುರದ ಸಿವೈಸಿಡಿ ಕಲಾವಿದರು ಕನ್ನಡ ಗೀತೆ, ಜಾಗೃತ ಗೀತೆಗಳನ್ನು ಪ್ರಸ್ತುತಪಡಿಸಿದರು. ಶಂಕರ ಕುಂಬಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕ ಮಾತನಾಡಿದರು. ವೀರಣ್ಣ ಒಡ್ಡೀನ ನಿರೂಪಿಸಿದರು.