ಮಾಸಾಂತ್ಯದೊಳಗೆ ಜಿಲ್ಲೆ ರೈತರಿಗೆ ಬೆಳೆ ವಿಮೆ ಪಾವತಿಸಿ

| Published : Feb 09 2024, 01:47 AM IST

ಮಾಸಾಂತ್ಯದೊಳಗೆ ಜಿಲ್ಲೆ ರೈತರಿಗೆ ಬೆಳೆ ವಿಮೆ ಪಾವತಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ವಿಮಾಕಂಪನಿ ಹಾಗೂ ಕೃಷಿ ಅಧಿಕಾರಿಗಳ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಬೆಳೆ ವಿಮೆಗಾಗಿ ನೋಂದಾಯಿಸಿಕೊಂಡಿರುವ ರೈತರ ಖಾತೆಗೆ ಫೆಬ್ರವರಿ ಅಂತ್ಯದ ವೇಳೆಗೆ ನಿಯಮಾನುಸಾರ ಬೆಳೆವಿಮೆ ಪರಿಹಾರ ಹಣ ಜಮೆ ಮಾಡಬೇಕೆಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಖಡಕ್ ಸೂಚನೆ ನೀಡಿದರು.

ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ 2023-24ನೇ ಫಸಲ್ ಬಿಮಾ ಯೋಜನೆ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ವಿಚಾರದಲ್ಲಿ ಯಾವುದೇ ಸಬೂಬುಗಳ ಹೇಳುವಂತಿಲ್ಲ. ನಿಯಮಾನುಸಾರ ಕೃಷಿ ಹಾಗೂ ವಿಮಾ ಕಂಪನಿ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ತಾಕೀತು ಮಾಡಿದರು.

ಈಗಾಗಲೇ ಜಿಲ್ಲೆಯಾದ್ಯಂತ ಬೆಳೆ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ. ಕೇವಲ ದತ್ತಾಂಶಗಳ ಮರು ಪರಿಶೀಲನೆ ಮಾತ್ರ ಬಾಕಿ ಉಳಿದಿದೆ. ಈ ಕಾರ್ಯವನ್ನು 15 ದಿನದ ಒಳಗೆ ಪೂರ್ಣಗೊಳಿಸಿ ಅರ್ಹ ರೈತರ ಖಾತೆ ನೇರವಾಗಿ ಪರಿಹಾರದ ಹಣ ಜಮೆ ಮಾಡಬೇಕು. ಬೆಳೆ ವಿಮೆ ಪರಿಹಾರದ ಕಾರ್ಯ ಸಂಪೂರ್ಣ ಪಾರದರ್ಶಕವಾಗಿ ಇರಬೇಕು. ತಾಂತ್ರಿಕ ಕಾರಣಗಳಿಂದ ಬೆಳೆವಿಮೆ ಪರಿಹಾರದ ಹಣ ಬಿಡುಗಡೆ ಆಗದಿದ್ದರೆ, ಅಥವಾ ಕೆಲವು ರೈತರ ಖಾತೆಗೆ ಜಮೆ ಆಗದಿದ್ದರೆ ಈ ಕುರಿತು ಪ್ರತಿ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳಿಗೂ ಮಾಹಿತಿ ನೀಡಬೇಕು ಎಂದರು.

