ಕೊಪ್ಪಳ: ಮಾನಸಿಕ ಆರೋಗ್ಯ ಮತ್ತು ದೈಹಿಕ ಆರೋಗ್ಯ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ವಸತಿ ನಿಲಯಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಕಡೆ ಗಮನ ಹರಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಲಿಂಗರಾಜು ಟಿ. ಹೇಳಿದರು.

ಜಿಲ್ಲಾಡಳಿತದಿಂದ ಜಿಪಂ ಜಿ.ಎಚ್ ಪಟೇಲ್ ಸಭಾಂಗಣದಲ್ಲಿ ವಸತಿನಿಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ವಸತಿನಿಲಯ ಪಾಲಕರಿಗೆ ಹಮ್ಮಿಕೊಂಡಿದ್ದ ಮಾನಸಿಕ ಆರೋಗ್ಯ ಹಾಗೂ ಮಾದಕ ವಸ್ತುಗಳ ವ್ಯಸನ ಕುರಿತಾದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‎ವಸತಿ ನಿಲಯಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಕಡೆ ಗಮನ ಹರಿಸಬೇಕು. ಹದಿ-ಹರೆಯದ ಮಕ್ಕಳಲ್ಲಿ ಏನಾದರೂ ಮಾನಸಿಕ ಸಮಸ್ಯೆ ಇದ್ದರೆ ತಮ್ಮ ಸಮೀಪದ ತಾಲೂಕು ಅಥವಾ ಜಿಲ್ಲಾಸ್ಪತ್ರೆಗಳಲ್ಲಿ ಇರುವ ಇತರ ಎಲ್ಲ ಕಾಯಿಲೆಗಳಂತೆ, ಮಾನಸಿಕ ಕಾಯಿಲೆ ಗುಣಪಡಿಸಬಹುದು. ಸೂಕ್ತ ಸಮಯದಲ್ಲಿ ರೋಗಲಕ್ಷಣ ಗುರುತಿಸಿ, ಆಪ್ತ ಸಮಾಲೋಚನೆ ಹಾಗೂ ಚಿಕಿತ್ಸೆ ಪಡೆದರೆ ಆ ವ್ಯಕ್ತಿಯು ಇತರರಂತೆ ಜೀವನ ನಡೆಸಬಹುದು. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ಸಾರ್ವಜನಿಕ ಆಸ್ಪತ್ರೆಗಳಲ್ಲಿಯೂ ಸಹ ಪ್ರಾಥಮಿಕ ಹಂತಗಳಲ್ಲಿ ಮಾನಸಿಕ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಸಿದರು.

‎ಕಿಮ್ಸ್ ಎಚ್‌ಓಡಿ ಹಾಗೂ ಮನೋವೈದ್ಯ ಡಾ. ರವಿಕುಮಾರ ತಮ್ಮ ವಿಶೇಷ ಉಪನ್ಯಾಸ ಪಿ.ಪಿ.ಟಿ ಬಳಸುವುದರ ಮೂಲಕ ಮಾತನಾಡುತ್ತಾ ಮಾನಸಿಕ ಕಾಯಿಲೆ ಬರುವುದಕ್ಕೆ ಹಲವಾರು ಕಾರಣಗಳಿದ್ದು, ಒತ್ತಡ, ಜೀವನ ಶೈಲಿ, ಜೀವನದಲ್ಲಿ ಬರುವಂತಹ ಆಘಾತಕಾರಿ ಘಟನೆಗಳಿಂದ ಮಾನಸಿಕ ಕಾಯಿಲೆ ಉಂಟಾಗಬಹುದು. ಪ್ರಾರಂಭಿಕ ಹಂತದಲ್ಲಿ ಈ ರೋಗ ಗುರುತಿಸಿ ವೈದ್ಯಕೀಯ ಸಹಾಯ ಪಡೆದು ಆಪ್ತಸಮಾಲೋಚನೆ ಸೇರಿದಂತೆ ಔಷಧೋಪಚಾರ ಪಡೆದಲ್ಲಿ ಗುಣಪಡಿಸಬಹುದು. ಮಾದಕ ವಸ್ತುಗಳ ವ್ಯಸನ ಯುವಕರಲ್ಲಿ ಅತೀ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಇದರಿಂದ ದೈಹಿಕವಾಗಿ ದುಷ್ಪರಿಣಾಮ ಉಂಟಾಗುತ್ತದೆ. ಕರುಳಿನ ಕ್ಯಾನ್ಸರ್, ಜಾಂಡೀಸ್, ಜಠರ ಸಮಸ್ಯೆ ಇತ್ಯಾದಿ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಜತೆಗೆ ಮಾನಸಿಕವಾಗಿ ವ್ಯಕ್ತಿಯು ನಿಯಂತ್ರಣ ಕಳೆದುಕೊಳ್ಳುತ್ತಾನೆ. ಇದರಿಂದ ಮುಕ್ತ ಪಡೆಯಲು ಚಿಕಿತ್ಸೆ ಹಾಗೂ ಆಪ್ತಸಮಾಲೋಚನೆ ನೀಡಬಹುದು. ಅತೀ ಒತ್ತಡವೂ ಸಹ ವ್ಯಕ್ತಿಯನ್ನು ಮಾನಸಿಕ ರೋಗಕ್ಕೆ ತುತ್ತಾಗಿಸುತ್ತದೆ. ಒತ್ತಡದಿಂದ ಹೊರಬರಲು ಉತ್ತಮ ಜೀವನಶೈಲಿ, ಯೋಗ, ಧ್ಯಾನ, ವ್ಯಾಯಾಮಗಳಂತಹ ಅಭ್ಯಾಸ ರೂಢಿಸಿಕೊಳ್ಳುವುದು, ಉತ್ತಮ ಆಹಾರ ಪದ್ಧತಿ ಅಳವಡಿಸಿಕೊಳ್ಳುವುದು ಮತ್ತು ಇತರರೊಂದಿಗೆ ಸ್ನೇಹ ಸೌಹಾರ್ದತೆಯಲ್ಲಿ ಜೀವನ ನಡೆಸುವುದು ಹಾಗೂ ಒತ್ತಡದಿಂದ ವ್ಯಕ್ತಿಯನ್ನು ದೂರವಿರಿಸಲು ಅತೀ ಮುಖ್ಯವಾಗಿದೆ. ಮಾನಸಿಕ ಕಾಯಿಲೆಯ ಯಾವುದೇ ಲಕ್ಷಣಗಳು ಇದ್ದರೆ ಟೆಲಿ ಮನಸ್ ದೂರವಾಣಿ ಸಂಖ್ಯೆ 14416 ಗೆ ಕರೆ ಮಾಡಬಹುದು ಎಂದರು.

‎ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ ಸೇರಿದಂತೆ ಜಿಲ್ಲೆಯ ಎಲ್ಲ ವಸತಿ ನಿಲಯದ ಪಾಲಕರು ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಸಿಬ್ಬಂದಿಗಳು ಉಪಸ್ಥಿತರಿದ್ದರು. ಮನಃಶಾಸ್ತ್ರಜ್ಞ ಪುಷ್ಪಾ ಥೆರೇಸಾ ವಂದಿಸಿದರು.