ಹೊರ ಗುತ್ತಿಗೆ ನೌಕರರನ್ನು ಸರ್ಕಾರ ನೇರ ನೇಮಕಾತಿ ಮಾಡಿಕೊಳ್ಳಲಿ: ಪಾವಗಡ ಶ್ರೀರಾಮ್ ಆಗ್ರಹ

| Published : May 19 2025, 12:07 AM IST

ಹೊರ ಗುತ್ತಿಗೆ ನೌಕರರನ್ನು ಸರ್ಕಾರ ನೇರ ನೇಮಕಾತಿ ಮಾಡಿಕೊಳ್ಳಲಿ: ಪಾವಗಡ ಶ್ರೀರಾಮ್ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಹಲವು ಸಮಾವೇಶಗಳ ಮೂಲಕ ಸರ್ಕಾರದ ಗಮನಕ್ಕೆ ತರಲಾಗುತ್ತಿದೆಯಾದರೂ, ಹೊಸದಾಗಿ ಬಂದ ಸರ್ಕಾರಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಬಗೆಹರಿಸುವಲ್ಲಿ ವಿಫಲವಾಗಿವೆ. ಈಗಲಾದರೂ ಸಿಎಂ ಸಿದ್ದರಾಮಯ್ಯನವರು ಗಮನ ಹರಿಸಿ ನೀರು ಸರಬರಾಜು ನೌಕರರ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ನೀರು ಸರಬರಾಜು ಕೇಂದ್ರಗಳಲ್ಲಿ ಕೆಲಸ ಮಾಡುವ ಹೊರ ಗುತ್ತಿಗೆ ನೌಕರರನ್ನು ಸರ್ಕಾರ ನೇರ ನೇಮಕಾತಿ ಮಾಡಿಕೊಳ್ಳಬೇಕು ಎಂದು ರಾಜ್ಯ ನೀರು ಸರಬರಾಜು ನೌಕರರ ಸಂಘದ ರಾಜ್ಯಾಧ್ಯಕ್ಷ ಪಾವಗಡ ಶ್ರೀರಾಮ್ ಆಗ್ರಹಿಸಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ನೀರು ಸರಬರಾಜು ನೌಕರರ ಸಂಘದ ರಾಜ್ಯ ಸಮಯೋಚನ ಸಭೆಯಲ್ಲಿ ಮಾತನಾಡಿ, ರಾಜ್ಯದ ಮಹಾನಗರ ಪಾಲಿಕೆ, ಬಿಬಿಎಂಪಿ, ನಗರಸಭ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಹೊರ ಗುತ್ತಿಗೆಯ ಆಧಾರದಲ್ಲಿ ಸುಮಾರು 25 ವರ್ಷಗಳಿಂದ ನೀರು ಸರಬರಾಜು ಮಾಡುತ್ತಿರುವ ನೌಕರರು , ರಾಜ್ಯದಲ್ಲಿ ಸುಮಾರು 6 ಸಾವಿರಕ್ಕೂ ಹೆಚ್ಚು ಮಂದಿ ಹೊರಗುತ್ತಿಗೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.

ಈ ಹಿಂದೆ ಬಂದ ಎಲ್ಲಾ ಸರ್ಕಾರಗಳು ಹೊರ ಗುತ್ತಿಗೆ ನೌಕರರನ್ನು ಕಡೆಗಣಿಸಿವೆ. ಪೌರ ಕಾರ್ಮಿಕರಂತೆ ನೇರ ನೇಮಕಾತಿ ಮಾಡಿಕೊಳ್ಳದೆ ಮೀನಮೇಷ ಎಣಿಸಿವೆ. ನೇರ ವೇತನವನ್ನೂ ಸಹ ನೀಡದೆ ನೀರು ಸರಬರಾಜು ನೌಕರರಿಗೆ ಸರ್ಕಾರಗಳು ಸ್ಪಂದನೆ ಮಾಡಿಲ್ಲ ಎಂದು ದೂರಿದರು.

ನೌಕರರ ಜೀವನ ಅಧೋಗತಿಗೆ ಹೋಗುತ್ತಿದೆ. ದುಡಿದರೂ ನೇರವಾಗಿ ವೇತನವಿಲ್ಲದೆ, ಇತ್ತ ನೇರ ನೇಮಕಾತಿ ಇಲ್ಲದೆ ದುಡಿದು ಮುಪ್ಪಿನಂತಾಗುತ್ತಿದ್ದೇವೆ. ಹೆಂಡತಿ- ಮಕ್ಕಳ , ಶಾಲಾ, ಜೀವನ ಭವಿಷ್ಯಕ್ಕೆ ಸರ್ಕಾರದ ಯಾವುದೇ ನಿಧಿಗಳಿಲ್ಲದಂತಾಗಿದೆ ಎಂದು ಕಿಡಿಕಾರಿದರು.

ಹಲವು ಸಮಾವೇಶಗಳ ಮೂಲಕ ಸರ್ಕಾರದ ಗಮನಕ್ಕೆ ತರಲಾಗುತ್ತಿದೆಯಾದರೂ, ಹೊಸದಾಗಿ ಬಂದ ಸರ್ಕಾರಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಬಗೆಹರಿಸುವಲ್ಲಿ ವಿಫಲವಾಗಿವೆ. ಈಗಲಾದರೂ ಸಿಎಂ ಸಿದ್ದರಾಮಯ್ಯನವರು ಗಮನ ಹರಿಸಿ ನೀರು ಸರಬರಾಜು ನೌಕರರ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಇನ್ನು ಹಲವು ಬೇಡಿಕೆಗಳ ಈಡೇರಿಸದಿದ್ದರೆ ವಿಧಾನಸೌಧದ ಮುಂಭಾಗದಲ್ಲಿ ಸರ್ಕಾರದ ವಿರುದ್ಧ ಮುಷ್ಕರ ನಡೆಸಬೇಕಾಗುತ್ತದೆ ಎಂದು ಸಭೆಯಲ್ಲಿ ಒಕ್ಕೊರಲಿನ ಕೂಗಿನಿಂದ ಎಚ್ಚರಿಸಿದರು. ಇದೇ ವೇಳೆ ಹಲವು ಮುಖಂಡರು ಮಾತನಾಡಿ, ಒಗ್ಗಟ್ಟಿನ ಬಲದೊಂದಿಗೆ ಇದೇ ಹೋರಾಟವನ್ನು ಮುಂದುವರಿಸಲಾಗುವುದು ಎಂದು ಪ್ರತಿಜ್ಞೆ ಮಾಡಿದರು.

ಸಭೆಯಲ್ಲಿ ಮಂಗಳೂರು, ಮಂಡ್ಯ , ಮೈಸೂರು, ಕೊಡಗು ಚಾಮರಾಜ ನಗರ, ಹಾಸನ, ತುಮಕೂರು, ರಾಮನಗರ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಂದ ನೂರಾರು ಹೊರ ಗುತ್ತಿಗೆ ನೀರು ಸರಬರಾಜು ನೌಕರರು ಆಗಮಿಸಿದ್ದರು.