ಬರ ಆವರಿಸಿರುವುದರಿಂದ ರೈತರು ಬೆಳೆ ವಿಮೆ ಪರಿಹಾರ ನಿರೀಕ್ಷೆಯಲ್ಲಿದ್ದಾರೆ. ಈ ಬಗ್ಗೆ ರೈತರಲ್ಲಿ ಗೊಂದಲ ಮೂಡಿಸುವ ಪ್ರಯತ್ನ ಬೇಡ. ರೈತರು ಗೊಂದಲಕ್ಕೆ ಒಳಗಾಗದಂತೆ ತಿಳಿ ಹೇಳಬೇಕು. ಕೃಷಿ ವಿಮಾ ಕಂಪನಿಗಳು ಬೆಳೆ ಪರಿಹಾರದ ಕಾರ್ಯವನ್ನು ವ್ಯಾಪಾರೀಕರಣದ ದೃಷ್ಠಿಯಿಂದ ನೋಡಬಾರದು. ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಬೇಕು. ಪ್ರತಿ ತಾಲೂಕುಗಳಲ್ಲಿಯೂ ವಿಮಾ ಕಂಪನಿ ಪ್ರತಿನಿಧಿಗಳನ್ನು ನೇಮಕ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.

2023-24ನೇ ಸಾಲಿನಲ್ಲಿ ಜಿಲ್ಲೆಯ 2,59,486 ಎಕರೆ ಕೃಷಿ ಭೂಮಿಯ ಪೈಕಿ, 1,05,000 ಎಕೆರೆ ಪ್ರದೇಶಕ್ಕೆ 80,633 ರೈತರು ಬೆಳೆ ವಿಮೆ ನೋಂದಾವಣಿ ಮಾಡಿಸಿದ್ದಾರೆ. ಇದರಲ್ಲಿ ಶೇಂಗಾ 38,496, ಮುಸುಕಿ ಜೋಳ 27,396 , ತೊಗರಿ 4,109, ರಾಗಿ 2,719, ಸಾಮೆ 3,790, ಹೆಸರು 2,427, ಹತ್ತಿ 1,960, ಸೂರ್ಯಕಾಂತಿ 675, ಟೊಮ್ಯಾಟೊ ಬೆಳೆಗೆ 97, ಎಳ್ಳು 17, ಹುರುಳಿ 70, ನವಣೆ 376, ಸಜ್ಜೆ 51, ಕೆಂಪು ಮೆಣಸಿನಕಾಯಿಗೆ 61 ರೈತರು ಬೆಳೆ ವಿಮೆಗೆ ನೋಂದಾಯಿಸಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಸಭೆಯಲ್ಲಿ ಮಾಹಿತಿ ನೀಡಿದರು.

ರಾಜ್ಯದಲ್ಲಿ ಖಾಸಗಿ ಬೆಳೆ ವಿಮೆ ಕಂಪನಿಗಳು ರೈತರನ್ನು ಶೋಷಣೆ ಮಾಡುತ್ತಿವೆ. ಬೆಳೆ ವಿಮೆ ಕಟ್ಟಿಸಿಕೊಳ್ಳಲು ದಿನಾಂಕ ನಿಗದಿ ಮಾಡುವ ಕಂಪನಿಗಳು, ಸಕಾಲದಲ್ಲಿ ಬೆಳೆವಿಮೆಯ ಪರಿಹಾರದ ಮೊತ್ತವನ್ನು ಪಾವತಿಸಲು ದಿನಾಂಕ ನಿಗದಿ ಮಾಡುವುದಿಲ್ಲ. ರಾಜ್ಯದಲ್ಲಿ ಬರ ಘೋಷಣೆ ಆದ ತಕ್ಷಣ ಮಧ್ಯಂತರ ಪರಿಹಾರವನ್ನು ಬೆಳೆ ವಿಮೆ ಕಂಪನಿ ನೀಡಬೇಕಿತ್ತು. ವಿವಿಧ ಜಿಲ್ಲೆಗಳಲ್ಲಿ ಮಧ್ಯಂತರ ಪರಿಹಾರ ನೀಡಲಾಗಿದೆ. ಜಿಲ್ಲೆಯ ರೈತರಿಗೆ ಮಾತ್ರ ನೀಡಿಲ್ಲ. ಬೆಳೆವಿಮೆ ಕಂಪನಿಗಳು ನೋಂದಣಿ ಮಾಡಿರುವ ರೈತರಿಗೆ ಯಾವುದೇ ರೀತಿ ಬಾಂಡ್‍ಗಳನ್ನು ನೀಡುತ್ತಿಲ್ಲ. ಇತರೆ ಜೀವ ವಿಮೆ ಕಂಪನಿಗಳ ಮಾದರಿಯಲ್ಲಿ ಬೆಳೆವಿಮೆ ಬಾಂಡ್‍ಗಳನ್ನು ನೀಡಬೇಕು. ನೆರೆಯ ಆಂದ್ರ ಹಾಗೂ ತೆಲಂಗಾಣ ರಾಜ್ಯದಲ್ಲಿನ ಮಾದರಿಯಂತೆ ನಮ್ಮಲ್ಲಿಯೂ ಸರ್ಕಾರಿ ವಿಮಾ ಕಂಪನಿಗಳೇ ಬೆಳೆವಿಮೆಯನ್ನು ನೋಂದಾಯಿಸಿಕೊಳ್ಳುವಂತಾಗಬೇಕು ಎಂದು ರೈತ ಮುಖಂಡ ಕೆ.ಪಿ.ಭೂತಯ್ಯ ಸಭೆಯಲ್ಲಿ ಮನವಿ ಮಾಡಿಕೊಂಡರು.

