ಸಾರಾಂಶ
ತಮ್ಮ ಅಧಿಕಾರದ ಅವಧಿಯಲ್ಲಿ ಗ್ರಾಪಂ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ಜತೆಗೆ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ಪಡೆದುಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಬರುವ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಗ್ರಾಮಗಳಿಗೆ ಸೌಲಭ್ಯ ಕಲ್ಪಿಸಲು ಹೆಚ್ಚಿನ ಒತ್ತು ನೀಡಲಾಗುವುದು.
ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ಕೊಪ್ಪ ಹೋಬಳಿಯ ಅಬಲವಾಡಿ ಗ್ರಾಮ ಪಂಚಾಯ್ತಿ ನೂತನ ಅಧ್ಯಕ್ಷೆಯಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಪವಿತ್ರ ಪ್ರಶಾಂತ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಹಿಂದಿನ ಅಧ್ಯಕ್ಷೆ ಪುಷ್ಪ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದು ಪವಿತ್ರರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ, ತಾಪಂ ಇಒ ರಾಮಲಿಂಗಯ್ಯ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.
ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಪವಿತ್ರ ಪ್ರಶಾಂತ್ ಅವರನ್ನು ಗ್ರಾಪಂ ಸದಸ್ಯರು ಹಾಗೂ ಸ್ಥಳೀಯ ಮುಖಂಡರು ಅಭಿನಂದಿಸಿ ಗೌರವಿಸಿದರಲ್ಲದೆ ಕಾರ್ಯಕರ್ತರು ಪಟಾಕಿ ಸಿಡಿಸಿ ಸಹಿ ವಿತರಿಸಿ ಸಂಭ್ರಮಿಸಿದರು.ಅಭಿನಂದನೆ ಸ್ವೀಕರಿಸಿದ ನೂತನ ಅಧ್ಯಕ್ಷೆ ಪವಿತ್ರ ಮಾತನಾಡಿ, ತಮನ್ನು ಅಧ್ಯಕ್ಷರನ್ನಾಗಿಸಲು ಪಕ್ಷಾತೀತವಾಗಿ ಶ್ರಮಿಸಿದ ನಾಯಕರು, ಸ್ಥಳೀಯ ಮುಖಂಡರು ಹಾಗೂ ಗ್ರಾಪಂ ಸದಸ್ಯರಿ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ತಮ್ಮ ಅಧಿಕಾರದ ಅವಧಿಯಲ್ಲಿ ಗ್ರಾಪಂ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ಜತೆಗೆ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ಪಡೆದುಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಬರುವ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಗ್ರಾಮಗಳಿಗೆ ಸೌಲಭ್ಯ ಕಲ್ಪಿಸಲು ಹೆಚ್ಚಿನ ಒತ್ತು ನೀಡಲಾಗುವುದೆಂದರು.ನರೇಗಾ ಯೋಜನೆಯಡಿ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಸಾಕಷ್ಟು ಯೋಜನೆಗಳಿವೆ. ಈ ಸಂಬಂಧ ಅಧಿಕಾರಿಗಳೊಟ್ಟಿಗೆ ಚರ್ಚಿಸಿ ಗ್ರಾಮದಲ್ಲಿ ನೆನೆಗುದಿಗೆ ಬಿದ್ದಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಜತೆಗೆ ಜನಸ್ನೇಹಿ ಗ್ರಾಪಂ ಆಗಿಸಲು ಶ್ರಮಿಸುವುದಾಗಿ ತಿಳಿಸಿದರು.
ಈ ವೇಳೆ ಗ್ರಾಪಂ ಸದಸ್ಯರಾದ ಅಬಲವಾಡಿ ಸುರೇಶ್, ಸತೀಶ್, ದೇವರಾಜು, ಸತ್ಯವತಿ, ಪುಷ್ಪಲತಾ, ತಿಮ್ಮೇಶ್, ಅನ್ನಪೂರ್ಣ, ನರಸಿಂಹಚಾರ್, ರಂಜಿತ ಮುಖಂಡರಾದ ರವೀಂದ್ರ, ವೀರಣ್ಣ, ಅರುಣ್, ನಾಗರಾಜ್, ನಾಗೇಶ್ ಇದ್ದರು.