ಪಾವಗಡ: ವಿವಿಧ ಬೇಡಿಕೆಘಲ ಈಡೇರಿಕೆಗಾಗಿ ಸಿಐಟಿಯು ಪ್ರತಿಭಟನೆ

| Published : Feb 17 2024, 01:17 AM IST

ಪಾವಗಡ: ವಿವಿಧ ಬೇಡಿಕೆಘಲ ಈಡೇರಿಕೆಗಾಗಿ ಸಿಐಟಿಯು ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಅಗತ್ಯ ವಸ್ತುಗಳ ಬೆಲೆ ಏರಿಕೆ, ದುಡಿಯುವ ಜನರ ಮೇಲಿನ ಶೋಷಣೆಯನ್ನು ತಪ್ಪಿಸುವುದು, ನಿರುದ್ಯೋಗಿ ಯುವಕರಿಗೆ ಉದ್ಯೋಗ ಸೃಷ್ಟಿಗೆ ಒತ್ತಾಯಿಸಿ ಸಿಐಟಿಯು ವತಿಯಿಂದ ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಪಾವಗಡ

ಅಗತ್ಯ ವಸ್ತುಗಳ ಬೆಲೆ ಏರಿಕೆ, ದುಡಿಯುವ ಜನರ ಮೇಲಿನ ಶೋಷಣೆಯನ್ನು ತಪ್ಪಿಸುವುದು, ನಿರುದ್ಯೋಗಿ ಯುವಕರಿಗೆ ಉದ್ಯೋಗ ಸೃಷ್ಟಿಗೆ ಒತ್ತಾಯಿಸಿ ಸಿಐಟಿಯು ವತಿಯಿಂದ ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನ ವಿರೋಧಿ ನೀತಿ ವಿರುದ್ಧ ಸಿಡಿದೆದ್ದ ನೂರಾರು ಸಂಖ್ಯೆಯ ಸಿಐಟಿಯು ಕಾರ್ಯಕರ್ತರು ಸರ್ಕಾರ ಧೋರಣೆಯನ್ನು ಖಂಡಿಸಿದರು. ಬೆಳಿಗ್ಗೆ 11ಗಂಟೆಗೆ ಪಟ್ಟಣದ ನಿರೀಕ್ಷಣಾ ಮಂದಿರದಿಂದ ಬಳ್ಳಾರಿ ರಸ್ತೆ ಮೂಲಕ ಜಾಥ ತೆರಳಿ ಶನಿಮಹಾತ್ಮ ವೃತ್ತದ ಬಳಿ ಮಾನವ ಸರಪಳಿಯನ್ನು ನಿರ್ಮಿಸಿ ಸರ್ಕಾರಗಳ ವಿರುದ್ಧ ಘೋಷಣೆ ಮೊಳಗಿಸಿದರು.

ಬಳಿಕ ಅಲ್ಲಿಂದ ವಾಪಸ್ಸಾಗಿ ತಹಸಿಲ್ದಾರ್‌ ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ನಡೆಸಿದರು.

ಇದೇ ವೇಳೆ ಅಂಗನವಾಡಿ ಕಾರ್ಯಕರ್ತರ ಸಂಘದ ತಾಲೂಕು ಅಧ್ಯಕ್ಷ ಸುಶೀಲಮ್ಮ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಎಲ್ಲ ತಾಲೂಕುಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 2018ರಲ್ಲಿ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿರುವಂತಹ ಆಶ್ವಾಸನೆ ಇದುವರೆಗೂ ಈಡೇರಿಸಿಲ್ಲ. ಇದರಿಂದ ಕೆಳಹಂತದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು, ಹಮಾಲಿ ಕಾರ್ಮಿಕರು, ಬಿಸಿಯೂಟ ನೌಕರರಿಗೆ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ. ಕಾರ್ಮಿಕರು ಹೋರಾಟ ಮಾಡುವಂತಹ ಹಕ್ಕನ್ನು ಸಹ ಕೇಂದ್ರ ಸರ್ಕಾರ ಕಿತ್ತುಕೊಂಡಿದೆ. ಕೇಂದ್ರ ಸರ್ಕಾರ ಎಲೆಕ್ಷನ್ ಸಮಯದಲ್ಲಿ ಗಿಮಿಕ್ ಮಾಡುತ್ತದೆ. ರೈತರು ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿದ್ದು, ಸರ್ಕಾರ ಅವರ ಬಗ್ಗೆ ಗಮನ ಹರಿಸುತ್ತಿಲ್ಲ. ಇದೇ ರೀತಿ ಎಪಿಎಂಸಿಯಲ್ಲಿ ಇರುವ ಹಮಾಲಿಗಳಿಗೆ ಕೆಲಸವಿಲ್ಲ. ಅವರಿಗೆ ತಮ್ಮ ಕಲ್ಯಾಣ ನಿಧಿಯಲ್ಲಿ ಇರುವಂತಹ ಹಣ ಹಾಗೂ ವಿಶೇಷ ಯೋಜನೆಗಳನ್ನು ರೂಪಿಸಿ ಫಲಾನುಭವಿಗಳಿಗೆ ಕಲ್ಯಾಣ ನಿಧಿ ದೊರಕಿಸುವಂತೆ ಸರ್ಕಾರ ಕ್ರಮ ವಹಿಸಬೇಕು ಎಂದರು.

ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟಕ್ಕೆ ಸಜ್ಜಾಗುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ರೈತ ಸಂಘದ ಅಧ್ಯಕ್ಷ ಪೂಜಾರಪ್ಪ ಮಾತನಾಡಿದ್ದು, ಅಂಗನವಾಡಿ ಕಾರ್ಯಕರ್ತೆಯರಾದ ಕೋಟಗುಡ್ಡ ಅಂಜಿನಮ್ಮ, ಶಿವಗಂಗಮ್ಮ ಇತರರು ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.

ಸಮಾಜ ಸೇವಕ ಕಿರ್ಲಾಲಹಳ್ಳಿ ಈರಣ್ಣ, ಸಿಐಟಿಯು ಕಾರ್ಯದರ್ಶಿ ಶಿವಗಂಗಮ್ಮ, ಕಾರ್ಮಿಕ ಸಂಘಟನೆಯ ರಾಮಕೃಷ್ಣ, ರಾಮಾಂಜಿನಪ್ಪ, ನಾಗರಾಜಪ್ಪ ಹಾಗೂ ಇತರೆ ಆನೇಕ ಮಂದಿ ಅಂಗನವಾಡಿ, ಹಮಾಲಿ ಹಾಗೂ ಇತರೆ ಕಾರ್ಮಿಕ ಸಂಘಟನೆಗಳ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.