ರಾಜ್ಯದ ಬೆಳೆವಿಮೆ ಪರಿಹಾರದ ಪದ್ಧತಿ ವಿಶ್ವದಲ್ಲೇ ಉತ್ತಮವಾದ ಪದ್ಧತಿ ಎಂದು ಮನ್ನಣೆ ಪಡೆದಿದೆ. ವಿದೇಶಗಳು ಕೂಡ ಈ ಪದ್ಧತಿ ಅಳವಡಿಸಿಕೊಳ್ಳಲು ಚಿಂತನೆ ನಡೆಸಿವೆ. ಫಸಲ್ ಬಿಮಾ ಯೋಜನೆ ಸಂಪೂರ್ಣ ಪಾರದರ್ಶವಾಗಿ ಕಾರ್ಯನಿರ್ವಹಿಸುತ್ತಿದೆ. ಕಳೆದ ಬಾರಿ 8 ತಿಂಗಳ ಒಳಗೆ ರೈತರ ಖಾತೆ ಪರಿಹಾರ ಧನ ಜಮೆ ಮಾಡಲಾಗಿದೆ. ಪೂರ್ಣ ಪ್ರಮಾಣದ ಪರಿಹಾರ ಧನವನ್ನು ಜಮೆ ಮಾಡಲು ಎಲ್ಲಾ ಸಿದ್ಧತೆ ಕೈಗೊಳ್ಳಲಾಗಿದೆ. ಎಂದು ಜಂಟಿ ನಿರ್ದೇಶಕ ಮಂಜುನಾಥ ಸ್ಪಷ್ಟನೆ ನೀಡಿದರು.

ಕೃಷಿ ಇಲಾಖೆ ಉಪನಿರ್ದೇಶಕ ಡಾ.ಶಿವಕುಮಾರ್, ನಬಾರ್ಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕಿ ಕವಿತಾ ಶಶಿಧರ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ರವಿಕುಮಾರ್, ಚಿತ್ರದುರ್ಗ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಶೇಖರ್, ವಿಮಾ ಕಂಪನಿ ಜಿಲ್ಲಾ ವ್ಯವಸ್ಥಾಪಕ ಹರ್ಷವರ್ಧನ್, ರೈತ ಮುಖಂಡರಾದ ಬೇಡರೆಡ್ಡಿ ಹಳ್ಳಿ ಬಸವರೆಡ್ಡಿ, ಶಿವರುದ್ರಪ್ಪ, ಹಂಪಯ್ಯನ ಮಾಳಿಗೆ ಧನಂಜಯ ಸಭೆಯಲ್ಲಿ ಉಪಸ್ಥಿತರಿದ್ದರು.