ಸಾರಾಂಶ
ಪ್ರತಿಯೊಂದು ವಸ್ತು ಕೊಳ್ಳುವಾಗ ರಶೀದಿ ಹೊಂದಿರಬೇಕು. ಅಂದಾಗ ಮಾತ್ರ ನಿಮ್ಮ ಹಕ್ಕು ಚಲಾಯಿಸಲು ಅನುಕೂಲವಾಗುತ್ತದೆ. ಕೇವಲ ಜಾಹೀರಾತುಗಳಿಗೆ ಮಾರುಹೋಗಬಾರದು. ಇನ್ನೂ ಕೆಲವರು ಬಣ್ಣ ನಂಬಿಕೊಂಡು ಮೋಸ ಹೋಗುತ್ತಾರೆ.
ಯಲಬುರ್ಗಾ:
ಗ್ರಾಹಕರು ವಸ್ತು ಖರೀದಿಸುವಾಗ ಗುಣಮಟ್ಟ ಪರಿಶೀಲಿಸಬೇಕೆಂದು ಹಿರಿಯ ಸಿವಿಲ್ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶ ರಂಗಸ್ವಾಮಿ ಜೆ. ಹೇಳಿದರು.ಪಟ್ಟಣದ ಕಂದಾಯ ಭವನದಲ್ಲಿ ಶುಕ್ರವಾರ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಕಂದಾಯ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಾಗೂ ನಾನಾ ಇಲಾಖೆಗಳ ಸಹಯೋಗದಲ್ಲಿ ನಡೆದ ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಮೂಲಕ ಖರೀದಿ ಹೆಚ್ಚಾಗುತ್ತಿದ್ದು ಗ್ರಾಹಕರು ಜಾಗರೂಕತೆಯಿಂದ ವ್ಯವಹಾರ ಮಾಡಬೇಕು ಎಂದರು.
ಪ್ರತಿಯೊಂದು ವಸ್ತು ಕೊಳ್ಳುವಾಗ ರಶೀದಿ ಹೊಂದಿರಬೇಕು. ಅಂದಾಗ ಮಾತ್ರ ನಿಮ್ಮ ಹಕ್ಕು ಚಲಾಯಿಸಲು ಅನುಕೂಲವಾಗುತ್ತದೆ. ಕೇವಲ ಜಾಹೀರಾತುಗಳಿಗೆ ಮಾರುಹೋಗಬಾರದು. ಇನ್ನೂ ಕೆಲವರು ಬಣ್ಣ ನಂಬಿಕೊಂಡು ಮೋಸ ಹೋಗುತ್ತಾರೆ. ಆದರೆ, ಅದರ ಗುಣಲಕ್ಷಣ, ರುಚಿ ಗಮನಿಸದೆ ಖರೀದಿಸಿ ಮೋಸಕ್ಕೆ ಒಳಗಾಗುತ್ತಾರೆ. ಹೀಗಾಗಿ ಗ್ರಾಹಕರು ಯಾವುದೇ ವಸ್ತು ಖರೀದಿಸುವಾಗ ಎಚ್ಚರಿಕೆಯಿಂದ ವ್ಯವಹಾರ ಮಾಡಬೇಕು. ನಾವು ಎಲ್ಲಿಯ ವರೆಗೊ ಮೋಸ ಹೋಗುತ್ತೇವೆಯೋ, ಅಲ್ಲಿಯವರೆಗೆ ಮೋಸ ಮಾಡುವವರು ಇರುತ್ತಾರೆ ಎಂದು ಎಚ್ಚರಿಸಿದರು.ಕೆಲವಡೆ ಮೋರಿಯ ಕೊಳಚೆ ನೀರಿನಲ್ಲಿ ಸೊಪ್ಪು ಬೆಳೆದು ಮಾರಾಟ ಮಾಡುತ್ತಾರೆ. ಅವುಗಳನ್ನು ಬಳಿಸಿದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಹೇಳಿದರು.
ಅಪರ ಸರ್ಕಾರಿ ವಕೀಲ ಮಲ್ಲನಗೌಡ ಪಾಟೀಲ್ ಹಾಗೂ ವಕೀಲರಾದ ಎ.ಎಂ. ಪಾಟೀಲ ಮಾತನಾಡಿದರು. ತಹಸ್ಹೀಲ್ದಾರ್ ಬಸವರಾಜ ತೆನ್ನಳ್ಳಿ ಅಧ್ಯಕ್ಷತೆ ವಹಿಸಿದ್ದರು.ಈ ವೇಳೆ ಪಪಂ ಸದಸ್ಯೆ ರೇವಣೆಪ್ಪ ಹಿರೇಕುರಬರ, ಪಪಂ ಮುಖ್ಯಾಧಿಕಾರಿ ನಾಗೇಶ, ವಕೀಲರಾದ ಈರಣ್ಣ ಕೋಳೂರ, ಶಶಿಧರ ಶ್ಯಾಗೋಟಿ, ನ್ಯಾಯಾಂಗ ಇಲಾಖೆ ಶಿರಸ್ತೆದಾರ ಲೋಕೇಶ, ಆಹಾರ ಇಲಾಖೆ ಶಿರಸ್ತೆದಾರ ಮಲ್ಲಿಕಾರ್ಜುನ ಶಾಸ್ತ್ರಿಮಠ ಹಾಗೂ ಸಮಿತಿ ಸಿಬ್ಬಂದಿ ರಾಘವೇಂದ್ರ ಕೋಳಿಹಾಳ, ವಿನಾಯಕ ಇದ್ದರು.
ವಿದ್ಯಾರ್ಥಿನಿ ಸಾವಿತ್ರಿ ಆರೇರ ಪ್ರಾರ್ಥಿಸಿದರು. ಮಾರುತಿ ಸ್ವಾಗತಿಸಿದರು. ಬಸವರಾಜ ಅಂಗಡಿ ನಿರೂಪಿಸಿದರು. ಕಂದಾಯ ನಿರೀಕ್ಷಕ ಹಸನಸಾಬ ತಳಕಲ್ ವಂದಿಸಿದರು.